ADVERTISEMENT

ಕೆರೆಯಲ್ಲಿ ಮಗುವಿನ ಶವ ಪತ್ತೆ; ತಂದೆಗಾಗಿ ಮುಂದುವರಿದ ಶೋಧ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2022, 4:26 IST
Last Updated 17 ನವೆಂಬರ್ 2022, 4:26 IST

ಕೋಲಾರ: ಬೆಂಗಳೂರಿನ ಯಲಹಂಕ ಬಳಿಯ ಬಾಗಲೂರಿನಲ್ಲಿ ನೆಲೆಸಿದ್ದ ತಂದೆ-ಮಗು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ಶವ ತಾಲ್ಲೂಕಿನ ಕೆಂದಟ್ಟಿ ಕೆರೆಯಲ್ಲಿ ಮಂಗಳವಾರ ರಾತ್ರಿ ಪತ್ತೆಯಾಗಿದ್ದು, ತಂದೆಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.

ಗುಜರಾತ್‌ ಮೂಲದ ಮಾಜಿ ಐ.ಟಿ ಉದ್ಯೋಗಿ ರಾಹುಲ್ ಹಾಗೂ ಅವರ ಮಗು ಜಿಯಾ (ಎರಡೂವರೆ ವರ್ಷ) ನಾಪತ್ತೆಯಾಗಿದ್ದರು.

ಒಡವೆಗಳನ್ನು ಅಡವಿಟ್ಟಿದ್ದ ರಾಹುಲ್‌, ಮನೆಯಲ್ಲಿ ಕಳ್ಳತನವಾಗಿದೆ ಎಂದು ಬಾಗಲೂರು ಪೊಲೀಸ್‌ ಠಾಣೆಗೆ ಸುಳ್ಳು ದೂರು ನೀಡಿದ್ದರು ಎನ್ನಲಾಗಿದೆ. ಈ ಸಂಬಂಧ ವಿಚಾರಣೆಗೆ ಠಾಣೆಗೆ ಬರುವಂತೆ ಪೊಲೀಸರು ಕರೆದಿದ್ದಾರೆ. ಮಗಳನ್ನು ಶಾಲೆಗೆ ಬಿಟ್ಟು ಠಾಣೆಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿದ್ದರು. ಬಳಿಕ ಸಂಪರ್ಕಕ್ಕೆ ಸಿಕ್ಕಿರಲಿಲ್ಲ.

ADVERTISEMENT

ವಿಚಾರಣೆಗೆ ಹೆದರಿ ನಾಪತ್ತೆಯಾಗಿದ್ದ ಅವರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದರು. ಮೊಬೈಲ್ ನೆಟ್‍ವರ್ಕ್ ಲೊಕೇಶನ್ ಆಧಾರದ ಮೇರೆಗೆ ಕೆಂದಟ್ಟಿ ಬಳಿಗೆ ಬಂದಾಗ ಜಿಯಾ ಮೃತದೇಹ ಪತ್ತೆಯಾಯಿತು. ಐ–20 ನೀಲಿ ಬಣ್ಣದ ಕಾರು, ಅದರೊಳಗೆ ಪರ್ಸ್‌ ಹಾಗೂ ಮೊಬೈಲ್‌ ಸಿಕ್ಕಿದೆ. ಕುಟುಂಬದವರು ಮಗುವಿನ ಗುರುತು ಪತ್ತೆ ಮಾಡಿದ್ದಾರೆ.

ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಕೂಡ ರಾಹುಲ್‍ ಅವರಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಬುಧವಾರ ಸಂಜೆಯಾದರೂ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ.

ರಾಹುಲ್‌ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ, ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

‘ರಾಹುಲ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ? ಮಗುವನ್ನು ಕೊಂದು ತಲೆ‌‌ಮರೆಸಿಕೊಂಡಿದ್ದಾರೆಯೇ ಎಂಬ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದೇವೆ’ ಎಂದರು.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ. ದೇವರಾಜ್‌. ಗ್ರಾಮಾಂತರಠಾಣೆಯ ಸರ್ಕಲ್‌ ಇನ್‌ಸ್ಪೆಕ್ಟರ್‌ ಐಯ್ಯಣ್ಣ ರೆಡ್ಡಿ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.