ADVERTISEMENT

ದಿಗ್ಬಂಧನದ ಆದೇಶಕ್ಕೆ ಬದ್ಧರಾಗಿರಿ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2020, 15:25 IST
Last Updated 5 ಏಪ್ರಿಲ್ 2020, 15:25 IST
ಡಿಡಿಪಿಐ ಕೆ.ರತ್ನಯ್ಯ ಕೋಲಾರದ ಗಲ್‌ಪೇಟೆಯಲ್ಲಿ ಭಾನುವಾರ ಜನರಿಗೆ ಉಚಿತವಾಗಿ ಹಾಲು ವಿತರಿಸಿದರು.
ಡಿಡಿಪಿಐ ಕೆ.ರತ್ನಯ್ಯ ಕೋಲಾರದ ಗಲ್‌ಪೇಟೆಯಲ್ಲಿ ಭಾನುವಾರ ಜನರಿಗೆ ಉಚಿತವಾಗಿ ಹಾಲು ವಿತರಿಸಿದರು.   

ಕೋಲಾರ: ‘ಎಲ್ಲೆಡೆ ಕೊರೊನಾ ಸೋಂಕಿನ ಭೀತಿ ಹೆಚ್ಚಿರುವುದರಿಂದ ಸಾರ್ವಜನಿಕರು ಮಾರುಕಟ್ಟೆ ಹಾಗೂ ಅಂಗಡಿಗಳ ಬಳಿ ಸಾಮಾಜಿಕ ಅಂತರ ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ ಕಿವಿಮಾತು ಹೇಳಿದರು.

ನಗರದ ಗಲ್‌ಪೇಟೆ ಬಡಾವಣೆಯಲ್ಲಿ ಭಾನುವಾರ ಜನರಿಗೆ ಹಾಲು ವಿತರಿಸಿ ಮಾತನಾಡಿ, ‘ಜನರು ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ವಿನಾಕಾರಣ ಮನೆಯಿಂದ ಹೊರ ಹೋಗಬಾರದು. ಕೊರೊನಾ ಸೋಂಕು ತಡೆಗಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ದಿಗ್ಬಂಧನದ ಆದೇಶಕ್ಕೆ ಎಲ್ಲರೂ ಬದ್ಧರಾಗಿರಬೇಕು’ ಎಂದರು.

‘ಆರೋಗ್ಯ ಇಲಾಖೆ ರೂಪಿಸಿರುವ ಸುರಕ್ಷತಾ ಕ್ರಮಗಳನ್ನು ಎಲ್ಲರೂ ಅನುಸರಿಸಬೇಕು. ಅಂಗಡಿ ಹಾಗೂ ಮಾರುಕಟ್ಟೆಗಳಲ್ಲಿ ಕೈ ಸ್ವಚ್ಛಗೊಳಿಸಲು ಸ್ಯಾನಿಟೈಸರ್‌ ಇಡಬೇಕು. ಹೊರಗೆ ಹೋಗುವಾಗ ತಪ್ಪದೇ ಮುಖಗವಸು ಬಳಸಬೇಕು. ಬಡಾವಣೆಗಳಿಗೆ ವಿದೇಶದಿಂದ ಅಥವಾ ಹೊರಗಿನ ಜಿಲ್ಲೆಗಳಿಂದ ಹೊಸಬರು ಬಂದರೆ ಆ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು’ ಎಂದು ತಿಳಿಸಿದರು.

ADVERTISEMENT

‘ಅಂಗಡಿಗಳಲ್ಲಿ ಒಬ್ಬರು ವಸ್ತು ಖರೀದಿಸಿದ ನಂತರ ಮತ್ತೊಬ್ಬರಿಗೆ ಅವಕಾಶ ನೀಡಬೇಕು. ದಿಗ್ಬಂಧನದ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಈ ಗಂಭೀರ ಪರಿಸ್ಥಿತಿ ನಿಭಾಯಿಸಲು ಸಾರ್ವಜನಿಕರ ಸಹಕಾರ ಅಗತ್ಯ. ಅಂಗಡಿಗಳ ಮುಂದೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಗುಂಪುಗೂಡದಂತೆ ಮಾಲೀಕರು ಎಚ್ಚರ ವಹಿಸಬೇಕು’ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ, ಇಸಿಒ ಆರ್.ಶ್ರೀನಿವಾಸನ್, ರೋಟರಿ ಪದಾಧಿಕಾರಿ ರವೀಂದ್ರನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.