ADVERTISEMENT

ವೃತ್ತಿ ಕೌಶಲ: ಆರ್ಥಿಕವಾಗಿ ಸಬಲ: ಹೆಚ್ಚುವರಿ ಜಿಲ್ಲಾಧಿಕಾರಿ ಶಿವಸ್ವಾಮಿ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 12:57 IST
Last Updated 29 ಫೆಬ್ರುವರಿ 2020, 12:57 IST
ಕೋಲಾರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಶಿವಸ್ವಾಮಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ತರಬೇತಿಯ ಪ್ರಮಾಣಪತ್ರ ವಿತರಿಸಿದರು.
ಕೋಲಾರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಶಿವಸ್ವಾಮಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ತರಬೇತಿಯ ಪ್ರಮಾಣಪತ್ರ ವಿತರಿಸಿದರು.   

ಕೋಲಾರ: ‘ವೃತ್ತಿ ಕೌಶಲ ಅಭಿವೃದ್ಧಿಯಿಂದ ಕಾರ್ಮಿಕರು ಆರ್ಥಿಕವಾಗಿ ಸಬಲರಾಗಬಹುದು. ಜತೆಗೆ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಶಿವಸ್ವಾಮಿ ಅಭಿಪ್ರಾಯಪಟ್ಟರು.

ಜಿಲ್ಲಾ ನಿರ್ಮಿತಿ ಕೇಂದ್ರವು ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗಾರೆ ಮತ್ತು ಪೇಂಟಿಂಗ್‌ ತರಬೇತಿ ಪಡೆದ ಫಲಾನುಭವಿಗಳಿಗೆ ಚೆಕ್, ಪ್ರಮಾಣಪತ್ರ ಹಾಗೂ ಸಲಕರಣೆ ಪೆಟ್ಟಿಗೆ ವಿತರಿಸಿ ಮಾತನಾಡಿ, ‘ಜೀವನ ರೂಪಿಸಿಕೊಳ್ಳಲು ಅನೇಕ ಮಾರ್ಗಗಳಿವೆ. ಆದರೆ, ಕಾರ್ಮಿಕರು ಧೈರ್ಯವಾಗಿ ಮುಂದೆ ಬರಬೇಕು’ ಎಂದು ಸಲಹೆ ನೀಡಿದರು.

‘ದೇಶದ ಕಾರ್ಮಿಕರು ಜಿಡಿಪಿ ವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಯಾವುದೇ ಕೆಲಸವನ್ನು ಇಷ್ಟದಿಂದ ಮಾಡಿದರೆ ಯಶಸ್ಸು ಕಾಣಬಹುದು. ಗಾರೆ, ಪೇಂಟಿಂಗ್‌ ಕೆಲಸ ಕಷ್ಟವೆನಿಸುತ್ತದೆ. ಈ ಮನೋಭಾವ ಬಿಡಬೇಕು. ಒಬ್ಬರ ಕೈಕೆಳಗೆ ಕೆಲಸ ಮಾಡುವ ಬದಲು ಕಾರ್ಮಿಕರೇ ಮೇಸ್ತ್ರಿಗಳಾಗಿ’ ಎಂದು ಕಿವಿಮಾತು ಹೇಳಿದರು.

ADVERTISEMENT

‘ಕಾರ್ಮಿಕರು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಸೂಕ್ತ ತರಬೇತಿ ನೀಡಿದರೆ ವೃತ್ತಿಪರರಾಗಿ ಹೊರ ಹೊಮ್ಮುತ್ತಾರೆ. ತರಬೇತಿಯಿಂದ ವೃತ್ತಿ ಕೌಶಲ ವೃದ್ಧಿಯಾಗಿ ಕೆಲಸದಲ್ಲಿ ಹೆಚ್ಚಿನ ಸಂಭಾವನೆ ಪಡೆದು ಆರ್ಥಿಕವಾಗಿ ಸದೃಢರಾಗಬಹುದು. ಕಾರ್ಮಿಕರ ಕೊಡುಗೆ ಆಧಾರದ ಮೇಲೆ ಸರ್ಕಾರ ಅನೇಕ ಯೋಜನೆ ಜಾರಿಗೊಳಿಸಿದ್ದು, ಇದರ ಪ್ರಯೋಜನ ಪಡೆಯಬೇಕು’ ಎಂದರು.

