ADVERTISEMENT

ಮಾಲೂರು : ಹೊಸ ಸಂವಿಧಾನ ಜಾರಿಗೆ ಷಡ್ಯಂತ್ರ

ತಮಿಳುನಾಡು ಚಿದಂಬರಂ ಕ್ಷೇತ್ರದ ಸಂಸದ ತಿರುಮಾವಳವನ್‌ ಆತಂಕ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2023, 6:10 IST
Last Updated 20 ಫೆಬ್ರುವರಿ 2023, 6:10 IST
ಮಾಲೂರಿನಲ್ಲಿ ಆಯೋಜಿಸಿದ್ದ ಡಾ.ಬಿ.ಆರ್‌. ಅಂಬೇಡ್ಕರ್‌ ಬರಹ ಮತ್ತು ಭಾಷಣದ ಆಡಿಯೊವನ್ನು ತಮಿಳುನಾಡು ಸಂಸದ ತೋಳ್ ತಿರುಮಾವಳವನ್‌ ಹಾಗೂ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಬಿಡುಗಡೆಗೊಳಿಸಿದರು
ಮಾಲೂರಿನಲ್ಲಿ ಆಯೋಜಿಸಿದ್ದ ಡಾ.ಬಿ.ಆರ್‌. ಅಂಬೇಡ್ಕರ್‌ ಬರಹ ಮತ್ತು ಭಾಷಣದ ಆಡಿಯೊವನ್ನು ತಮಿಳುನಾಡು ಸಂಸದ ತೋಳ್ ತಿರುಮಾವಳವನ್‌ ಹಾಗೂ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಬಿಡುಗಡೆಗೊಳಿಸಿದರು   

ಮಾಲೂರು (ಕೋಲಾರ): ‘ದೇಶದಲ್ಲಿ ಹೊಸ ಸಂವಿಧಾನ ಜಾರಿಗೆ ಷಡ್ಯಂತ್ರ ನಡೆದಿದ್ದು, ಸಾಮಾಜಿಕ ನ್ಯಾಯ, ಸಮಾನತೆಗೆ ಅಪಾಯ ಬಂದೊದಗಿದೆ. ಈ ಅಪಾಯ ತಂದೊಡ್ಡಿದವರು ಇಂದು ಸರ್ಕಾರ ನಡೆಸುತ್ತಿದ್ದಾರೆ. ಸಂವಿಧಾನ ರಕ್ಷಣೆಗಾಗಿ ಈ ದೇಶದ ಬಹುಸಂಖ್ಯಾತ ಅಹಿಂದ ಶಕ್ತಿಗಳು, ಪ್ರಜಾಪ್ರಭುತ್ವ ಪ್ರತಿಪಾದಕರು ಒಂದುಗೂಡಬೇಕಿದೆ’ ಎಂದು ತಮಿಳುನಾಡಿನ ಚಿದಂಬರಂ ಸಂಸದ, ವಿಡುದಲೈ ಚಿರುತೈಗಳ್‌ ಕಚ್ಚಿ (ವಿಸಿಕೆ) ನಾಯಕ ತೋಳ್‌ ತಿರುಮಾವಳವನ್‌ ಕರೆ ನೀಡಿದರು.

