ADVERTISEMENT

ಕೋಲಾರ: ಗ್ರಾಮೀಣ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿ

ರೇವಾ ವಿ.ವಿಯ ಎಜುಕೇಷನ್ ಆನ್ ವ್ಹೀಲ್ಸ್‌’ ಬಸ್‍ಗೆ ರಮೇಶ್‌ಕುಮಾರ್‌ ಚಾಲನೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2022, 14:26 IST
Last Updated 31 ಮಾರ್ಚ್ 2022, 14:26 IST
ರೇವಾ ವಿಶ್ವವಿದ್ಯಾಲಯವು ಕಂಪ್ಯೂಟರ್ ಕಲಿಕೆಗೆ ಸಹಕಾರಿಯಾಗುವಂತೆ ರೂಪಿಸಿರುವ ‘ಎಜುಕೇಷನ್ ಆನ್ ವ್ಹೀಲ್ಸ್‌’ ಬಸ್‍ನ ಒಳಾಂಗಣವನ್ನು ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ ಮತ್ತು ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ಕುಮಾರ್‌ ಕೋಲಾರದಲ್ಲಿ ಗುರುವಾರ ವೀಕ್ಷಿಸಿದರು
ರೇವಾ ವಿಶ್ವವಿದ್ಯಾಲಯವು ಕಂಪ್ಯೂಟರ್ ಕಲಿಕೆಗೆ ಸಹಕಾರಿಯಾಗುವಂತೆ ರೂಪಿಸಿರುವ ‘ಎಜುಕೇಷನ್ ಆನ್ ವ್ಹೀಲ್ಸ್‌’ ಬಸ್‍ನ ಒಳಾಂಗಣವನ್ನು ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ ಮತ್ತು ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ಕುಮಾರ್‌ ಕೋಲಾರದಲ್ಲಿ ಗುರುವಾರ ವೀಕ್ಷಿಸಿದರು   

ಕೋಲಾರ: ‘ರೇವಾ ವಿಶ್ವವಿದ್ಯಾಲಯದವರು ಜಿಲ್ಲೆಯ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನದ ಮೂಲಕ ಉಚಿತವಾಗಿ ಕಂಪ್ಯೂಟರ್ ಶಿಕ್ಷಣ ತರಬೇತಿ ನೀಡುತ್ತಾರೆ’ ಎಂದು ಶಾಸಕ ಕೆ.ಆರ್.ರಮೇಶ್‌ಕುಮಾರ್ ತಿಳಿಸಿದರು.

ರೇವಾ ವಿಶ್ವವಿದ್ಯಾಲಯವು ಕಂಪ್ಯೂಟರ್ ಕಲಿಕೆಗೆ ಸಹಕಾರಿಯಾಗುವಂತೆ ರೂಪಿಸಿರುವ ‘ಎಜುಕೇಷನ್ ಆನ್ ವ್ಹೀಲ್ಸ್‌’ ಬಸ್‍ಗೆ ಇಲ್ಲಿ ಗುರುವಾರ ಚಾಲನೆ ನೀಡಿ ಮಾತನಾಡಿ, ‘ಹಿಂದೆ ಸರ್ಕಾರಿ ಶಾಲೆಗಳಲ್ಲಿ ವಿದ್ಯೆ ಕಲಿಯಲು ಸೌಕರ್ಯಗಳ ಕೊರತೆಯಿತ್ತು. ಐದಾರು ವರ್ಷಗಳಿಂದ ಸರ್ಕಾರಿ ಶಾಲೆಗಳಲ್ಲಿ ಸಾಕಷ್ಟು ಸುಧಾರಣೆಯಾಗಿದ್ದರೂ ಇದರ ಪ್ರಯೋಜನ ಪಡೆದುಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕೂಲಿ ಮಾಡುವವರ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಶಾಲೆಗಳಿಗೆ ದಾಖಲಾಗುತ್ತಿದ್ದಾರೆ. ಶ್ರೀಮಂತರ ಮಕ್ಕಳು ಸಹ ಸರ್ಕಾರಿ ಶಾಲೆಗಳಲ್ಲಿ ಓದುವ ಪರಿಸ್ಥಿತಿ ನಿರ್ಮಾಣವಾಗಬೇಕು. ಸಂಘ ಸಂಸ್ಥೆಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಸಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

‘ರೇವಾ ವಿ.ವಿಯು ‌ವನಮಹೋತ್ಸವ ಹಮ್ಮಿಕೊಂಡಿರುವುದು ಸ್ವಾಗತಾರ್ಹ. ಆದರೆ, ದೇಸಿ ಸಸಿಗಳನ್ನು ನಾಟಿ ಮಾಡಬೇಕು. ಈ ಹಿಂದೆ ಅರಣ್ಯ ಇಲಾಖೆಯವರು ನಾಟಿ ಮಾಡಿರುವ ಸಸಿಗಳಲ್ಲಿ ರೆಂಬೆ, ಕೊಂಬೆ ಸಹ ಇಲ್ಲ. ದೇಸಿ ಸಸಿಗಳನ್ನು ನೆಟ್ಟರೆ ಪ್ರಾಣಿ, ಪಕ್ಷಿ, ಮನುಷ್ಯರಿಗೆ ಉಪಯೋಗವಾಗುತ್ತದೆ'ಎಂದು ಅಭಿಪ್ರಾಯಪಟ್ಟರು.

ಶಾಲೆಗಳ ದತ್ತು: ‘ವಿ.ವಿಯಿಂದ ಜಿಲ್ಲೆಯ ಗಡಿ ಭಾಗದ10 ಶಾಲೆಗಳನ್ನು ದತ್ತು ಪಡೆದು ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಕಂಪ್ಯೂಟರ್‌ ಕಲಿಕೆಯ ತರಬೇತಿ ನೀಡಲು ಯೋಜನೆ ರೂಪಿಸಲಾಗಿದೆ’ ಎಂದು ರೇವಾ ವಿ.ವಿ ಕುಲಸಚಿವ ರಮೇಶ್ ಮಾಹಿತಿ ನೀಡಿದರು.

‘ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ತರಲಾಗಿದೆ. ವಿ.ವಿಯ ಹಳೇ ವಿದ್ಯಾರ್ಥಿಗಳ ಸಂಘದ ಸಹಕಾರದಿಂದ ಜಿಲ್ಲೆಯಲ್ಲಿ ಶಾಲೆಗಳನ್ನು ಆಯ್ಕೆ ಮಾಡಲಾಗುತ್ತದೆ. ಮೊದಲ ಹಂತದಲ್ಲಿ ಒಂದು ವಾಹನಕ್ಕೆ ಪ್ರಾಯೋಗಿಕವಾಗಿ ಚಾಲನೆ ನೀಡಿದ್ದು, ಬೇಸಿಗೆ ರಜೆ ಮುಗಿದ ನಂತರ ಇಂತಹ 10 ವಾಹನಗಳನ್ನು ಜಿಲ್ಲೆಗೆ ನಿಯೋಜಿಸುತ್ತೇವೆ. ಈ ವಾಹನಗಳು ಆಯ್ಧ ಶಾಲೆಗಳ ಬಳಿ ಹೋಗಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4ರವರೆಗೆ ಮಕ್ಕಳಿಗೆ ಕಂಪ್ಯೂಟರ್ ತರಬೇತಿ ನೀಡಲಿವೆ’ ಎಂದು ವಿವರಿಸಿದರು.

ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್‌ಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠೇಗೌಡ, ರೇವಾ ವಿ.ವಿ ಸಂಪರ್ಕಾಧಿಕಾರಿ ಸುಧಾಕರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.