ADVERTISEMENT

ಕೋಲಾರ ಜಿಲ್ಲೆಯಲ್ಲಿ ಕಳೆಗಟ್ಟಿದ ಬೆಳಕಿನ ಹಬ್ಬ

ಬಾನಂಗಳದಲ್ಲಿ ಬಾಣ ಬಿರುಸುಗಳ ಚಿತ್ತಾರ: ಮಕ್ಕಳ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2021, 12:23 IST
Last Updated 4 ನವೆಂಬರ್ 2021, 12:23 IST
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕೋಲಾರದ ಕೆಇಬಿ ಗಣಪತಿ ದೇವಸ್ಥಾನದಲ್ಲಿ ಮಹಿಳೆಯರು ಗುರುವಾರ ಕಜ್ಜಾಯ, ನೋಮು ದಾರಗಳೊಂದಿಗೆ ಪೂಜೆ ಸಲ್ಲಿಸಿದರು
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕೋಲಾರದ ಕೆಇಬಿ ಗಣಪತಿ ದೇವಸ್ಥಾನದಲ್ಲಿ ಮಹಿಳೆಯರು ಗುರುವಾರ ಕಜ್ಜಾಯ, ನೋಮು ದಾರಗಳೊಂದಿಗೆ ಪೂಜೆ ಸಲ್ಲಿಸಿದರು   

ಕೋಲಾರ: ಜಿಲ್ಲೆಯಾದ್ಯಂತ ಗುರುವಾರ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಕಳೆಗಟ್ಟಿತು. ನೋಮು ಹಬ್ಬ (ನೋಮುಲ ಪಂಡಗ) ಎಂದೇ ಹೆಸರಾಗಿರುವ ದೀಪಾವಳಿಯನ್ನು ಎಲ್ಲೆಡೆ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಸಾಂಪ್ರದಾಯಿಕ ಪಟಾಕಿ ನಿಷೇಧದ ನಡುವೆಯೂ ಹಸಿರು ಪಟಾಕಿಗಳ ಸದ್ದು ಮೊಳಗಿತು. ಮಕ್ಕಳು, ಪುರುಷರು ಕೈಯಲ್ಲಿ ನೋಮುದಾರ ಕಟ್ಟಿಕೊಂಡು ಸಂಭ್ರಮಿಸಿದರು. ಮಹಿಳೆಯರು ಮನೆಗಳ ಮುಂದೆ ದೀಪಗಳ ಸಾಲು ಇಟ್ಟು ದೀಪಾವಳಿಯನ್ನು ಬೆಳಕಿನ ಹಬ್ಬವಾಗಿ ಆಚರಿಸಿದರು.

ಹಬ್ಬದ ಹಿನ್ನೆಲೆಯಲ್ಲಿ ಗ್ರಾಹಕರು ಪೂಜಾ ಸಾಮಗ್ರಿ ಖರೀದಿಸಲು ಮಾರುಕಟ್ಟೆಗಳಿಗೆ ಮುಗಿಬಿದ್ದರು. ವಸ್ತುಗಳ ಬೆಲೆ ಏರಿಕೆ ನಡುವೆಯೂ ಮಾರುಕಟ್ಟೆಯಲ್ಲಿ ವಹಿವಾಟು ಜೋರಾಗಿತ್ತು. ಹಳೆ ಬಸ್‌ನಿಲ್ದಾಣ, ಎಂ.ಜಿ.ರಸ್ತೆ, ಹೊಸ ಬಸ್‌ ನಿಲ್ದಾಣ, ದೊಡ್ಡಪೇಟೆ, ವಾಸವಿ ದೇವಸ್ಥಾನ ರಸ್ತೆ, ಕಾಳಮ್ಮ ಗುಡಿ ರಸ್ತೆ, ಅಮ್ಮವಾರಿಪೇಟೆ ಸೇರಿದಂತೆ ಪ್ರಮುಖ ವಾಣಿಜ್ಯ ಸ್ಥಳಗಳ ಸುತ್ತಮುತ್ತ ಹೆಚ್ಚಿನ ಜನಜಂಗುಳಿ ಕಂಡುಬಂತು.

