ADVERTISEMENT

ಸಿದ್ದರಾಮಯ್ಯ ಜನ್ಮದಿನ ಉತ್ಸವದ ಬಳಿಕ ಕಾಂಗ್ರೆಸ್‌ಗೆ ಅಧಿಕಾರದ ಭ್ರಮೆ: ಮುನಿರತ್ನ

ಯಾರು, ಎಷ್ಟು ಬಸ್‌ ಕಳುಹಿಸಿದ್ದರು ಗೊತ್ತು 

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2022, 10:50 IST
Last Updated 6 ಆಗಸ್ಟ್ 2022, 10:50 IST
   

ಕೋಲಾರ: ‘ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ಉತ್ಸವಕ್ಕೆ ಯಾರು ಎಷ್ಟು ಶ್ರಮ ಹಾಕಿದ್ದಾರೆ? ಯಾರು ಎಷ್ಟು ಬಸ್‌ ಕಳುಹಿಸಿದ್ದಾರೆ? ಯಾವ ಜಿಲ್ಲೆಯಿಂದ ಎಷ್ಟು ಜನ ಹೋಗಿದ್ದರು ಎಂಬುದು ಗೊತ್ತು’ ಎಂದು ಸಚಿವ ಮುನಿರತ್ನ ಹೇಳಿದರು.

ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಕುಮಾರಸ್ವಾಮಿ ಕೂಡ ಈಚೆಗೆ ಸಮಾವೇಶ ನಡೆಸಿ 125 ಸೀಟು ಬರಲಿದೆ ಎಂಬುದಾಗಿ ಹೇಳಿದ್ದರು. ಮೈದಾನದಲ್ಲಿ ಜನ ಸೇರಿಸಿ ಕಾರ್ಯಕ್ರಮ ಮಾಡಿದ ಮಾತ್ರಕ್ಕೆ ಒಂದು ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ಹಾಗಿದ್ದರೆ ಈ ದೇಶದಲ್ಲಿ ಯಾರು ಬೇಕಿದ್ದರೂ ಆಡಳಿತ ನಡೆಸಬಹುದಿತ್ತು. ಜನರ ನಿಲುವು, ಒಲವು, ಅಭಿಪ್ರಾಯ ಬೇರೆ ಇರುತ್ತದೆ. ಜನ ಸೇರಿಸಿದ ಮಾತ್ರಕ್ಕೆ ಬಿಜೆಪಿ ಬೆದರಿದೆ ಎಂದುಕೊಂಡರೆ ಅದು ಅವರ ಭ್ರಮೆ. ಸಿದ್ದರಾಮಯ್ಯ ಅವರ ಅಕ್ಕಪಕ್ಕದಲ್ಲಿ ಇರುವ ಮುಖಂಡರಿಗೆ ಹೊಟ್ಟೆಉರಿ ಇರಬಹುದೇ ಹೊರತು ನಮಗೆ ಇಲ್ಲ’ ಎಂದರು.

ತಮ್ಮ ಜನ್ಮದಿನಕ್ಕೆ ಸೇರಿದ ಜನಸಾಗರ ಕಂಡು ಬಿಜೆಪಿ ಮುಖಂಡರ ಹೊಟ್ಟೆ ಉರಿಯುತ್ತಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಈ ರೀತಿ ಪ್ರತಿಕ್ರಿಯಿಸಿದರು.

ADVERTISEMENT

ಬಿಬಿಎಂಪಿ ವಾರ್ಡ್‌ ಮೀಸಲಾತಿ ಕುರಿತು, ‘ಕಾನೂನಿನ ಚೌಕಟ್ಟಿನಲ್ಲಿ ಬಿಬಿಎಂಪಿ ವಾರ್ಡ್‌ ಮೀಸಲಾತಿ ಪ್ರಕಟಿಸಲಾಗಿದೆ. ಆಯಾ ಕಾಲಕ್ಕೆ ಇರುವ ಸರ್ಕಾರವು ಮೀಸಲಾತಿ ನಿಗದಿಪಡಿಸುತ್ತದೆ. ನಾವು ಮಾಡಿದಾಗ ಅವರಿಗೆ, ಅವರು ಮಾಡಿದಾಗ ನಮಗೆ ತಪ್ಪಾಗಿ ಕಾಣಿಸುತ್ತದೆ. ಸದ್ಯದಲ್ಲೇ ಬಿಬಿಎಂಪಿ ಚುನಾವಣೆ ನಡೆಯಲಿದೆ’ ಎಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.