ADVERTISEMENT

ಚಿಕ್ಕತಿರುಪತಿ: ದರ್ಶನಕ್ಕೆ ಅವಕಾಶ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2020, 4:47 IST
Last Updated 22 ಡಿಸೆಂಬರ್ 2020, 4:47 IST
ಮಾಲೂರು ತಾಲ್ಲೂಕಿನ ಚಿಕ್ಕತಿರುಪತಿಯ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯ
ಮಾಲೂರು ತಾಲ್ಲೂಕಿನ ಚಿಕ್ಕತಿರುಪತಿಯ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯ   

ಮಾಲೂರು: ತಾಲ್ಲೂಕಿನ ಪ್ರಸಿದ್ಧ ಯಾತ್ರ ಸ್ಥಳ ಚಿಕ್ಕತಿರುಪತಿಯ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಹಾಗೂ ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಭಕ್ತರು ದರ್ಶನ ಪಡೆಯಲು ಜಿಲ್ಲಾಡಳಿತ ಕೋವಿಡ್-19 ಮಾರ್ಗಸೂಚಿಯೊಂದಿಗೆ ಅವಕಾಶ ಕಲ್ಪಿಸಿದೆ.

ಕೋವಿಡ್-19ನಿಂದಾಗಿ ಕಳೆದ ಮಾರ್ಚ್ ತಿಂಗಳಲ್ಲಿ ದೇವಾಲಯಗಳಿಗೆ ಬೀಗ ಜಡಿಯಲಾಗಿತ್ತು. ಇದರಿಂದ ಚಿಕ್ಕತಿರುಪತಿಯ ಪ್ರಸನ್ನ ವೆಂಟರಮಣಸ್ವಾಮಿ ದೇಗುಲದಲ್ಲಿ ಚೈತ್ರ ಮಾಸದಲ್ಲಿ ನಡೆಯುವ ಬ್ರಹ್ಮರಥೋತ್ಸವ ಉತ್ಸವ ಹಾಗೂ ಶ್ರಾವಣ ಮಾಸದ ಪೂಜೆಗಳು ನಡೆಯಲಿಲ್ಲ. ನವೆಂಬರ್ ತಿಂಗಳಲ್ಲಿ ದೇವಾಲಯವನ್ನು ತೆರೆಯಲಾಗಿತ್ತು. ಆದರೆ ಯಾವುದೇ ಸೇವೆಗಳು ನಡೆಯುತ್ತಿರಲಿಲ್ಲ.

ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯ ತಮಿಳುನಾಡು ಗಡಿ ಭಾಗದಲ್ಲಿರುವುದರಿಂದ ಬೆಂಗಳೂರು ಸೇರಿದಂತೆ ತಮಿಳುನಾಡಿನಿಂದ ಸಾವಿರಾರು ಭಕ್ತರು ಸ್ವಾಮಿಯ ದರ್ಶನ ಪಡೆಯಲು ಬರುತ್ತಾರೆ. ಹೀಗಾಗಿ, ಜಿಲ್ಲಾಡಳಿತ ದರ್ಶನಕ್ಕೆ ಅನುವು ಮಾಡಿಕೊಟ್ಟಿದೆ. ಆದರೆ, ಯಾವುದೇ ಸೇವೆಗಳಾಗಲಿ ಅಥವಾ ಪ್ರಸಾದ ವಿತರಣೆ ಇರುವುದಿಲ್ಲ. ಭಕ್ತರು ಅಂತರ ಕಾಯ್ದುಕೊಂಡು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು.

ADVERTISEMENT

65ಕ್ಕಿಂತ ಹೆಚ್ಚು ವಯಸ್ಸಿನವರು, 10 ವರ್ಷದೊಳಗಿನ ಮಕ್ಕಳು, ಆರೋಗ್ಯ ಸಮಸ್ಯೆ ಇರುವ ವ್ಯಕ್ತಿಗಳು, ಗರ್ಭಿಣಿಯರಿಗೆ ದೇವಾಲಯದ ಪ್ರವೇಶ ನಿಷೇಧಿಸಲಾಗಿದೆ ಎಂಬ ಜಿಲ್ಲಾಡಳಿತದ ಸೂಚನೆಯನ್ನು ಕಡ್ಡಾಯಗೊಳಿಸಲಾಗಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಟಿ.ಮಂಜುಳ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.