ADVERTISEMENT

ಅಭ್ಯರ್ಥಿ ಆಯ್ಕೆ ಕಗ್ಗಂಟು: ಟಿಕೆಟ್‌ಗೆ ಲಾಬಿ

ನಗರಸಭೆ ಚುನಾವಣೆ: ರಾಜಕೀಯ ಪಕ್ಷಗಳಿಗೆ ಅಗ್ನಿಪರೀಕ್ಷೆ

ಜೆ.ಆರ್.ಗಿರೀಶ್
Published 25 ಅಕ್ಟೋಬರ್ 2019, 11:44 IST
Last Updated 25 ಅಕ್ಟೋಬರ್ 2019, 11:44 IST
ಜಿ.ಕೆ.ವೆಂಕಟಶಿವಾರೆಡ್ಡಿ
ಜಿ.ಕೆ.ವೆಂಕಟಶಿವಾರೆಡ್ಡಿ   

ಕೋಲಾರ: ಜಿಲ್ಲೆಯ 3 ನಗರಸಭೆಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಪ್ರಮುಖ ಮೂರೂ ರಾಜಕೀಯ ಪಕ್ಷಗಳಲ್ಲಿ ಟಿಕೆಟ್‌ಗಾಗಿ ಲಾಬಿ ಶುರುವಾಗಿದೆ.

ಜಿಲ್ಲಾ ಕೇಂದ್ರ ಕೋಲಾರ, ಕೆಜಿಎಫ್‌ (ರಾಬರ್ಟ್‌ಸನ್‌ಪೇಟೆ) ಹಾಗೂ ಮುಳಬಾಗಿಲು ನಗರಸಭೆಗೆ ಚುನಾವಣೆ ನಡೆಯಲಿದ್ದು, ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಪಕ್ಷಗಳಲ್ಲಿ ಗೆಲ್ಲುವ ಅಭ್ಯರ್ಥಿಗಳಿಗಾಗಿ ಹುಡುಕಾಟ ಆರಂಭವಾಗಿದೆ.

ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿರುವ ಪಕ್ಷಗಳು ಶತಾಯಗತಾಯ ಅಧಿಕಾರದ ಚುಕ್ಕಾಣಿ ಹಿಡಿಯುವ ಪಣ ತೊಟ್ಟಿವೆ. ಮೂರೂ ಪಕ್ಷಗಳಲ್ಲಿ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದ್ದು, ಮುಖಂಡರಿಗೆ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದೆ.

ADVERTISEMENT

ಕೋಲಾರ ನಗರಸಭೆಯಲ್ಲಿ ಹಿಂದಿನ ಅವಧಿಯಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ತಲಾ ಎರಡೂವರೆ ವರ್ಷ ಅಧಿಕಾರ ಹಂಚಿಕೊಂಡಿದ್ದವು. ಮುಳಬಾಗಿಲು ನಗರಸಭೆಯಲ್ಲಿ ಪಕ್ಷೇತರ ಶಾಸಕ ಕೊತ್ತೂರು ಮಂಜುನಾಥ್‌ ಬಣವು 5 ವರ್ಷ ಅಧಿಕಾರ ನಡೆಸಿತ್ತು. ಕೆಜಿಎಫ್‌ನಲ್ಲಿ ಕೈ ಪಾಳಯ ಅಧಿಕಾರದ ಗದ್ದುಗೆ ಹಿಡಿದಿತ್ತು.

ಕಾಂಗ್ರೆಸ್‌ ಕೋಲಾರ ಹಾಗೂ ಕೆಜಿಎಫ್‌ ಜತೆಗೆ ಮುಳಬಾಗಿಲು ನಗರಸಭೆಯಲ್ಲೂ ಅಧಿಕಾರಕ್ಕೆ ಬರಲು ರಣತಂತ್ರ ರೂಪಿಸಿದೆ. ಜೆಡಿಎಸ್‌ ಹಾಗೂ ಬಿಜೆಪಿಯ ನಗರಸಭೆ ಮಾಜಿ ಸದಸ್ಯರನ್ನು ಪಕ್ಷಕ್ಕೆ ಸೆಳೆಯಲು ತೆರೆಮರೆಯಲ್ಲೇ ಪ್ರಯತ್ನ ಪಡೆದಿದೆ. ಈಗಾಗಲೇ ಕೋಲಾರದಲ್ಲಿ ನಗರಸಭೆಯ 8 ಮಂದಿ ಮಾಜಿ ಸದಸ್ಯರು ಜೆಡಿಎಸ್‌ ತೊರೆದು ಕೈ ಪಾಳಯಕ್ಕೆ ಜಿಗಿದಿದ್ದಾರೆ. ಕೆಜಿಎಫ್‌ನಲ್ಲೂ ವಿಪಕ್ಷಗಳ ಮುಖಂಡರನ್ನು ಕಾಂಗ್ರೆಸ್‌ಗೆ ಸೆಳೆಯುವ ಪ್ರಯತ್ನ ಸದ್ದಿಲ್ಲದೆ ನಡೆದಿದೆ.

