ADVERTISEMENT

ಚೆಕ್‌ಪೋಸ್ಟ್‌ ಪರಿಶೀಲಿಸಿದ ಸಿಇಒ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2019, 14:01 IST
Last Updated 13 ಮಾರ್ಚ್ 2019, 14:01 IST
ಜಿ.ಪಂ ಸಿಇಒ ಜಿ.ಜಗದೀಶ್‌ ಕೋಲಾರದ ಟೇಕಲ್‌ ರಸ್ತೆ ಬಳಿಯ ಚೆಕ್‌ಪೋಸ್ಟ್‌ಗೆ ಬುಧವಾರ ಭೇಟಿ ನೀಡಿ ಸಿಬ್ಬಂದಿಯ ಕಾರ್ಯವೈಖರಿ ಪರಿಶೀಲಿಸಿದರು.
ಜಿ.ಪಂ ಸಿಇಒ ಜಿ.ಜಗದೀಶ್‌ ಕೋಲಾರದ ಟೇಕಲ್‌ ರಸ್ತೆ ಬಳಿಯ ಚೆಕ್‌ಪೋಸ್ಟ್‌ಗೆ ಬುಧವಾರ ಭೇಟಿ ನೀಡಿ ಸಿಬ್ಬಂದಿಯ ಕಾರ್ಯವೈಖರಿ ಪರಿಶೀಲಿಸಿದರು.   

ಕೋಲಾರ: ಲೋಕಸಭಾ ಚುನಾವಣಾ ಅಕ್ರಮಗಳ ಮೇಲೆ ಕಣ್ಣಿಡಲು ಸ್ಥಾಪಿಸಿರುವ ಚೆಕ್‌ಪೋಸ್ಟ್‌ಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಜಿ.ಜಗದೀಶ್‌ ಬುಧವಾರ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರಾಷ್ಟ್ರೀಯ ಹೆದ್ದಾರಿ 75ರ ಬಳಿಯ ಟೇಕಲ್‌ ರಸ್ತೆ ಸಮೀಪದ ಚೆಕ್‌ಪೋಸ್ಟ್‌ನಲ್ಲಿ ಒಂದು ತಾಸಿಗೆ ಹೆಚ್ಚು ಕಾಲ ವಾಹನಗಳ ತಪಾಸಣಾ ಕಾರ್ಯ ವೀಕ್ಷಿಸಿದರು.

ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಜಿಲ್ಲಾಡಳಿತವು ಜಿಲ್ಲೆಯ ಆಯಾ ಕಟ್ಟಿನ ಸ್ಥಳಗಳಲ್ಲಿ ಚೆಕ್‌ಪೋಸ್ಟ್‌ ತೆರೆದಿದ್ದು, ಪೊಲೀಸ್‌ ಸಿಬ್ಬಂದಿಯು ಆ ಮಾರ್ಗಗಳಲ್ಲಿ ಸಂಚರಿಸುವ ವಾಹನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ದಿನದ 24 ತಾಸೂ ಚೆಕ್‌ಪೋಸ್ಟ್‌ಗಳಲ್ಲಿ ಎರಡು ಪಾಳಿಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಯು ಪ್ರತಿ ವಾಹನವನ್ನು ತಪಾಸಣೆ ಮಾಡುತ್ತಿದ್ದಾರೆ.

ADVERTISEMENT

ತಾಲ್ಲೂಕಿನ ರಾಮಸಂದ್ರ, ಕ್ಯಾಲನೂರು ಕ್ರಾಸ್‌ ಚೆಕ್‌ಪೋಸ್ಟ್‌ಗಳಿಗೂ ಭೇಟಿ ನೀಡಿದ ಸಿಇಒ ಅಲ್ಲಿನ ಸಿಬ್ಬಂದಿಗೆ ಕಲ್ಪಿಸಿರುವ ಸೌಕರ್ಯ ಕುರಿತು ಮಾಹಿತಿ ಸಂಗ್ರಹಿಸಿದರು.

‘ಚುನಾವಣೆ ನ್ಯಾಯಸಮ್ಮತವಾಗಿ ನಡೆಯಬೇಕು. ಯಾವುದೇ ಅಕ್ರಮಕ್ಕೆ ಅವಕಾಶ ನೀಡಬಾರದು. ಈ ಹಿನ್ನೆಲೆಯಲ್ಲಿ ಚೆಕ್‌ಪೋಸ್ಟ್‌ಗಳಲ್ಲಿ ಹೆಚ್ಚು ನಿಗಾ ವಹಿಸಲಾಗಿದೆ. ಹಣ, ಚಿನ್ನಾಭರಣ, ಮದ್ಯ ಸಾಗಣೆ ಕಂಡುಬಂದರೆ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಜಗದೀಶ್‌ ತಿಳಿಸಿದರು.

ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ನವೀನ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಾಬು ಶೇಷಾದ್ರಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.