ADVERTISEMENT

ಪ್ರಾಮಾಣಿಕ ಸೇವೆಗೆ ಬದ್ಧ: ಕೋನಪ್ಪರೆಡ್ಡಿ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2021, 14:09 IST
Last Updated 22 ಡಿಸೆಂಬರ್ 2021, 14:09 IST

ಕೋಲಾರ: ‘ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ್ಕೆ ಸ್ಥಾನಕ್ಕೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಆಯ್ಕೆಯಾಗಿರುವ ನಾನು ವರ್ಷ ಪ್ರಾಮಾಣಿಕವಾಗಿ ಸೇವೆ ಮಾಡಲು ಬದ್ಧನಾಗಿದ್ದೇನೆ. ನನ್ನ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂದು ಅದು ಸಾಬೀತಾದರೆ ಆ ಕ್ಷಣವೇ ರಾಜೀನಾಮೆ ಕೊಡುತ್ತೇನೆ’ ಎಂದು ಕೋನಪ್ಪರೆಡ್ಡಿ ಹೇಳಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸಂಘದ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಿಡುವ ಸ್ಥಾನಗಳನ್ನು ಪ್ರಾಮಾಣಿಕವಾಗಿ ಸಮುದಾಯದ ಅರ್ಹರಿಗೆ ತಲುಪಿಸುತ್ತೇನೆ. ಚುನಾವಣೆಯಲ್ಲಿ ಹಣ, ಮದ್ಯ ಹಂಚಿಕೆಗೆ ಸಂಪೂರ್ಣವಾಗಿ ಕಡಿವಾಣ ಹಾಕಿದ್ದು, ಪ್ರಾಮಾಣಿಕವಾಗಿ ಚುನಾವಣೆ ನಡೆಸಿದ್ದೇವೆ’ ಎಂದರು.

‘ಕೋಲಾರ–ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಚುನಾವಣೆಯಲ್ಲಿ ನಮ್ಮ ಸಿಂಡಿಕೇಟ್‌ನ ಇಬ್ಬರು ಗೆದ್ದಿದ್ದೇವೆ. ಒಕ್ಕಲಿಗರ ಸಂಘ ಮಾದರಿಯಾಗಿದ್ದು, ನಾನಾ ಕಾರಣದಿಂದ ಸರ್ಕಾರದ ವಶಕ್ಕೆ ಹೋಗಿ ಆಡಳಿತಾಧಿಕಾರಿ ನೇಮಿಸಲಾಗಿತ್ತು. ಸಂಘದಲ್ಲಿ ಅವ್ಯವಹಾರ ನಡೆದಿರುವುದಕ್ಕೆ ಸಂಬಂಧಪಟ್ಟ ಪ್ರಕರಣಗಳು ಈಗಾಗಲೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಿವೆ’ ಎಂದು ಸಂಘದ ನೂತನ ನಿರ್ದೇಶಕ ಡಾ.ಡಿ.ಕೆ.ರಮೇಶ್‌ ಹೇಳಿದರು.

ADVERTISEMENT

‘ಚುನಾವಣೆಯಲ್ಲಿ ಆಮಿಷ, ಆಶ್ವಾಸನೆ ಸಹಜ. ಆದರೆ, ಈ ಬಾರಿ ಬಿಡಿಗಾಸು ಹಣ ಹಂಚದೆ, ಮದ್ಯ ಕೊಡದೆ ಗೌರವಯುತವಾಗಿ ಚುನಾವಣೆ ನಡೆಸಿದ್ದೇವೆ. ಕಳೆದೊಂದು ಶತಮಾನದಿಂದ ಯಾರೊಬ್ಬರೂ ನಮ್ಮ ಭಾಗದಿಂದ ಅಧ್ಯಕ್ಷರಾಗಿಲ್ಲ. ಈಗ ಕೋನಪ್ಪರೆಡ್ಡಿ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಬೇಕಿದೆ’ ಎಂದರು.

ಸಹಕಾರ ನೀಡಬೇಕು: ‘ಚುನಾವಣೆಯಲ್ಲಿ ತಂತ್ರ ಕುತಂತ್ರಗಳು ನಡೆದಿವೆ. ಈಗ ಆ ಬಗ್ಗೆ ಮಾತನಾಡುವುದಿಲ್ಲ. ಸಂಘದ ಪದಾಧಿಕಾರಿಗಳ ಆಯ್ಕೆ ವೇಳೆ ನಿರ್ಮಲಾನಂದ ಸ್ವಾಮೀಜಿಯವರು ನಮ್ಮ ಸಿಂಡಿಕೇಟ್‌ನ ನಿರ್ದೇಶಕರಿಗೆ ಅವಕಾಶ ನೀಡಬೇಕು. ಯಲುವಳ್ಳಿ ರಮೇಶ್‌ ಅವರೂ ನಮ್ಮ ಇಬ್ಬರು ನಿರ್ದೇಶಕರಿಗೆ ಸಹಕಾರ ನೀಡಬೇಕು’ ಎಂದು ಪರಾಜಿತ ಅಭ್ಯರ್ಥಿ ಪ್ರಕಾಶ್ ತಿಳಿಸಿದರು.

‘ಚುನಾವಣೆಯಲ್ಲಿ ಡಾ.ರಮೇಶ್ ಅವರಿಗೆ ಅತ್ಯಧಿಕ ಮತ ಬಂದಿವೆ. ಈ ಬಾರಿ 35 ನಿರ್ದೇಶಕರ ಪೈಕಿ 30 ಮಂದಿ ಹೊಸಬರಾಗಿದ್ದಾರೆ. ಕೋನಪ್ಪರೆಡ್ಡಿ ಅವರಿಗೆ ಪೊಲೀಸ್‌ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಅನುಭವವಿದಿ. ಹೀಗಾಗಿ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದರೆ ಇಡೀ ಸಮುದಾಯಕ್ಕೆ ಅವರ ಆಡಳಿತ ವೈಖರಿಯ ಪರಿಚಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.