ಮೈತ್ರಿಯಿಲ್ಲ: ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ನಗರಸಭೆ ಚುನಾವಣೆಯಲ್ಲಿ ಮೈತ್ರಿ ಇಲ್ಲದೆ ಪ್ರತ್ಯೇಕವಾಗಿ ಸ್ಪರ್ಧಿಸುವ ನಿರ್ಧಾರಕ್ಕೆ ಬಂದಿವೆ. ಲೋಕಸಭಾ ಚುನಾವಣಾ ಫಲಿತಾಂಶದಿಂದ ಪಾಠ ಕಲಿತಿರುವ ಉಭಯ ಪಕ್ಷಗಳ ಮುಖಂಡರು ಮೈತ್ರಿಯ ಮಾತು ಬಿಟ್ಟು ಚುನಾವಣೆಗೆ ಸಿದ್ಧರಾಗುತ್ತಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಸೋತು ಮುಖಭಂಗ ಅನುಭವಿಸಿರುವ ಕಾಂಗ್ರೆಸ್‌ನ ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ನಗರಸಭೆ ಚುನಾವಣೆಯಲ್ಲಿ ಪಕ್ಷದೊಳಗಿನ ಹಿತಶತ್ರುಗಳಿಗೆ ಹಾಗೂ ಬಿಜೆಪಿಗೆ ತಿರುಗೇಟು ಕೊಡಲು ಮೈಕೊಡವಿ ನಿಂತಿದ್ದಾರೆ.

ಗೆಲುವಿನ ಓಟ: ಲೋಕಸಭಾ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಗೆಲುವಿನ ಖಾತೆ ತೆರೆದಿರುವ ಬಿಜೆಪಿಯು ನಗರಸಭೆ ಚುನಾವಣೆಯಲ್ಲೂ ಗೆಲುವಿನ ಓಟ ಮುಂದುವರಿಸುವ ಉಮೇದಿನಲ್ಲಿದೆ. ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲೇ ಠಿಕಾಣಿ ಹೂಡಿರುವ ಸಂಸದ ಎಸ್‌.ಮುನಿಸ್ವಾಮಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಸಭೆಗಳ ಮೇಲೆ ಸಭೆ ನಡೆಸುತ್ತಿದ್ದಾರೆ. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಮೂರೂ ನಗರಸಭೆ ವ್ಯಾಪ್ತಿಯಲ್ಲಿ ಓಡಾಡಿ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಸ್ಥಳೀಯ ಮುಖಂಡರ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಪಡೆದು ನಾಮಪತ್ರ ತಿರಸ್ಕೃತಗೊಂಡ ಕಾರಣಕ್ಕೆ ಸ್ಪರ್ಧೆಯಿಂದ ವಂಚಿತರಾದ ಮಾಜಿ ಶಾಸಕ ಕೊತ್ತೂರು ಮಂಜುನಾಥ್‌ ಮುಳಬಾಗಿಲು ನಗರಸಭೆಯಲ್ಲಿ ತಮ್ಮ ಬಣದ ಆದಿಪತ್ಯ ಸ್ಥಾಪಿಸಲು ಕಸರತ್ತು ನಡೆಸಿದ್ದಾರೆ.

ಬಣ ರಾಜಕೀಯ: ಕೈ ಪಾಳಯದಲ್ಲಿ ಬಣ ರಾಜಕೀಯ ಮುಂದುವರಿದಿದ್ದು, ಕಾಂಗ್ರೆಸ್‌ನ ಸ್ಥಿತಿ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ. ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ ಬಣವು ಚುನಾವಣೆಯಿಂದ ಅಂತರ ಕಾಯ್ದುಕೊಂಡಿದೆ. ಮುನಿಯಪ್ಪರ ಬಣ ಹೆಚ್ಚು ಸಕ್ರಿಯವಾಗಿದ್ದು, ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ವರಿಷ್ಠರ ಮಟ್ಟದಲ್ಲಿ ಲಾಬಿ ನಡೆಸಿದೆ. ಪಕ್ಷದೊಳಗಿನ ಬಣ ರಾಜಕೀಯವು ಕಾಂಗ್ರೆಸ್‌ ಪಾಳಯಕ್ಕೆ ಮುಳುವಾಗುವ ಲಕ್ಷಣ ಗೋಚರಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.