ADVERTISEMENT

ಕೊರೊನಾ: ಸೋಂಕಿತ ಆಸ್ಪತ್ರೆಯಲ್ಲಿ ಕೊನೆಯುಸಿರು

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2020, 14:43 IST
Last Updated 10 ನವೆಂಬರ್ 2020, 14:43 IST

ಕೋಲಾರ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಾವಿನ ಸರಣಿ ಮುಂದುವರಿದಿದ್ದು, ಮಂಗಳವಾರ ಒಬ್ಬರು ಸೋಂಕಿತರು ಮೃತಪಟ್ಟಿದ್ದಾರೆ.

ಜಿಲ್ಲಾ ಕೇಂದ್ರದ ಕೋವಿಡ್‌ ಆಸ್ಪತ್ರೆಗಳಿಗೆ ದಾಖಲಾಗಿರುವ ಸೋಂಕಿತರ ಪೈಕಿ ಕೋಲಾರ ತಾಲ್ಲೂಕಿನ ಒಬ್ಬರು ಸೋಂಕಿತರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಇದರೊಂದಿಗೆ ಸೋಂಕಿತರ ಸಾವಿನ ಸಂಖ್ಯೆ 164ಕ್ಕೆ ಏರಿಕೆಯಾಗಿದೆ.

ಇದರ ಬೆನ್ನಲ್ಲೇ ಹೊಸದಾಗಿ 37 ಮಂದಿಗೆ ಸೋಂಕು ಹರಡಿರುವುದು ದೃಢಪಟ್ಟಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 638ಕ್ಕೆ ಜಿಗಿದಿದೆ. ವಿಷಮ ಶೀತ ಜ್ವರದಿಂದ ಬಳಲುತ್ತಿರುವವರಲ್ಲಿ ಹೆಚ್ಚಾಗಿ ಸೋಂಕು ಕಾಣಿಸಿಕೊಂಡಿದೆ. ಜತೆಗೆ ಸೋಂಕಿತರ ಸಂಪರ್ಕದಿಂದ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಹರಡಿದೆ.

ADVERTISEMENT

ಕೋಲಾರ ತಾಲ್ಲೂಕಿನಲ್ಲಿ ಅತಿ ಹೆಚ್ಚು 14 ಮಂದಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಮಾಲೂರು ತಾಲ್ಲೂಕಿನ 7, ಬಂಗಾರಪೇಟೆ ತಾಲ್ಲೂಕಿನ 2, ಕೆಜಿಎಫ್‌ ಮತ್ತು ಮುಳಬಾಗಿಲು ತಾಲ್ಲೂಕಿನ ತಲಾ 5 ಹಾಗೂ ಶ್ರೀನಿವಾಪುರ ತಾಲ್ಲೂಕಿನ 4 ಮಂದಿಗೆ ಸೋಂಕು ಬಂದಿದೆ. ಈ ಸೋಂಕಿತರ ಮನೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಯಿತು. ಸೋಂಕಿತರ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕ್ವಾರಂಟೈನ್‌ ಮಾಡಲಾಗಿದೆ.

ಹೊಸದಾಗಿ ಪತ್ತೆಯಾದ ಸೋಂಕಿತರ ಸಂಖ್ಯೆಗೆ ಹೋಲಿಸಿದರೆ ಗುಣಮುಖ ಪ್ರಮಾಣದಲ್ಲಿ ಕೊಂಚ ಏರಿಕೆಯಾಗಿದೆ. ಕೋವಿಡ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತರ ಪೈಕಿ 57 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದರು. ಕೋಲಾರ ತಾಲ್ಲೂಕಿನ 11, ಮಾಲೂರು ತಾಲ್ಲೂಕಿನ 18, ಬಂಗಾರಪೇಟೆ ತಾಲ್ಲೂಕಿನ 12, ಕೆಜಿಎಫ್‌ ತಾಲ್ಲೂಕಿನ 7, ಮುಳಬಾಗಿಲು ತಾಲ್ಲೂಕಿನ 6 ಮತ್ತು ಶ್ರೀನಿವಾಸಪುರ ತಾಲ್ಲೂಕಿನ 3 ಮಂದಿಯನ್ನು ಆಸ್ಪತ್ರೆಯಿಂದ ಬೀಳ್ಕೊಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.