ADVERTISEMENT

ಬಿಜೆಪಿ ಟೀಮ್‌ನಲ್ಲಿ ಕಾಂಗ್ರೆಸ್‌ ಮುಖಂಡರು: ಕುಮಾರಸ್ವಾಮಿ ಲೇವಡಿ

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಲೇವಡಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 13:06 IST
Last Updated 28 ನವೆಂಬರ್ 2021, 13:06 IST
   

ಕೋಲಾರ: ‘ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡರಿಗೆ ತಮ್ಮ ಅಭ್ಯರ್ಥಿಗಳು ಗೆಲ್ಲುವುದು ಬೇಕಿಲ್ಲ. ಮಾತು ಮಾತಿಗೂ ನಮ್ಮನ್ನು ಬಿಜೆಪಿಯ ಬಿ ಟೀಮ್‌ ಎಂದು ಜರಿಯುವ ಕಾಂಗ್ರೆಸ್‌ ಮುಖಂಡರು ಬಿಜೆಪಿಯ ಎಲ್ಲಾ ವರ್ಗಗಳ ಟೀಮ್‍ನಲ್ಲಿ ಇದ್ದಾರೆ. ಅವರನ್ನು ಯಾವ ಟೀಮ್‌ ಎನ್ನಬೇಕೋ ಗೊತ್ತಿಲ್ಲ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದರು.

ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಬಿಜೆಪಿ ಜತೆ ಮೈತ್ರಿ, ಒಳ ಒಪ್ಪಂದದ ಬಗ್ಗೆ ಚರ್ಚೆಯಾಗಿಲ್ಲ. ಯಡಿಯೂರಪ್ಪ ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್, ಮೈತ್ರಿ ಬಗ್ಗೆ ಆರೋಪ ಮಾಡುವುದು ಸರಿಯಲ್ಲ. ಬಿಜೆಪಿ ಗೆಲುವಿಗೆ ಸಹಕರಿಸಿ ಅಂತಾ ಹೇಳುತ್ತಿರುವುದು ಸರಿಯಲ್ಲ. ನಾವು ನಾಡಿನ ಜನತೆಯ ಟೀಮ್ ಅಷ್ಟೇ’ ಎಂದು ತಿರುಗೇಟು ನೀಡಿದರು.

‘ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಕಾಂಗ್ರೆಸ್ ಯಾವ ಟೀಮ್‌ನಲ್ಲಿದೆ. ಇದೆಲ್ಲದ್ದಕ್ಕೂ ಮುಂದೆ ಜನರೇ ತಕ್ಕ ಉತ್ತರ ನೀಡುತ್ತಾರೆ. ರಾಜ್ಯದ 19 ಕಡೆ ನಮ್ಮ ಪಕ್ಷದ ಅಭ್ಯರ್ಥಿಗಳು ಕಣದಲ್ಲಿಲ್ಲ. ಆ ಭಾಗದಲ್ಲಿ ಯಾವ ರೀತಿ ಕೆಲಸ ಮಾಡಬೇಕೆಂಬ ಬಗ್ಗೆ ಮೂರ್ನಾಲ್ಕು ದಿನದಲ್ಲಿ ತೀರ್ಮಾನ ಮಾಡುತ್ತೇವೆ’ ಎಂದು ಹೇಳಿದರು.

ADVERTISEMENT

‘ಅಕಾಲಿಕ ಮಳೆಯಿಂದ ರಾಜ್ಯದ ರೈತರು ಸೇರಿದಂತೆ ಸಾಕಷ್ಟು ಮಂದಿ ತೊಂದರೆಗೆ ಒಳಗಾಗಿದ್ದಾರೆ. ರಾಜ್ಯ ಸರ್ಕಾರ ಕೊಡುವ ಪರಿಹಾರದಿಂದ ರೈತರನ್ನು ಉಳಿಸಲು ಸಾಧ್ಯವಿಲ್ಲ. ನಿಯಮ ಸಡಿಲಿಸಿ ಪರಿಹಾರ ಕೊಡಬೇಕು. ರಾಜ್ಯದಲ್ಲಿ ಕೊರೊನಾ ಸೋಂಕು ದೊಡ್ಡ ಮಟ್ಟದಲ್ಲಿ ಹರಡದಂತೆ ಸರ್ಕಾರ ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿದರು.

‘ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವುದು ಇನ್ನಾದರೂ ನಿಲ್ಲಲ್ಲಿ. ಪಕ್ಷದ ಉಳಿವಿಗೆ ಕುಟುಂಬದವರ ದುಡಿಮೆ ಮುಖ್ಯ. ಬಿಜೆಪಿ, ಕಾಂಗ್ರೆಸ್ ಪಕ್ಷದವರೂ ಕುಟುಂಬ ರಾಜಕಾರಣ ಮಾಡಿದ್ದಾರೆ. ಪರ್ಸೆಂಟೆಜ್‌ ಪ್ರಕರಣದ ಬಗ್ಗೆ ತನಿಖೆ ಮಾಡಲು ಸದನ ಸಮಿತಿ ರಚಿಸಿದರೆ ಪ್ರಯೋಜನವಿಲ್ಲ. ವ್ಯವಸ್ಥೆಯಲ್ಲಿ ಬದಲಾವಣೆ ತರಲು ಸರ್ಕಾರಕ್ಕೆ ಬದ್ಧತೆ ಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.