ADVERTISEMENT

ಹಣ್ಣು, ತರಕಾರಿ, ದಿನಸಿ, ಬಟ್ಟೆ ಹಾಗೂ ಸಿಹಿ ತಿನಿಸು ಅಂಗಡಿಗಳು ಗ್ರಾಹಕರಿಂದ ತುಂಬಿ ಹೋಗಿದ್ದವು. ಪ್ರಮುಖ ರಸ್ತೆಗಳ ಬದಿಯಲ್ಲಿ ಹಾಗೂ ಪಾದಚಾರಿ ಮಾರ್ಗದಲ್ಲಿ ವರ್ತಕರು ಹೂವು, ಹಣ್ಣು, ಬಾಳೆಕಂದು, ಬಿದಿರಿನ ಮೊರ, ನೋಮು ದಾರ, ಮಾವಿನ ಸೊಪ್ಪು ಮಾರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೆಲ ವ್ಯಾಪಾರಿಗಳು ತಳ್ಳುಗಾಡಿಗಳಲ್ಲಿ ಹಬ್ಬದ ಸಾಮಗ್ರಿಗಳನ್ನು ಮಾರುತ್ತಿದ್ದ ದೃಶ್ಯ ಬಡಾವಣೆಗಳಲ್ಲಿ ಕಂಡುಬಂತು.

ಟಿ.ಚನ್ನಯ್ಯ ರಂಗಮಂದಿರ ಮುಂಭಾಗದ ರಸ್ತೆ ಬದಿಯ ಹಣ್ಣಿನ ಅಂಗಡಿಗಳು ಹಾಗೂ ಜೂನಿಯರ್‌ ಕಾಲೇಜು ಮೈದಾನದಲ್ಲಿನ ಪಟಾಕಿ ಅಂಗಡಿಗಳು ಗ್ರಾಹಕರಿಂದ ಗಿಜಿಗುಡುತ್ತಿದ್ದವು. ಹೂವು, ಹಣ್ಣಿನ ಜತೆಗೆ ದಿನಸಿ ಪದಾರ್ಥಗಳ ಬೆಲೆಗಳು ಏರಿಕೆಯಾಗಿದ್ದವು. ಪೂಜಾ ಸಾಮಗ್ರಿಗಳ ಖರೀದಿಗಾಗಿ ಮಾರುಕಟ್ಟೆಗೆ ಬಂದಿದ್ದ ಗ್ರಾಹಕರಿಗೆ ವಸ್ತುಗಳ ಬೆಲೆ ಏರಿಕೆ ಬಿಸಿ ತಟ್ಟಿತು.

ದೇವಸ್ಥಾನ ಹಾಗೂ ಅಂಗಡಿ ಮುಂಗಟ್ಟುಗಳಿಗೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು. ಮನೆ ಅಂಗಳದಲ್ಲಿ ಮಹಿಳೆಯರು ಬಣ್ಣ ಬಣ್ಣದ ರಂಗೋಲಿ ಬಿಡಿಸಿದ್ದರು. ಬಾಗಿಲಿಗೆ ತಳಿರು ತೋರಣ ಕಟ್ಟಿ ಸಿಂಗರಿಸಿದ್ದರು.

ಬಾಗಿನದ ವಾಡಿಕೆ: ದೀಪಾವಳಿ ದಿನ ಕಜ್ಜಾಯ ಮತ್ತು ಬಾಗಿನವನ್ನು ದೇವಾಲಯಗಳಿಗೆ ತೆಗೆದುಕೊಂಡು ಹೋಗುವುದು ವಾಡಿಕೆ. ದೀಪಾವಳಿಯ ಮೊದಲ ದಿನವಾದ ಬುಧವಾರ (ನ.3) ಮಹಿಳೆಯರು ಕಜ್ಜಾಯ ತಯಾರಿಸಲು ಮೀಸಲಿಟ್ಟ ಅಕ್ಕಿಯ ಪಾತ್ರೆಗೆ ನೀರು ತುಂಬಿಸುವ ಹಬ್ಬ ಆಚರಿಸಿದ್ದರು. ಅಮಾವಾಸ್ಯೆ ದಿನವಾದ ಗುರುವಾರ ಬೆಲ್ಲದ ಪಾಕ ಎತ್ತಿ, ಕಜ್ಜಾಯ ತಯಾರಿಸಿದರು.