ಭಾನುವಾರ ಪಟ್ಟಣದ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ಸಿದ್ಧಾರ್ಥ ಆನಂದ್‌ ಅವರ ‘ಸ್ಯಾಮ್‌ ಆಡಿಯೊಸ್‌’ ಹೊರತಂದಿರುವ ಡಾ.ಬಿ.ಆರ್‌. ಅಂಬೇಡ್ಕರ್‌ ಬರಹ, ಭಾಷಣದ ಪ್ರಥಮ ಸಂಪುಟದ ಆಡಿಯೊ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಈಚೆಗೆ ಕಾಶಿಯಲ್ಲಿ 10 ಮುಖಂಡರು ಸೇರಿ ಹೊಸ ಸಂವಿಧಾನದ ಕುರಿತು ಚರ್ಚಿಸಿದ್ದಾರೆ. ಭಾರತದ ಬದಲು ಹಿಂದೂ ರಾಷ್ಟ್ರ ಎಂಬ ಹೆಸರಿಡಲು, ನವದೆಹಲಿ ಬದಲು ವಾರಾಣಸಿಯನ್ನು ರಾಜಧಾನಿಯನ್ನಾಗಿ ಮಾಡಲು ಪ್ರಸ್ತಾಪಿಸಿದ್ದಾರೆ. ತ್ರಿವರ್ಣ ಧ್ವಜದ ಬದಲು ಸ್ವಸ್ತಿಕ್‌ ಚಿಹ್ನೆ ಇರುವ ಖಾದಿ ಧ್ವಜ ತರಲು ಚರ್ಚಿಸಿದ್ದಾರೆ. 2024ರಲ್ಲಿ ಮತ್ತೆ ನರೇಂದ್ರ ಮೋದಿ ಸರ್ಕಾರ ಬಂದ ಕೂಡಲೇ ಹೊಸ ಸಂವಿಧಾನ ಜಾರಿ ಮಾಡುವುದಾಗಿ ಮಾತನಾಡಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ದೇಶದಲ್ಲಿ ಪ್ರಜಾಪ್ರಭುತ್ವ ಹಾಗೂ ಮನುವಾದ ಎಂಬ ಎರಡು ವಿಭಾಗಗಳಾಗಿವೆ. ಸಂಘ ಪರಿವಾರ ಮತ್ತು ಮನುವಾದಿ ಶಕ್ತಿಗಳು ಸಂವಿಧಾನವನ್ನು ನಾಶ ಮಾಡಲು ಹೊರಟಿವೆ. ಹೀಗಾಗಿ, ಅಂಬೇಡ್ಕರ್‌ ಚಿಂತನೆಯುಳ್ಳವರನ್ನು, ನಿಜವಾದ ಅಂಬೇಡ್ಕರ್‌ ವಾದಿಗಳನ್ನು ಗುರುತಿಸಿ ಮತದಾನ ಮಾಡಬೇಕಿದೆ. ಈ ಜಾಗೃತಿ ಮೂಡಿಸಲು ಜನಸಾಮಾನ್ಯರಿಗೆ ಅಂಬೇಡ್ಕರ್‌ ವಿಚಾರಧಾರೆಗಳನ್ನು ತಲುಪಿಸಬೇಕಿದೆ’ ಎಂದರು.

‘ಅಂಬೇಡ್ಕರ್‌ ನಿರ್ದಿಷ್ಟ ಸಮುದಾಯಕ್ಕೆ ಸಂವಿಧಾನ ರಚಿಸಿಲ್ಲ. ಬದಲಾಗಿ ನವ ಭಾರತ ನಿರ್ಮಾಣಕ್ಕಾಗಿ ಸಂವಿಧಾನ ರಚಿಸಿದರು. ಅದಕ್ಕಾಗಿ ಅವರು ಸೈನ್ಯ ಕಟ್ಟಲಿಲ್ಲ. ಯಾವುದೇ ಆಯುಧ ಬಳಸುವ ತರಬೇತಿ ನೀಡಲಿಲ್ಲ. ಕೇವಲ ಲೇಖನ, ಚಿಂತನೆಯಿಂದ ಸಂವಿಧಾನವೆಂಬ ಮಹಾಶಕ್ತಿಯನ್ನು ದೇಶಕ್ಕೆ ಅರ್ಪಿಸಿದರು’ ಎಂದು ಬಣ್ಣಿಸಿದರು.

ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ್‌ ಸ್ವಾಮೀಜಿ ಮಾತನಾಡಿ, ‘ವಿಶ್ವದ 198 ದೇಶಗಳು ಅಂಬೇಡ್ಕರ್‌ ಅವರನ್ನು ಮಹಾಜ್ಞಾನಿಯನ್ನಾಗಿ ನೋಡುತ್ತಿವೆ. ಆದರೆ, ಭಾರತ ಮಾತ್ರ ಇಂದಿಗೂ ಅಂಬೇಡ್ಕರ್‌ ಅವರನ್ನು ಜಾತಿಯಿಂದ ಗುರುತಿಸುತ್ತಿರುವುದು ವಿಪರ್ಯಾಸ’ ಎಂದು ಬೇಸರ ವ್ಯಕ್ತಪಡಿಸಿದರು.

