ADVERTISEMENT

ಪ್ಯಾಕ್ಸ್‌ಗಳಿಗೆ ಬಂಪರ್‌ ಸಾಲ ಸೌಲಭ್ಯ

ನಬಾರ್ಡ್‌ ನೂತನ ಯೋಜನೆ: ವಿವಿಧೋದ್ದೇಶ ಸೇವಾ ಕೇಂದ್ರವಾಗಿ ಪರಿವರ್ತನೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2020, 7:49 IST
Last Updated 22 ಜುಲೈ 2020, 7:49 IST
ನಬಾರ್ಡ್
ನಬಾರ್ಡ್   

ಕೋಲಾರ: ನಬಾರ್ಡ್‌ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳನ್ನು (ಪ್ಯಾಕ್ಸ್‌) ವಿವಿಧೋದ್ದೇಶ ಸೇವಾ ಕೇಂದ್ರಗಳಾಗಿ ಪರಿವರ್ತಿಸಿ ಕೃಷಿಗೆ ಸಂಬಂಧಿಸಿದ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಒಂದೇ ಸೂರಿನಡಿ ಕಲ್ಪಿಸುವ ಯೋಜನೆಗೆ ಚಾಲನೆ ನೀಡಿದೆ.

ಈ ಯೋಜನೆಯಡಿ 2020–21ನೇ ಸಾಲಿಗೆ ದೇಶದ 35 ಸಾವಿರ ಕೃಷಿ ಪತ್ತಿನ ಸೊಸೈಟಿಗಳನ್ನು ಆಯ್ಕೆ ಮಾಡಿರುವ ನಬಾರ್ಡ್‌ ವಾಣಿಜ್ಯ ಬ್ಯಾಂಕ್‌ಗಳಿಗಿಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಕಲ್ಪಿಸಲಿದೆ. ರೈತರಿಗೆ ಅಗತ್ಯವಾದ ಕೃಷಿ ಸಂಬಂಧಿ ಸೌಲಭ್ಯವನ್ನು ಪ್ಯಾಕ್ಸ್‌ಗಳ ಮೂಲಕ ಏಕಗವಾಕ್ಷಿಯಡಿ ನೀಡುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ.

ಪ್ಯಾಕ್ಸ್‌ಗಳು ಮೂಲಕ ಆರಂಭಿಸಲು ಉದ್ದೇಶಿಸುವ ಕೃಷಿ ಯಂತ್ರೋಪಕರಣ ಸೇವೆ, ಬಿತ್ತನೆ ಬೀಜ ಉತ್ಪಾದನೆ ತಾಂತ್ರಿಕತೆ, ಕೃಷಿ ಉತ್ಪನ್ನಗಳ ಸಂಗ್ರಹಕ್ಕೆ ಗೋದಾಮು ನಿರ್ಮಾಣ, ಮಾರುಕಟ್ಟೆ ಸೌಲಭ್ಯ, ಸರಕು ಸಾಗಣೆ ವಾಹನ ಖರೀದಿ, ತೋಟಗಾರಿಕೆ ಬೆಳೆಗಳ ರಕ್ಷಣೆಗೆ ಶೈತ್ಯಾಗಾರ ಸೇರಿದಂತೆ ಅಗತ್ಯ ಸೇವೆಗಳಿಗೆ ನಬಾರ್ಡ್‌ ಸಾಲ ನೀಡಲಿದೆ. ಸಾಲ ಸೌಲಭ್ಯ ಪಡೆಯುವ ಪ್ಯಾಕ್ಸ್‌ಗಳು ಸೇವಾ ಕೇಂದ್ರಗಳಾಗಿ ಮಾರ್ಪಾಡಾಗಲಿವೆ.

