ADVERTISEMENT

ಆರೋಗ್ಯವಂತ ಸಮಾಜ ನಿರ್ಮಾಣ ಮಾಡಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2022, 15:17 IST
Last Updated 14 ಜನವರಿ 2022, 15:17 IST
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೋಟರಿ ಕ್ಲಬ್ ಮತ್ತು ರೋಟರಿ ಸೆಂಟ್ರಲ್ ಸಹಯೋಗದಲ್ಲಿ ಕೋಲಾರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೋಲಿಯೊ ಕಾರ್ಯಾಗಾರವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್‌ ಉದ್ಘಾಟಿಸಿದರು
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೋಟರಿ ಕ್ಲಬ್ ಮತ್ತು ರೋಟರಿ ಸೆಂಟ್ರಲ್ ಸಹಯೋಗದಲ್ಲಿ ಕೋಲಾರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೋಲಿಯೊ ಕಾರ್ಯಾಗಾರವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್‌ ಉದ್ಘಾಟಿಸಿದರು   

ಕೋಲಾರ: ‘ಜಿಲ್ಲೆಯಲ್ಲಿ ಪ್ರತಿ ಮಗುವಿಗೂ ಪೋಲಿಯೊ ಲಸಿಕೆ ಹಾಕಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್‌ ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೋಟರಿ ಕ್ಲಬ್ ಮತ್ತು ರೋಟರಿ ಸೆಂಟ್ರಲ್ ಸಹಯೋಗದಲ್ಲಿ ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೋಲಿಯೊ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ‘ಪೋಲಿಯೊ ನಿರ್ಮೂಲನೆಯಲ್ಲಿ ಭಾರತವು ಗಣನೀಯ ಪ್ರಗತಿ ಸಾಧಿಸಿದ್ದು 2014ರಲ್ಲೇ ಪೋಲಿಯೊ ಮುಕ್ತ ರಾಷ್ಟ್ರವಾಗಿದೆ’ ಎಂದು ತಿಳಿಸಿದರು.

‘ಭಾರತದಲ್ಲಿ 2011ರಿಂದ ಹೊಸದಾಗಿ ಯಾವುದೇ ಪೋಲಿಯೊ ಪ್ರಕರಣ ವರದಿಯಾಗಿಲ್ಲ. ಭಾರತವು ವಿಶ್ವ ಆರೋಗ್ಯ ಸಂಸ್ಥೆ ವತಿಯಿಂದ ಪೋಲಿಯೊ ಮುಕ್ತ ರಾಷ್ಟ್ರವೆಂಬ ಪ್ರಮಾಣಪತ್ರ ಪಡೆದಿದೆ. ‘ಕರ್ನಾಟಕದಲ್ಲಿ ಕೊನೆಯ ಪೋಲಿಯೊ ಪ್ರಕರಣ 2007ರಲ್ಲಿ ರಾಜ್ಯಕ್ಕೆ ವಲಸೆ ಬಂದಿದ್ದ ಗುಂಪಿನಲ್ಲಿ ಪತ್ತೆಯಾಗಿತ್ತು. ಆ ನಂತರ ಈವರೆಗೆ ಪೋಲಿಯೊ ಪ್ರಕರಣ ಪತ್ತೆಯಾಗಿಲ್ಲ’ ಎಂದು ವಿವರಿಸಿದರು.

ADVERTISEMENT

‘ಹಿಂದಿನ ಕಾಲದಲ್ಲಿ ಕಾಲರ, ಪ್ಲೇಗ್‌ನಂತಹ ಸಾಂಕ್ರಾಮಿಕ ಕಾಯಿಲೆ ಬರುತ್ತಿದ್ದವು. ಲಸಿಕೆ ಮೂಲಕ ಈ ಕಾಯಿಲೆಗಳನ್ನು ನಿಯಂತ್ರಿಸಲಾಗಿದೆ. ಪೋಲಿಯೊ ಸಮಸ್ಯೆ ಹೆಚ್ಚಾಗಿ ಚಿಕ್ಕ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಪೋಲಿಯೊ ಕಾಯಿಲೆಗೆ ತುತ್ತಾದ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ. ಮಕ್ಕಳ ಆರೋಗ್ಯಕರ ಬೆಳವಣಿಗೆ ಹಾಗೂ ಬಾಲ್ಯಾವಸ್ಥೆಯಲ್ಲಿ ಯಾವುದೇ ದೈಹಿಕ ನ್ಯೂನತೆ ಬಾರದಂತೆ ತಡೆಯಲು ಸರ್ಕಾರದ ವತಿಯಿಂದ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಲಾಗುತ್ತದೆ’ ಎಂದರು.

ರೋಟರಿ ಕ್ಲಬ್ ಜಿಲ್ಲಾ ಅಧ್ಯಕ್ಷ ರಾಮನಾಥ್‌, ಶ್ರೀನಿವಾಸಪುರ ರೋಟರಿ ಸೆಂಟ್ರಲ್ ಅಧ್ಯಕ್ಷ ವೈ.ವಿ.ವೆಂಕಟಾಚಲ, ರೋಟರಿ ವಲಯ ಗವರ್ನರ್ ಎಸ್.ವಿ.ಸುಧಾಕರ್, ಸಹಾಯಕ ಗವರ್ನರ್ ಎಚ್.ರಾಮಚಂದ್ರಪ್ಪ, ಕಾರ್ಯದರ್ಶಿ ಎಂ.ಎನ್‌.ರಾಮಚಂದ್ರೇಗೌಡ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.