ADVERTISEMENT

ನಗರಸಭೆ ಅಧಿಕಾರದತ್ತ ಕಾಂಗ್ರೆಸ್‌

ರಾಬರ್ಟ್‌ಸನ್‌ಪೇಟೆ ನಗರಸಭಾ ಸದಸ್ಯರಿಗೆ ಪ್ರವಾಸ ಯೋಗ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2020, 4:43 IST
Last Updated 29 ಅಕ್ಟೋಬರ್ 2020, 4:43 IST

ಕೆಜಿಎಫ್‌: ರಾಬರ್ಟ್‌ಸನ್‌ಪೇಟೆ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷೆ ಸ್ಥಾನಕ್ಕಾಗಿ ಅಕ್ಟೋಬರ್‌ 31ರಂದು ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಸಂಖ್ಯಾಬಲವನ್ನು ಹೆಚ್ಚಿಸಿಕೊಂಡಿರುವುದರಿಂದ ಅಧಿಕಾರ ಹಿಡಿಯುವುದು ನಿಶ್ಚಿತವಾಗಿದೆ.

35 ಸದಸ್ಯರ ನಗರಸಭೆಯಲ್ಲಿ ಕಾಂಗ್ರೆಸ್‌ 13, ಬಿಜೆಪಿ 3, ಆರ್‌ಪಿಐ 2, ಜೆಡಿಎಸ್‌ 2 ಮತ್ತು ಸಿಪಿಎಂ 1 ಸ್ಥಾನ ಗಳಿಸಿದೆ. ಶಾಸಕರು ಮತ್ತು ಸಂಸದರನ್ನು ಹೊರತುಪಡಿಸಿದರೆ 18 ಸದಸ್ಯರ ಬೆಂಬಲವಿದ್ದರೆ ಅಧಿಕಾರ ಹಿಡಿಯಲು ಸಾಧ್ಯವಿದೆ. ಈಗಾಗಲೇ ಜೆಡಿಎಸ್‌ ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದೆ. ಉಳಿದಂತೆ ಬಹುತೇಕ ಪಕ್ಷೇತರ ಸದಸ್ಯರು ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ.

ಸಿಪಿಎಂ ಕೂಡ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವ ವಿಶ್ವಾಸವನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಹೊಂದಿದ್ದಾರೆ. ಇದುವರೆಗೂ ಸಿಪಿಎಂ ಪಕ್ಷದ ಬೆಂಬಲವನ್ನು ಯಾರೂ ಕೋರಿಲ್ಲ. ಬೆಂಬಲ ನೀಡುವಂತೆ ಪತ್ರ ನೀಡಿದರೆ ಪರಿಶೀಲಿಸುವುದಾಗಿ ಸಿಪಿಎಂ ಸದಸ್ಯ ತಂಗರಾಜ್‌ ತಿಳಿಸಿದ್ದಾರೆ.

ADVERTISEMENT

ಕೇವಲ ಮೂರು ಸ್ಥಾನವನ್ನು ಹೊಂದಿರುವ ಬಿಜೆಪಿ ಇದುವರೆಗೂ ರಾಜಕೀಯ ದಾಳ ಉರುಳಿಸಿಲ್ಲ. ಆರ್‌ಪಿಐನಿಂದ ಆಯ್ಕೆಯಾಗಿರುವ ಮಾಜಿ ಶಾಸಕ ಎಸ್‌.ರಾಜೇಂದ್ರನ್‌ ಸ್ಪರ್ಧೆಯಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷವು ತನ್ನ ಸದಸ್ಯರನ್ನು ಬುಧವಾರ ಪ್ರವಾಸಕ್ಕೆ ಕರೆದುಕೊಂಡು ಹೋಗಿದೆ. ಪ್ರಸ್ತುತ ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ಸೂಚಿಸುತ್ತಿರುವವರ ಸಂಖ್ಯೆ 26ಕ್ಕೆ ಏರಿದೆ.

ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಉಪಾಧ್ಯಕ್ಷ ಸ್ಥಾನ ಮಹಿಳೆ (ಎ) ನಿಗದಿಯಾಗಿದೆ. ಅಧ್ಯಕ್ಷ ಸ್ಥಾನಕ್ಕಾಗಿ ವಳ್ಳಲ್‌ ಮುನಿಸ್ವಾಮಿ, ಮಾಣಿಕ್ಯಂ, ರಮೇಶ್‌ ಕುಮಾರ್‌, ಜಯಪಾಲ್‌ ಮತ್ತು ಜರ್ಮನ್‌ ಜೂಲಿಯಸ್‌ ಪ್ರಯತ್ನ ಮಾಡುತ್ತಿದ್ದಾರೆ. ಉಪಾಧ್ಯಕ್ಷೆ ಸ್ಥಾನಕ್ಕಾಗಿ ದೇವಿ ಗಣೇಶ್‌, ಜಯಲಕ್ಷ್ಮಿ ಪ್ರಯತ್ನದಲ್ಲಿದ್ದಾರೆ. ಶಾಸಕಿ ಎಂ.ರೂಪಕಲಾ ಅವರ ಸೂಚನೆಯೇ ಅಂತಿಮವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.