ಬಂಗಾರಪೇಟೆ: ತಾಲ್ಲೂಕಿನಾದ್ಯಂತ ಎಲ್ಲಾ ಜನಸಾಮಾನ್ಯರು, ಮುಖಂಡರು ಜಾತ್ಯತೀತವಾಗಿ ಮತ್ತು ಪಕ್ಷಾತೀತವಾಗಿ ಮುಂದಿನ ಬಾರಿ ನಡೆಯುವ ಚುನಾವಣೆಯಲ್ಲಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರನ್ನು ಸೋಲಿಸುವುದು ಖಚಿತ ಎಂದು ಮಾಜಿ ಸಂಸದ ಎಸ್. ಮುನಿಸ್ವಾಮಿ ತಿಳಿಸಿದರು.
ಪಟ್ಟಣದ ಕೋದಂಡರಾಮ ಸ್ವಾಮಿ ದೇವಾಲಯದಲ್ಲಿ ಬುಧವಾರ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಂಗಾರಪೇಟೆ ಕ್ಷೇತ್ರದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾರ್ವಜನಿಕ ಆಸ್ಪತ್ರೆ, ಪೋಲಿಸ್ ಠಾಣೆ, ನ್ಯಾಯಾಲಯ ಸಂಕೀರ್ಣ, ಬಡಲ್ ರೋಡ್, ತಾಲ್ಲೂಕು ಆಡಳಿತ ಕಚೇರಿಗಳಿಗೆ ಅನುದಾನ ಬಿಡುಗಡೆಗೆ ಮಾಡಲಾಗಿತ್ತು. ಆದರೆ, ಶಾಸಕರು ಇದನ್ನೆಲ್ಲಾ ತಾವೇ ಮಾಡಿದ್ದು ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ಶಾಸಕರು ಕ್ಷೇತ್ರವನ್ನು ರಣರಂಗ ಮಾಡುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರಿಗೆ ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ. ಬಲವಂತವಾಗಿ ಪಕ್ಷ ಸೇರ್ಪಡೆ ಮಾಡಿಕೊಳ್ಳಲುತ್ತಿದ್ದಾರೆ. ತಮಗೆ ಮತ ನೀಡಿಲ್ಲ ಎನ್ನುವ ಕಾರಣಕ್ಕೆ ಕೆಲವು ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ನಿಯತ್ತಿನ ನಾಯಿ!
ಶಾಸಕ ನಾರಾಯಣಸ್ವಾಮಿ ಬಳಸುವ ಭಾಷೆ ಅವರ ಸಂಸ್ಕೃತಿಯನ್ನು ತೋರಿಸುತ್ತಿದೆ. ಅವರು ನನ್ನನ್ನು ‘ನಾಯಿ’ಗೆ ಹೋಲಿಸಿದ್ದಾರೆ. ಹೌದು, ನಾನು ಯಾರಿಗೂ ಮೋಸ ಮಾಡದ ನಿಯತ್ತಿನ ನಾಯಿ, ನಾಯಿ ವಿಶ್ವಾಸಕ್ಕೆ ಹೆಸರುವಾಸಿ ಪ್ರಾಣಿ ಎಂದು ತಿರುಗೇಟು ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಕಪಾಲಿ ಶಂಕರ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬುಜ್ಜಿ ನಾಯ್ಡು, ಶ್ರೀನಿವಾಸ್, ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್, ಹೊಸರಾಯಪ್ಪ, ಮಾರ್ಕಂಡೇ ಗೌಡ, ಬಿಂದು ಮಾಧವ, ಬಿ.ಪಿ. ಮಹೇಶ್, ಬಾಲಾಜಿ, ನಾರಾಯಣಪ್ಪ, ಹಾಲಪ್ಪ, ಬೋಗ್ಗಲಹಳ್ಳಿ ಶಿವರಾಜ್, ನಾಗರಾಜ್, ಅಪ್ಪಿ ನಾರಾಯಣಸ್ವಾಮಿ, ಶಶಿ, ಹುಲಿಬೆಲೆ ಶ್ರೀನಿವಾಸ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.