ADVERTISEMENT

ಕೃಷಿ ಚಟುವಟಿಕೆ ಜತೆಗೆ ಪ್ಯಾಕ್ಸ್‌ಗಳು ಆರ್ಥಿಕವಾಗಿ ಲಾಭ ಗಳಿಸಲು ಅಗತ್ಯವಾದ ವ್ಯಾಕ್ಸಿಂಗ್, ಪಾಲಿಷಿಂಗ್, ಪ್ರೀಕೂಲಿಂಗ್ ಚೇಂಬರ್ಸ್, ಕೋಳಿ ಮಾಂಸದ ಫ್ಯಾಕಿಂಗ್, ಅಕ್ಕಿ ಗಿರಣಿ, ಫ್ಲೋರ್ ಮಿಲ್, ವಾಣಿಜ್ಯ ಸಮುಚ್ಚಯ, ಅಡುಗೆ ಅನಿಲ ಏಜೆನ್ಸಿ, ಪೆಟ್ರೋಲ್ ಬಂಕ್ ಆರಂಭಕ್ಕೆ ನಬಾರ್ಡ್‌ ಸಾಲ ನೀಡಲಿದೆ.

ಬಡ್ಡಿ ವಾಪಸ್‌: ಪ್ಯಾಕ್ಸ್‌ಗಳು ಆರಂಭಿಸಲು ಉದ್ದೇಶಿಸಿರುವ ಯೋಜನೆಯ ಅಂದಾಜು ವೆಚ್ಚದ ಸಂಬಂಧ ಕ್ರಿಯಾ ಯೋಜನೆ ರೂಪಿಸಿ ಡಿಸಿಸಿ ಬ್ಯಾಂಕ್‌ ಹಾಗೂ ರಾಜ್ಯ ಅಫೆಕ್ಸ್ ಬ್ಯಾಂಕ್‌ನ ಅನುಮೋದನೆ ಪಡೆದು ನಬಾರ್ಡ್‌ಗೆ ಸಲ್ಲಿಸಬೇಕು. ಬಳಿಕ ಯೋಜನೆಯ ಅಂದಾಜು ವೆಚ್ಚ ಆಧರಿಸಿ ನಬಾರ್ಡ್‌ ಹಣಕಾಸು ನೆರವು ನೀಡಲಿದೆ. ಯೋಜನೆ ಜಾರಿಗೆ ಆರಂಭಿಕವಾಗಿ ಪ್ಯಾಕ್ಸ್‌ಗಳಿಗೆ ಶೇ 10ರಷ್ಟು ಉಚಿತ ಹಣಕಾಸು ನೆರವು ಸಹ ಸಿಗಲಿದೆ.

ನಬಾರ್ಡ್ ಸಾಲಕ್ಕೆ ವಾರ್ಷಿಕ ಶೇ 4ರ ಬಡ್ಡಿ ದರ ನಿಗದಿಪಡಿಸಿದೆ. ಈ ಪೈಕಿ ಶೇ 3ರಷ್ಟು ಬಡ್ಡಿಯನ್ನು ಕೇಂದ್ರ ಸರ್ಕಾರ ವಾಪಸ್‌ ನೀಡಲಿದ್ದು, ಉಳಿಕೆ ಶೇ 1ರಷ್ಟು ಬಡ್ಡಿಯನ್ನು ಪ್ಯಾಕ್ಸ್‌ಗಳು ಭರಿಸಬೇಕು. ಸಾಲ ಮರು ಪಾವತಿಗೆ 7 ವರ್ಷಗಳ ಕಾಲಾವಕಾಶವಿದೆ. ನಬಾರ್ಡ್‌ನ ನೂತನ ಯೋಜನೆಯಿಂದ ಪ್ಯಾಕ್ಸ್‌ಗಳು ಪಡಿತರ ಮತ್ತು ಸಾಲ ವಿತರಣೆಗಷ್ಟೇ ಸೀಮಿತವಾಗದೆ ಆರ್ಥಿಕ ಚಟುವಟಿಕೆಗಳ ಮೂಲಕ ರೈತರ ಸೇವಾ ಕೇಂದ್ರಗಳಾಗಿ ಬದಲಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.