ADVERTISEMENT

ಕಾಂಗ್ರೆಸ್‌ ಧರಣಿ: ಸರ್ಕಾರದ ವಿರುದ್ಧ ಆಕ್ರೋಶ

ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಹಿಂಪಡೆಯಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2020, 14:51 IST
Last Updated 20 ಆಗಸ್ಟ್ 2020, 14:51 IST
ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿ ಕಾಂಗ್ರೆಸ್‌ ಕಿಸಾನ್‌ ಖೇತ್‌ ಘಟಕದ ಸದಸ್ಯರು ಕೋಲಾರ ತಾಲ್ಲೂಕು ಕಚೇರಿ ಎದುರು ಗುರುವಾರ ಧರಣಿ ನಡೆಸಿದರು.
ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿ ಕಾಂಗ್ರೆಸ್‌ ಕಿಸಾನ್‌ ಖೇತ್‌ ಘಟಕದ ಸದಸ್ಯರು ಕೋಲಾರ ತಾಲ್ಲೂಕು ಕಚೇರಿ ಎದುರು ಗುರುವಾರ ಧರಣಿ ನಡೆಸಿದರು.   

ಕೋಲಾರ: ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿ ಕಾಂಗ್ರೆಸ್‌ ಕಿಸಾನ್‌ ಖೇತ್‌ ಘಟಕದ ಸದಸ್ಯರು ಇಲ್ಲಿ ಗುರುವಾರ ತಾಲ್ಲೂಕು ಕಚೇರಿ ಎದುರು ಧರಣಿ ನಡೆಸಿದರು.

ಪಕ್ಷದ ಕಚೇರಿಯಿಂದ ಮೆರವಣಿಗೆ ಬಂದ ಪಕ್ಷದ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಸರ್ಕಾರ ರಿಯಲ್‌ ಎಸ್ಟೇಟ್‌ ದಂಧೆಕೋರರು, ಬಂಡವಾಳಶಾಹಿಗಳು ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಒತ್ತಡಕ್ಕೆ ಮಣಿದು ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದಿದೆ. ಸರ್ಕಾರದ ಈ ನಡೆ ಖಂಡನೀಯ. ಸರ್ಕಾರಕ್ಕೆ ರೈತಪರ ಕಾಳಜಿಯಿಲ್ಲ’ ಎಂದು ಕಾಂಗ್ರೆಸ್‌ ಕಿಸಾನ್ ಖೇತ್ ರಾಜ್ಯ ಘಟಕದ ಅಧ್ಯಕ್ಷ ಸಚಿನ್ ಮಿಗಾ ಕಿಡಿಕಾರಿದರು.

ADVERTISEMENT

‘ಕೇಂದ್ರ ಮತ್ತು ರಾಜ್ಯ ಸರ್ಕಾರವು ಕೋವಿಡ್‌ ಸಂದರ್ಭ ಬಳಸಿಕೊಂಡು ಸುಗ್ರೀವಾಜ್ಞೆ ಮೂಲಕ ರೈತ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆ ಜಾರಿಗೊಳಿಸುತ್ತಿವೆ. ಸರ್ಕಾರಗಳು ರೈತರನ್ನು ಬೀದಿಗೆ ತಳ್ಳಿ, ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಹಿತ ಕಾಯಲು ಹೊರಟಿವೆ. ಕೊರೊನಾ ಸೋಂಕಿನ ನೆಪದಲ್ಲಿ ಜನರ ತೆರಿಗೆ ಹಣ ಲೂಟಿ ಮಾಡಿದ್ದೇ ಬಿಜೆಪಿ ಸರ್ಕಾರದ ಸಾಧನೆ’ ಎಂದು ಲೇವಡಿ ಮಾಡಿದರು.

ಮೋದಿ ವಿಫಲ: ‘ದೇಶ ಹಾಗೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಬಿಜೆಪಿಯ ದುರಾಡಳಿತದಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಧಾನಿ ಮೋದಿಯವರು ಚುನಾವಣೆ ಪೂರ್ವದಲ್ಲಿ ಕೊಟ್ಟ ಆಶ್ವಾಸನೆ ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ದೇಶದ ಸಂಪತ್ತು ಲೂಟಿ ಮಾಡಿದ ನೀರವ್ ಮೋದಿ ಅವರಂತಹ ವಂಚಕರಿಗೆ ಪ್ರಧಾನಿಯವರು ರಕ್ಷಣೆ ನೀಡುತ್ತಿದ್ದಾರೆ’ ಎಂದು ಧರಣಿನಿರತರು ಆರೋಪಿಸಿದರು.

‘ಸರ್ಕಾರ ಕರ್ನಾಟಕ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಹಾಗೂ ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ಮಾಡಿರುವುದರಿಂದ ರೈತರಿಗೆ ಸಾಕಷ್ಟು ಸಮಸ್ಯೆಯಾಗಿದೆ. ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಕೈಗೊಂಬೆಯಾಗಿರುವ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದ್ದು, ಸಣ್ಣ ಭೂ ಹಿಡುವಳಿದಾರರು ಭೂಮಿ ಕಳೆದುಕೊಳ್ಳುವ ಆತಂಕ ಎದುರಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ರೈತ ಕುಲಕ್ಕೆ ಮಾರಕವಾಗಿರುವ ಕರ್ನಾಟಕ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು. ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ರದ್ದುಪಡಿಸಬೇಕು. ಇಲ್ಲದಿದ್ದರೆ ರಾಜ್ಯದೆಲ್ಲೆಡೆ ತೀವ್ರ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್‌ ಕಿಸಾನ್ ಖೇತ್‌ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷರಾದ ಕುಮಾರ್, ಕೃಷ್ಣಾರೆಡ್ಡಿ, ಸಂಘಟನಾ ಕಾರ್ಯದರ್ಶಿ ಮುನಿಸ್ವಾಮಿರೆಡ್ಡಿ, ಕಾರ್ಯದರ್ಶಿ ಮಂಜುನಾಥ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.