ADVERTISEMENT

ಸಿ.ಡಿ ಸೃಷ್ಟಿ: ಸಂಸದರ ಕುತಂತ್ರ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2020, 14:57 IST
Last Updated 8 ನವೆಂಬರ್ 2020, 14:57 IST

ಕೋಲಾರ: ‘ಮಾಲೂರು ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆ ಹಿನ್ನೆಲೆಯಲ್ಲಿ ನಾನು ಬಿಜೆಪಿ ಸದಸ್ಯರಿಗೆ ಹಣದ ಆಮಿಷವೊಡ್ಡಿಲ್ಲ. ಆದರೆ, ಬಿಜೆಪಿ ಮುಖಂಡರು ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಾನು ಬಿಜೆಪಿ ಸದಸ್ಯರಿಗೆ ಕರೆ ಮಾಡಿ ಹಣಕಾಸಿನ ಸಂಬಂಧ ಸಂಭಾಷಣೆ ನಡೆಸಿರುವುದಾಗಿ ಬಿಜೆಪಿ ಮುಖಂಡರು ನಕಲಿ ಸಿ.ಡಿ ಸೃಷ್ಟಿಸಿದ್ದಾರೆ. ಆ ಸಿ.ಡಿಯಲ್ಲಿರುವ ಧ್ವನಿ ಮುದ್ರಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಆ ಧ್ವನಿ ನನ್ನದಲ್ಲ’ ಎಂದರು.

‘ಚುನಾವಣೆ ವಿಚಾರವಾಗಿ ಕೆಲ ಪಕ್ಷೇತರ ಸದಸ್ಯರೊಂದಿಗೆ ನಾನು ಮಾತನಾಡಿರುವುದು ನಿಜ. ಆದರೆ, ಅವರಿಗೆ ಹಣದ ಆಮಿಷವೊಡ್ಡಿಲ್ಲ. ಬಿಜೆಪಿ ಸದಸ್ಯರಿಗೆ ಕರೆ ಸಹ ಮಾಡಿಲ್ಲ. ಸಂಸದರು ಹಾಗೂ ಅವರ ಬೆಂಬಲಿಗ ಪಡೆಯು ಹತಾಶೆಯಿಂದ ಸಿ.ಡಿ ಸೃಷ್ಟಿಯ ಕುತಂತ್ರ ಮಾಡಿದೆ’ ಎಂದು ಟೀಕಿಸಿದರು.

ADVERTISEMENT

‘ಧ್ವನಿ ಅನುಕರಣೆ (ಮಿಮಿಕ್ರಿ) ಮಾಡುವುದರಲ್ಲಿ ನಿಸ್ಸೀಮರಾದ ಬಿಜೆಪಿ ಮುಖಂಡರೇ ನನ್ನ ಧ್ವನಿ ಅನುಕರಿಸಿ ನಕಲಿ ಸಿ.ಡಿ ಸೃಷ್ಟಿಸಿದ್ದಾರೆ. ಸಿ.ಡಿಯಲ್ಲಿರುವ ಧ್ವನಿ ನನ್ನದೆಂದು ಸಾಬೀತುಪಡಿಸಿದರೆ ಆ ಕ್ಷಣವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಬಿಜೆಪಿ ನನ್ನ ವಿರುದ್ಧ ಮಾಡಿರುವ ಆಮಿಷದ ಆರೋಪ ಸುಳ್ಳಾದರೆ ಸಂಸದರು ರಾಜೀನಾಮೆ ಕೊಡಲು ಸಿದ್ಧರೆ?’ ಎಂದು ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.