‘ಅಂಬೇಡ್ಕರ್‌ ಜೀವಂತವಿರುವುದು ಫ್ಲೆಕ್ಸ್, ಫೋಟೊ, ಪ್ರತಿಮೆಗಳಲ್ಲಿ ಅಲ್ಲ; ಬದಲಾಗಿ ನಾವು ಹಾಕುವ ವೋಟ್‌ಗಳಲ್ಲಿ. ಅದುವೇ ಮತದಾನದ ಶಕ್ತಿ. ವೋಟು ಹಾಕುವ ಬೆರಳನ್ನು ಮಾರಿಕೊಳ್ಳಬೇಡಿ. ಮತ ನಿಮ್ಮ ಮಗಳಿದ್ದಂತೆ, ಆಕೆಯನ್ನು ಮಾರಾಟ ಮಾಡುತ್ತೀರಾ’ ಎಂದು
ಪ್ರಶ್ನಿಸಿದರು.

‘ಜೈನ್‌ ವಿಶ್ವವಿದ್ಯಾಲಯದಲ್ಲಿ ಅಂಬೇಡ್ಕರ್‌ಗೆ ಅವಮಾನ ಮಾಡಿದರೆಂದು ಜನ ಬೀದಿಗೆ ಬಂದರು. ಆದರೆ, ಅಂಬೇಡ್ಕರ್‌ ಹೇಳಿದ ಮಾತನ್ನು ಈ ದೇಶದಲ್ಲಿ ಯಾರಾದರೂ ಅನುಸರಿಸುತ್ತಿದ್ದಾರೆಯೇ? ಅದಕ್ಕಾಗಿ ಯಾರಾದರೂ ಬೀದಿಗೆ ಬಂದಿದ್ದಾರೆಯೇ’ ಎಂದು ಕೇಳಿದರು.

ಶಾಸಕ ಕೆ.ವೈ. ನಂಜೇಗೌಡ ಮಾತನಾಡಿ, ‘ಸಂವಿಧಾನದ ಆಶಯದಡಿ ದೇಶವನ್ನು ಕಟ್ಟುವ ಕೆಲಸ ಮಾಡಬೇಕು. ಕೆಲವರು ಸಂವಿಧಾನದ ಬದಲಾವಣೆಯ ಬಗ್ಗೆ ಮಾತನಾಡುತ್ತಾರೆ. ಆದರೆ, ಇದು ಎಂದಿಗೂ ಸಾಧ್ಯವಾಗುವುದಿಲ್ಲ’ ಎಂದರು.

ಬಿಎಸ್‌ಪಿ ರಾಜ್ಯ ಅಧ್ಯಕ್ಷ ಕೃಷ್ಣಮೂರ್ತಿ, ಎಸ್‌ಡಿಪಿಐ ರಾಜ್ಯ ಅಧ್ಯಕ್ಷ ಅಬ್ದುಲ್‌ ಮಜೀದ್‌, ಬಿಜೆಪಿ ಮುಖಂಡ ಹೂಡಿ ವಿಜಯಕುಮಾರ್, ಜೆಡಿಎಸ್‌ ಮುಖಂಡರಾದ ಜಿ.ಇ. ರಾಮೇಗೌಡ, ನಜ್ಮಾ ನಜೀರ್‌, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ. ಲಕ್ಷ್ಮಿನಾರಾಯಣ, ಸ್ಯಾಮ್‌ ಆಡಿಯೊಸ್‌ನ ಆನಂದ್‌ ಸಿದ್ಧಾರ್ಥ್‌, ನವೀನ್ ಮಹಾರಾಜ್, ಮಂಜುನಾಥ್ ಆರ್‌. ಹುಣಸಿಕೋಟೆ, ಅನಿಲ್, ಸಂದೀಪ್, ಕೆಂಪರಾಜು, ಟೇಕಲ್ ಶಶಿಧರ್, ಸಂಪಂಗಿ, ಹರೀಶ. ನಾ. ಮುನಿರಾಜು, ಪುರಸಭಾ ಅಧ್ಯಕ್ಷ ಮಂಜುನಾಥ್, ಸದಸ್ಯ ಎಂ.ವಿ. ವೇಮನ, ವಿವಿಧ ಸಂಘಟನೆಯ ಮುಖಂಡರಾದ ಸಂತೋಷ್, ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.