ವಂಚಿತ: ‘ಕಾರ್ಮಿಕರ ಸಬಲೀಕರಣಕ್ಕಾಗಿ ತರಬೇತಿ, ಸಲಕರಣೆ ವಿತರಿಸಲಾಗುತ್ತಿದ್ದು, ಇದರ ಪ್ರಯೋಜನ ಪಡೆಯಿರಿ. ಸಾಕಷ್ಟು ಕಾರ್ಮಿಕರಿಗೆ ಸರ್ಕಾರದ ಸವಲತ್ತುಗಳ ಮಾಹಿತಿಯಿಲ್ಲ. ಹೀಗಾಗಿ ಅವರು ಸವಲತ್ತುಗಳಿಂದ ವಂಚಿತರಾಗುತ್ತಿದ್ದಾರೆ’ ಎಂದು ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಕೆ.ಎನ್.ನಾರಾಯಣಗೌಡ ಕಳವಳ ವ್ಯಕ್ತಪಡಿಸಿದರು.

‘ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಪದವಿ ಹಾಗೂ ಇತರೆ ಶಿಕ್ಷಣ ಪಡೆದವರು ಶೈಕ್ಷಣಿಕ ದಾಖಲೆಪತ್ರ ತೋರಿಸಿ ಉದ್ಯೋಗ ಪಡೆಯುತ್ತಿದ್ದಾರೆ. ಆದರೆ, ಕಾರ್ಮಿಕರಿಗೆ ತಮ್ಮ ಸಾಮರ್ಥ್ಯ ತೋರಿಸಲು ಯಾವುದೇ ದಾಖಲೆಪತ್ರವಿಲ್ಲ. ಉನ್ನತ ಹಾಗೂ ಉತ್ತಮ ವಿಧಾನಗಳಲ್ಲಿ ಕೌಶಲ ತರಬೇತಿ ಪಡೆಯುವುದರಿಂದ ಉದ್ಯೋಗಾವಕಾಶ ಸಿಗುತ್ತದೆ’ ಎಂದು ತಿಳಿಸಿದರು.

‘ಕಟ್ಟಡ ಕಾರ್ಮಿಕರು ಕೆಲಸ ಮಾಡುವಾಗ ತೊಂದರೆಗೆ ಒಳಗಾದರೆ ಸರ್ಕಾರವೇ ಅವರ ಚಿಕಿತ್ಸಾ ವೆಚ್ಚ ಭರಿಸುವುದರ ಜತೆಗೆ ಸಹಾಯಧನ ನೀಡುತ್ತಿದೆ. ಈ ಸವಲತ್ತು ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಅನರ್ಹರು ಗುರುತಿನ ಚೀಟಿ ಪಡೆದುಕೊಳ್ಳಬೇಕು’ ಎಂದು ಹೇಳಿದರು.

ಪರಿಹಾರ: ‘ಕಾರ್ಮಿಕರ ಸಬಲೀಕರಣಕ್ಕಾಗಿ ಇಲಾಖೆ ಜಾರಿಗೆ ತಂದಿರುವ ಯೋಜನೆಗಳನ್ನು ಅರ್ಹರಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಕಟ್ಟಡ ಕಾರ್ಮಿಕರು ಕೆಲಸ ಮಾಡುವಾಗ ಆಕಸ್ಮಿಕವಾಗಿ ಮೃತಪಟ್ಟರೆ ಪರಿಹಾರ ನೀಡಲಾಗುತ್ತದೆ. ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ, ಆರೋಗ್ಯ ಭತ್ಯೆ ಕಲ್ಪಿಸಲಾಗುತ್ತಿದೆ’ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಕಾಂತ್ ಬಿ.ಪಾಟೀಲ್ ಮಾಹಿತಿ ನೀಡಿದರು.

ತರಬೇತಿ ಪಡೆದ ಕಾರ್ಮಿಕರಿಗೆ ಸಲಕರಣೆ ಕಿಟ್‌, ಸಹಾಯಧನದ ಚೆಕ್ ಮತ್ತು ಪ್ರಮಾಣಪತ್ರ ವಿತರಿಸಲಾಯಿತು. ಜಿಲ್ಲಾ ನಿರ್ಮಿತಿ ಕೇಂದ್ರದ ತರಬೇತಿ ವ್ಯವಸ್ಥಾಪಕಿ ವಿ.ಸಿ.ಶ್ರುತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.