ಸಂಪ್ರದಾಯದಂತೆ ಹೊಸ ಪಾತ್ರೆಗಳಲ್ಲಿ ನಿರ್ದಿಷ್ಟ ಸಂಖ್ಯೆಯ ಕಜ್ಜಾಯಗಳನ್ನು ತುಂಬಿಸಿ ಬಿದಿರಿನ ಮೊರದಲ್ಲಿ ಇಟ್ಟು ಬಣ್ಣ ಬಣ್ಣದ ನೋಮುದಾರಗಳ ಸಮೇತ ದೇವಾಲಯಕ್ಕೆ ಕೊಂಡೊಯ್ದರು. ಈ ಆಚರಣೆಗೆ ಗ್ರಾಮೀಣ ಭಾಷೆಯಲ್ಲಿ ನೋಮುವುದು ಎಂದೇ ಕರೆಯಲಾಗುತ್ತದೆ. ದೇವಸ್ಥಾನಗಳಲ್ಲಿ ಗೌರಿ ಕಳಶ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿ ಕೇದಾರೇಶ್ವರ ವ್ರತ ಆಚರಿಸಲಾಯಿತು. ಅರ್ಚಕರು ಕೇದಾರೇಶ್ವರ ವ್ರತದ ಮಹತ್ವ ಓದಿ ಹೇಳಿದರು.

ನೋಮುದಾರ ಪೂಜೆ: ದೇವಾಲಯಗಳಲ್ಲಿ ಹಳೆ ನೋಮುದಾರಗಳನ್ನು ಪಡೆದುಕೊಂಡು ಹೊಸ ದಾರಗಳಿಗೆ ಪೂಜೆ ಸಲ್ಲಿಸಲಾಯಿತು. ಭಕ್ತರು ಹೊಸ ನೋಮುದಾರಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಪೂಜೆ ಮಾಡಿ ಕುಟುಂಬದ ಹಿರಿಯ ಸದಸ್ಯರಿಂದ ಕೈಗೆ ಕಟ್ಟಿಸಿಕೊಂಡರು. ಮತ್ತೆ ಕೆಲವರು ದೇವಾಲಯಗಳಲ್ಲೇ ಹಿರಿಯರಿಂದ ನೋಮುದಾರ ಕಟ್ಟಿಸಿಕೊಂಡರು.

ಮನೆಗಳಲ್ಲಿ ಭಕ್ತಿ ಭಾವದಿಂದ ಗೌರಿ ಪೂಜೆ ನೆರವೇರಿಸಿ ಮಹಿಳೆಯರಿಗೆ ಬಾಗಿನ ಕೊಡಲಾಯಿತು. ವ್ಯಾಪಾರಿಗಳು ಅಂಗಡಿಗಳಲ್ಲಿ ಲಕ್ಷ್ಮೀ ಪೂಜೆ ನೆರವೇರಿಸಿದರು. ಹೊಸ ಬಟ್ಟೆ ತೊಟ್ಟಿದ್ದ ಮಕ್ಕಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕತ್ತಲಾಗುತ್ತಿದ್ದಂತೆ ಪಟಾಕಿಗಳ ಶಬ್ಧ ಮೇರೆ ಮೀರಿತ್ತು. ಬಾಣ ಬಿರುಸುಗಳು ಬಾನಂಗಳದಲ್ಲಿ ಬಣ್ಣದ ಚಿತ್ತಾರ ಬಿಡಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.