ADVERTISEMENT

ಕೋಲಾರ: ಭೂ ಸುಧಾರಣೆ ತಿದ್ದುಪಡಿ ಕಾಯ್ದೆಗೆ ಖಂಡನೆ

ತಾಲ್ಲೂಕು ಕಚೇರಿ ಎದುರು ದಲಿತ ಸಂಘರ್ಷ ಸಮಿತಿ ಧರಣಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2020, 14:04 IST
Last Updated 20 ಜುಲೈ 2020, 14:04 IST
ಕರ್ನಾಟಕ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿ ಕೋಲಾರದಲ್ಲಿ ಸೋಮವಾರ ಧರಣಿ ನಡೆಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ತಹಶೀಲ್ದಾರ್‌ ಶೋಭಿತಾ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿ ಕೋಲಾರದಲ್ಲಿ ಸೋಮವಾರ ಧರಣಿ ನಡೆಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ತಹಶೀಲ್ದಾರ್‌ ಶೋಭಿತಾ ಅವರಿಗೆ ಮನವಿ ಸಲ್ಲಿಸಿದರು.   

ಕೋಲಾರ: ಕರ್ನಾಟಕ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ಇಲ್ಲಿ ಸೋಮವಾರ ತಾಲ್ಲೂಕು ಕಚೇರಿ ಎದುರು ಧರಣಿ ನಡೆಸಿದರು.

‘ಸರ್ಕಾರ ರಿಯಲ್‌ ಎಸ್ಟೇಟ್‌ ದಂಧೆಕೋರರು, ಬಂಡವಾಳಶಾಹಿಗಳು ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಒತ್ತಡಕ್ಕೆ ಮಣಿದು 1961ರ ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದಿದೆ. ಸರ್ಕಾರದ ಈ ನಡೆ ಖಂಡನೀಯ’ ಎಂದು ಸಂಘಟನೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

‘ಭೂಮಿ ಒಡೆತನ ಸೇರಿದಂತೆ ರೈತ ಹಾಗೂ ಕೃಷಿ ಕಾರ್ಮಿಕರ ಹಿತಾಸಕ್ತಿಗೆ ಬದ್ಧವಾಗಿದ್ದ ಕರ್ನಾಟಕ ಭೂ ಸುಧಾರಣಾ ಕಾಯ್ದೆಯು ಇಡೀ ದೇಶಕ್ಕೆ ಮಾದರಿಯಾಗಿತ್ತು. ರೈತರ ಮತ್ತು ಕೃಷಿ ಕಾರ್ಮಿಕರ ಪರವಾಗಿದ್ದ ಜನಪರ ಕಾಯ್ದೆಗೆ ಸರ್ಕಾರ ತಿದ್ದುಪಡಿ ತಂದಿರುವುದು ಖಂಡನೀಯ’ ಎಂದು ಸಮಿತಿಯ ಜಿಲ್ಲಾ ಘಟಕದ ಸಂಚಾಲಕ ಎನ್‌.ಮುನಿಯಪ್ಪ ಕಿಡಿಕಾರಿದರು.

ADVERTISEMENT

‘ಸರ್ಕಾರ ಕೃಷಿಕರು, ಭೂರಹಿತ ಕೃಷಿ ಕಾರ್ಮಿಕರ ಹಿತಾಸಕ್ತಿ ಬಲಿ ಕೊಟ್ಟಿದೆ. ಭೂರಹಿತ ಬಡಜನರ ಭೂ ಒಡೆತನದ ಕನಸಿಗೆ ಕೊಳ್ಳಿ ಇಟ್ಟಿದೆ. ಅನ್ನ ಕೊಡುವ ಭೂಮಿಯನ್ನು ರೈತರಿಂದ ಕಿತ್ತುಕೊಂಡು ಲೂಟಿಕೋರ ಬಂಡವಾಳಶಾಹಿಗಳಿಗೆ ಪರಭಾರೆ ಮಾಡುವ ಹುನ್ನಾರ ಅಡಗಿದೆ’ ಎಂದು ಆರೋಪಿಸಿದರು.

ಒಕ್ಕಲೆಬ್ಬಿಸುತ್ತಿದೆ: ‘ಸರ್ಕಾರ ರೈತರು ಮತ್ತು ಕೃಷಿ ಕಾರ್ಮಿಕರನ್ನು ದುಡಿಮೆಯ ನೆಲೆಯಿಂದ ಶಾಶ್ವತವಾಗಿ ಒಕ್ಕಲೆಬ್ಬಿಸುತ್ತಿದೆ. ಬಂಡವಾಳಶಾಹಿ ರಾಜಕಾರಣಕ್ಕೆ ರೈತರನ್ನು ಗುಲಾಮರಾಗಿಸುವ ಸಂಚು ನಡೆದಿದೆ. ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡಿರುವುದರಿಂದ ಉಳ್ಳವರೇ ಭೂ ಒಡೆಯರಾಗುವ ಅಪಾಯವಿದೆ’ ಎಂದು ಧರಣಿನಿರತರು ಆತಂಕ ವ್ಯಕ್ತಪಡಿಸಿದರು.

‘ಆಹಾರದ ಸಾರ್ವಭೌಮತ್ವ ಹೊಂದಿದ್ದ ಭಾರತ ದೇಶವು ಆಳುವವರ ಕೃಷಿ ವಿರೋಧಿ ಧೋರಣೆಯಿಂದ ಕೃಷಿ ಬಿಕ್ಕಟ್ಟು ಹಾಗೂ ಆಹಾರದ ಸಮಸ್ಯೆ ಎದುರಿಸುತ್ತಿದೆ. ಬಡ ಜನರು ಹಸಿವಿನಿಂದ ಸಾಯುತ್ತಿದ್ದಾರೆ. ದೂರದೃಷ್ಟಿಯಿಲ್ಲದ ರಾಜಕಾರಣಿಗಳ ಅಪ್ರಬುದ್ಧ ನಿರ್ಧಾರಗಳಿಂದ ಕೃಷಿ ಭೂಮಿ ನಾಶವಾಗಿ ಆಹಾರದ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತಿದೆ’ ಎಂದು ದೂರಿದರು.

‘ರೈತ ಕುಲಕ್ಕೆ ಮಾರಕವಾಗಿರುವ ಕರ್ನಾಟಕ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು. ಇಲ್ಲದಿದ್ದರೆ ರಾಜ್ಯದೆಲ್ಲೆಡೆ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಸಮಿತಿಯ ರಾಜ್ಯ ಘಟಕದ ಸಂಚಾಲಕ ರಮೇಶ್‌, ಜಿಲ್ಲಾ ಘಟಕದ ಸಂಘಟನಾ ಸಂಚಾಲಕ ವೆಂಕಟೇಶ್‌, ಖಜಾಂಚಿ ಗೋವಿಂದರಾಜು, ಕೋಲಾರ ತಾಲ್ಲೂಕು ಘಟಕದ ಸಂಚಾಲಕ ದೇವರಾಜ್‌, ಸಂಘಟನಾ ಸಂಚಾಲಕ ಲಕ್ಷ್ಮಣ್‌ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.