ADVERTISEMENT

ಮಕ್ಕಳ ರಕ್ಷಣೆ ಮೊದಲ ಆದ್ಯತೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2020, 16:04 IST
Last Updated 2 ಜೂನ್ 2020, 16:04 IST
ಕೋಲಾರ ತಾಲ್ಲೂಕಿನ ನರಸಾಪುರದ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಬಿ.ಎಂ.ಚಂದ್ರಪ್ಪ ಪರೀಕ್ಷಾ ಸಿದ್ಧತೆ ಕುರಿತು ಮಂಗಳವಾರ ಶಾಲಾ ಮುಖ್ಯ ಶಿಕ್ಷಕರು ಮತ್ತು ಆಡಳಿತ ಮಂಡಳಿ ಸದಸ್ಯರ ಸಭೆ ನಡೆಸಿದರು.
ಕೋಲಾರ ತಾಲ್ಲೂಕಿನ ನರಸಾಪುರದ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಬಿ.ಎಂ.ಚಂದ್ರಪ್ಪ ಪರೀಕ್ಷಾ ಸಿದ್ಧತೆ ಕುರಿತು ಮಂಗಳವಾರ ಶಾಲಾ ಮುಖ್ಯ ಶಿಕ್ಷಕರು ಮತ್ತು ಆಡಳಿತ ಮಂಡಳಿ ಸದಸ್ಯರ ಸಭೆ ನಡೆಸಿದರು.   

ಕೋಲಾರ: ‘ಎಸ್ಸೆಸ್ಸೆಲ್ಸಿ ಪರೀಕ್ಷೆ ದಿನಾಂಕ ಪ್ರಕಟವಾಗಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಕೊರೊನಾ ಸೋಂಕಿನಿಂದ ಮಕ್ಕಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲು ನರಸಾಪುರ ಪರೀಕ್ಷಾ ಕೇಂದ್ರದ ವ್ಯಾಪ್ತಿಯ ಶಾಲಾ ಮುಖ್ಯಸ್ಥರು ಸಹಕಾರ ನೀಡಬೇಕು’ ಎಂದು ಕೇಂದ್ರದ ಮುಖ್ಯ ಅಧೀಕ್ಷಕ ಬಿ.ಎಂ.ಚಂದ್ರಪ್ಪ ಮನವಿ ಮಾಡಿದರು.

ತಾಲ್ಲೂಕಿನ ನರಸಾಪುರದಲ್ಲಿ ನಡೆದ ಪರೀಕ್ಷಾ ಕೇಂದ್ರದ ವ್ಯಾಪ್ತಿಯ 10 ಶಾಲೆಗಳ ಮುಖ್ಯ ಶಿಕ್ಷಕರು, ಆಡಳಿತ ಮಂಡಳಿ ಸದಸ್ಯರ ಸಭೆಯಲ್ಲಿ ಮಾತನಾಡಿ, ‘ಮಕ್ಕಳ ರಕ್ಷಣೆಯು ಮೊದಲ ಆದ್ಯತೆ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ’ ಎಂದು ಹೇಳಿದರು.

‘ಪರೀಕ್ಷಾ ಕೇಂದ್ರದ ಪ್ರತಿ ಕೊಠಡಿಯಲ್ಲಿ 18ರಿಂದ 20 ಮಕ್ಕಳಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶವಿದೆ. ಪ್ರತಿ ಡೆಸ್ಕ್ ನಡುವೆ 3 ಅಡಿ ಅಂತರ ಇರಬೇಕು. ಈ ಹಿಂದೆ ನರಸಾಪುರ ಪದವಿ ಪೂರ್ವ ಕಾಲೇಜನ್ನು ಪರೀಕ್ಷಾ ಕೇಂದ್ರವಾಗಿ ಗುರುತಿಸಲಾಗಿತ್ತು. ಇದೀಗ ಆ ಕಾಲೇಜಿನಲ್ಲಿ ಹೊರಗಿನಿಂದ ಜಿಲ್ಲೆಗೆ ಬಂದವರನ್ನು ಕ್ವಾರಂಟೈನ್‌ ಮಾಡಲಾಗಿದೆ. ಹೀಗಾಗಿ ಪರೀಕ್ಷಾ ಕೇಂದ್ರವನ್ನು ವ್ಯಾಲಿ ಪಬ್ಲಿಕ್ ಶಾಲೆಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ’ ಎಂದರು.

ADVERTISEMENT

‘ಕೇಂದ್ರದಲ್ಲಿ 10 ಶಾಲೆಗಳ 458 ಮಕ್ಕಳು ಪರೀಕ್ಷೆ ಬರೆಯಲಿದ್ದು, ಒಟ್ಟು 25 ಕೊಠಡಿ ಅಗತ್ಯವಿದೆ. ಸಾಮಾನ್ಯ ವಿದ್ಯಾರ್ಥಿಗಳಿಗೆ 23 ಕೊಠಡಿ, ಆರೋಗ್ಯ ಸಮಸ್ಯೆಯಿರುವ ಮಕ್ಕಳಿಗೆ ಮತ್ತು ಅಂಗವಿಕಲ ಮಕ್ಕಳಿಗೆ ತಲಾ ಪ್ರತ್ಯೇಕ ಒಂದು ಕೊಠಡಿ ಮೀಸಲಿಡಬೇಕು. ಕೊಠಡಿಗಳು ಮತ್ತು ಶೌಚಾಲಯ ಸ್ಯಾನಿಟೈಸ್ ಮಾಡಬೇಕು’ ಎಂದು ಸೂಚಿಸಿದರು.

ವಿವಿಧ ಶಾಲೆ ಮುಖ್ಯ ಶಿಕ್ಷಕರು, ಆಡಳಿತ ಮಂಡಳಿ ಸದಸ್ಯರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.