ADVERTISEMENT

ಕಾಂಗ್ರೆಸ್– ಜೆಡಿಎಸ್ ಒಗ್ಗೂಡದಿದ್ದರೆ ಉಳಿಗಾಲವಿಲ್ಲ

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯ ಎಸ್ಸಿ ಘಟಕದ ಅಧ್ಯಕ್ಷ ಆನಂದ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 15:52 IST
Last Updated 10 ಏಪ್ರಿಲ್ 2019, 15:52 IST

ಕೋಲಾರ: ‘ದೇಶದಲ್ಲಿ ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಮಹಾಮೈತ್ರಿ ಮಾಡಿಕೊಳ್ಳಲಾಗುತ್ತಿದೆ. ಅದೇ ರೀತಿ ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಒಗ್ಗೂಡದಿದ್ದರೆ ಎರಡು ಪಕ್ಷಗಳಿಗೂ ಉಳಿಗಾಲವಿಲ್ಲ’ ಎಂದು ಜೆಡಿಎಸ್ ರಾಜ್ಯ ಎಸ್ಸಿ ಘಟಕದ ಅಧ್ಯಕ್ಷ ಆನಂದ್ ಹೇಳಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಒಂದಾಗಿವೆ. ಪಕ್ಷಗಳ ನಡುವೆ ಜಗಳ ಸಾಮಾನ್ಯ. ಶಿವಸೇನೆಗೆ ವಿರುದ್ಧವಾಗಿದ್ದ ಬಿಜೆಪಿ ಈಗ ಆ ಪಕ್ಷದೊಂದಿಗೆ ಒಂದಾಗಿಲ್ಲವೇ? ಹಾಗೆಯೇ ದೇಶದ ಉಳಿವಿಗಾಗಿ ಜಾತ್ಯತೀತ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ’ ಎಂದರು.

‘ಕ್ಷೇತ್ರದ ಹಾಲಿ ಸಂಸದ ಕೆ.ಎಚ್‌.ಮುನಿಯಪ್ಪ ಅವರು ಸತತ 7 ಬಾರಿ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿದ್ದಾರೆ. ಅವರು 8ನೇ ಬಾರಿಗೆ ಆಯ್ಕೆಯಾಗಲಿದ್ದಾರೆ. ಇವರಂತೆಯೇ ಮಲ್ಲಿಕಾರ್ಜುನ ಖರ್ಗೆ 5 ದಶಕದಿಂದ ರಾಜಕಾರಣದಲ್ಲಿದ್ದಾರೆ. ಈ ಇಬ್ಬರು ನಾಯಕರು ಪರಿಶಿಷ್ಟ ಸಮುದಾಯದ ಎರಡು ಕಣ್ಣುಗಳಿದ್ದಂತೆ’ ಎಂದು ಬಣ್ಣಿಸಿದರು.

ADVERTISEMENT

‘ಪರಿಶಿಷ್ಟರಿಗೆ ಬಲಿಷ್ಠ ಸ್ಥಾನಮಾನ ದೊರೆಕಿಸಿಕೊಡಲು ಖರ್ಗೆ ಮತ್ತು ಮುನಿಯಪ್ಪ ಸಮುದಾಯದವರಿಗೆ ಅನಿವಾರ್ಯವಾಗಿದ್ದಾರೆ. ಪರಿಶಿಷ್ಟರ ಸಮಸ್ಯೆಗಳಿಗೆ ಸ್ಪಂದಿಸಿ ಹೆಚ್ಚಿನ ಸೇವೆ ಸಲ್ಲಿಸಲು ಈ ಇಬ್ಬರು ನಾಯಕರಿಗೆ ಅವಕಾಶ ಮಾಡಿ ಕೊಡುವುದು ನಮ್ಮ ಕರ್ತವ್ಯ’ ಎಂದು ತಿಳಿಸಿದರು.

ಸಂಘಟಿತರಾಗಿ: ‘ಪರಿಶಿಷ್ಟ ಸಮುದಾಯದಲ್ಲಿ ಎಡಗೈ, ಬಲಗೈ ಎಂದು ಭೇದ ಭಾವ ಮಾಡದೆ ಎಲ್ಲರೂ ಸಂಘಟಿತರಾಗಿ ಮುನಿಯಪ್ಪ ಅವರನ್ನು ಗೆಲ್ಲಿಸಬೇಕು. ರಾಜ್ಯದ 28 ಸ್ಥಾನಗಳ ಪೈಕಿ ಮೈತ್ರಿಕೂಟದ ಅಭ್ಯರ್ಥಿಗಳು ಕನಿಷ್ಠ 22 ಸ್ಥಾನಗಳಲ್ಲಿ ಜಯ ಗಳಿಸಬೇಕು’ ಎಂದು ಆಶಿಸಿದರು.

‘ಬಿಜೆಪಿಯು ಸಂವಿಧಾನಕ್ಕೆ ಅವಮಾನ ಮಾಡಿ ನಂತರ ಕ್ಷಮೆ ಕೇಳಿದವರಿಗೆ ಟಿಕೆಟ್ ನೀಡಿರುವುದು ನಾಚಿಕೆಗೇಡು. ಜನ ರಾಜಕೀಯ ಬದಲಾವಣೆ ಬಯಸಿದ್ದಾರೆ. ಅನುಭವಿ ರಾಜಕಾರಣಿಗಳ ಮಾರ್ಗದರ್ಶನ ಅಗತ್ಯ ಇರುವುದರಿಂದ ಮುನಿಯಪ್ಪ ಅವರನ್ನು ಮತ್ತೊಮ್ಮೆ ಲೋಕಸಭೆಗೆ ಆಯ್ಕೆ ಮಾಡಬೇಕು’ ಎಂದರು.

‘ಮುನಿಯಪ್ಪ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಕೈಗಾರಿಕೆ, ಉದ್ಯೋಗ, ರೈಲ್ವೆ ಸಂಪರ್ಕ, ಸಮುದಾಯ ಭವನ ಹೀಗೆ ಅನೇಕ ಸೌಲಭ್ಯ ಕಲ್ಪಿಸಿದ್ದಾರೆ’ ಎಂದು ಜಿಲ್ಲಾ ಕಾಂಗ್ರೆಸ್‌ ಎಸ್ಸಿ ಘಟಕದ ಅಧ್ಯಕ್ಷ ಜಯದೇವ್ ವಿವರಿಸಿದರು.

ಜೆಡಿಎಸ್ ಜಿಲ್ಲಾ ಎಸ್ಸಿ ಘಟಕದ ಉಪಾಧ್ಯಕ್ಷ ವೆಂಕಟೇಶ್, ಕಾರ್ಯದರ್ಶಿ ಅನ್ವರ್, ಪದಾಧಿಕಾರಿಗಳಾದ ಪ್ರೇಮ್‌ಕುಮಾರ್‌, ಆನಂದ್, ಮಂಜುನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.