ADVERTISEMENT

‘ಕೋಡಿಹಳ್ಳಿ ಹಸಿರು ಶಾಲು ಹಾಕಬಾರದು’

ರೈತ ಸಂಘ–ಹಸಿರು ಸೇನೆ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶಿವಪ್ಪ ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಮೇ 2022, 12:46 IST
Last Updated 27 ಮೇ 2022, 12:46 IST
ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಬ್ಬಣಿ ಶಿವಪ್ಪ ಕೋಲಾರದಲ್ಲಿ ಶುಕ್ರವಾರ ‍ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು
ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಬ್ಬಣಿ ಶಿವಪ್ಪ ಕೋಲಾರದಲ್ಲಿ ಶುಕ್ರವಾರ ‍ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು   

ಕೋಲಾರ: ‘ರೈತ ಸಂಘದ ನಾಯಕನೆಂದು ಹೇಳಿಕೊಳ್ಳುವ ಕೋಡಿಹಳ್ಳಿ ಚಂದ್ರಶೇಖರ್ ತಮ್ಮ ವಿರುದ್ಧದ ಬಹುಕೋಟಿ ಲಂಚ ಆರೋಪದಿಂದ ಮುಕ್ತವಾಗುವವರೆಗೂ ಹಸಿರು ಶಾಲು ಹಾಕಬಾರದು. ಜತೆಗೆ ರೈತ ಸಂಘಕ್ಕೆ ರಾಜೀನಾಮೆ ಕೊಟ್ಟು ಸಾರ್ವಜನಿಕ ಜೀವನದಿಂದ ದೂರವಿರಬೇಕು’ ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಬ್ಬಣಿ ಶಿವಪ್ಪ ಆಗ್ರಹಿಸಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕೋಡಿಹಳ್ಳಿ ಚಂದ್ರಶೇಖರ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡದಿದ್ದರೆ ಅವರ ಪ್ರತಿ ಕಾರ್ಯಕ್ರಮಕ್ಕೂ ಮುತ್ತಿಗೆ ಹಾಕುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ರಾಜ್ಯದಲ್ಲಿ ಹಿಂದಿನ ವರ್ಷ ನಡೆದ ಸಾರಿಗೆ ನೌಕರರ ಮುಷ್ಕರದ ಪರವಾಗಿ ನಿಂತಿದ್ದ ಕೋಡಿಹಳ್ಳಿ ಚಂದ್ರಶೇಖರ್‌ ಮುಷ್ಕರ ನಿಲ್ಲಿಸಲು ₹ 35 ಕೋಟಿ ಲಂಚ ಪಡೆದು ನೌಕರರಿಗೆ ಮತ್ತು ರೈತ ಸಮುದಾಯಕ್ಕೆ ದ್ರೋಹ ಬಗೆದಿದ್ದಾರೆ. ಅವರಿಗೆ ರೈತರ ಹೆಸರು ಹೇಳುವುದಕ್ಕೂ ಯೋಗ್ಯತೆಯಿಲ್ಲ’ ಎಂದು ಗುಡುಗಿದರು.

ADVERTISEMENT

‘ಹಣಕ್ಕಾಗಿ ಮಾತ್ರ ಹೋರಾಟ ಮಾಡುವ ಕೋಡಿಹಳ್ಳಿ ಚಂದ್ರಶೇಖರ್‌ ಸಾವಿರಾರು ಸಾರಿಗೆ ನೌಕರರು ಬೀದಿಗೆ ಬೀಳುವಂತೆ ಮಾಡಿದರು. ಅಲ್ಲದೇ, ಸಾರಿಗೆ ನಿಗಮಗಳ ಹಲವು ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಳ್ಳಲು ನೇರ ಕಾರಣರಾದರು. ಅವರು ಆರಂಭದಲ್ಲಿ ರಸ್ತೆ ಸಾರಿಗೆ ನೌಕರರ ಸಂಘದ ಗೌರವಾಧ್ಯಕ್ಷನಾಗಿ ನೇತೃತ್ವ ವಹಿಸಿಕೊಂಡು ಭ್ರಷ್ಟಾಚಾರ ಮಾಡಿದ್ದಾರೆ’ ಎಂದು ಆರೋಪಿಸಿದರು.

ಅವಮಾನ: ‘ಸಾರಿಗೆ ನೌಕರರಿಗೂ ಕೋಡಿಹಳ್ಳಿ ಚಂದ್ರಶೇಖರ್‌ಗೂ ಯಾವುದೇ ಸಂಬಂಧವಿಲ್ಲ. ಆದರೂ ಹಣಕ್ಕಾಗಿ ಹೋರಾಟದ ನೇತೃತ್ವ ವಹಿಸಿಕೊಂಡಿದ್ದರು. ಕೃಷಿ ತಿದ್ದುಪಡಿ ಕಾಯ್ದೆಗಳ ವಿರೋಧಿಸಿ ದೆಹಲಿ ಗಡಿಯಲ್ಲಿ ನಡೆದ ಹೋರಾಟ ಸ್ಥಗಿತಗೊಳಿಸಲು ಕೋಡಿಹಳ್ಳಿ ಚಂದ್ರಶೇಖರ್‌ ಲಂಚ ಕೇಳಿರುವುದು ಸುದ್ದಿ ವಾಹಿನಿಯ ಕುಟುಕು ಕಾರ್ಯಾಚರಣೆಯಲ್ಲಿ ಬಯಲಾಗಿದೆ. ಅವರು ರೈತ ಸಂಘದ ಮುಂಚೂಣಿ ನಾಯಕನಾಗಿ ರೈತ ಸಮುದಾಯಕ್ಕೆ ಮತ್ತು ಹಸಿರು ಶಾಲುಗಳಿಗೆ ಅವಮಾನ ಮಾಡಿದ್ದಾರೆ’ ಎಂದು ಕಿಡಿಕಾರಿದರು.

‘ಕೋಡಿಹಳ್ಳಿ ಚಂದ್ರಶೇಖರ್ ಹೋರಾಟ ಆರಂಭಿಸುತ್ತಾರೆ. ಆದರೆ, ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದಿಲ್ಲ. ಅವರದು ಬರೀ ಲಂಚದ ಹೋರಾಟಗಳಾಗಿವೆ. ನಾವು ಸಾಮಾಜಿಕ ಕಳಕಳಿಯಿಂದ ಹಸಿರು ಶಾಲು ಹಾಕಿಕೊಂಡು ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ ಮಾಡುತ್ತೇವೆ. ಆದರೆ, ಕೋಡಿಹಳ್ಳಿ ಚಂದ್ರಶೇಖರ್‌ ಅಂತಹವರು ಹಣ ಸಂಪಾದನೆಗಾಗಿ ಹಸಿರು ಶಾಲು ಹಾಕಿಕೊಂಡಿದ್ದಾರೆ’ ಎಂದು ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ್ ಟೀಕಿಸಿದರು.

ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಬೈಚೇಗೌಡ, ಬಂಗಾರಪೇಟೆ ತಾಲ್ಲೂಕು ಘಟಕದ ಅಧ್ಯಕ್ಷ ತಿಮ್ಮಾರೆಡ್ಡಿ, ಮಾಲೂರು ತಾಲ್ಲೂಕು ಘಟಕದ ಅಧ್ಯಕ್ಷ ಹರೀಶ್, ಸದಸ್ಯರಾದ ಕೃಷ್ಣಮೂರ್ತಿ, ಗುರಪ್ಪ, ಸುಕನ್ಯಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.