ADVERTISEMENT

ಕೊರೊನಾ ಸೋಂಕು: ಪ್ಯಾಕೇಜ್‌ಗೆ ಒತ್ತಾಯ

ಹೆಚ್ಚುವರಿ ಜಿಲ್ಲಾಧಿಕಾರಿಗೆ ಸಿಪಿಎಂ ಕಾರ್ಯಕರ್ತರ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 16:17 IST
Last Updated 24 ಮಾರ್ಚ್ 2020, 16:17 IST
ಕೊರೊನಾ ಸೋಂಕು ನಿಯಂತ್ರಣಕ್ಕೆ ವಿಶೇಷ ಪ್ಯಾಕೇಜ್ ಘೋಷಣೆಗೆ ಒತ್ತಾಯಿಸಿ ಸಿಪಿಎಂ ಕಾರ್ಯಕರ್ತರು ಕೋಲಾರದಲ್ಲಿ ಮಂಗಳವಾರ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಕೊರೊನಾ ಸೋಂಕು ನಿಯಂತ್ರಣಕ್ಕೆ ವಿಶೇಷ ಪ್ಯಾಕೇಜ್ ಘೋಷಣೆಗೆ ಒತ್ತಾಯಿಸಿ ಸಿಪಿಎಂ ಕಾರ್ಯಕರ್ತರು ಕೋಲಾರದಲ್ಲಿ ಮಂಗಳವಾರ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.   

ಕೋಲಾರ: ಸರ್ಕಾರಗಳು ದೇಶ ಹಾಗೂ ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಒತ್ತಾಯಿಸಿ ಸಿಪಿಎಂ ಕಾರ್ಯಕರ್ತರು ಇಲ್ಲಿ ಮಂಗಳವಾರ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

‘ಕೊರೊನಾ ಸೋಂಕಿನ ಭೀತಿಯಿಂದಾಗಿ ದೇಶದೆಲ್ಲೆಡೆ ಜನ ಆತಂಕಗೊಂಡಿದ್ದಾರೆ. ದಿನ ಕಳೆದಂತೆ ಸೋಂಕು ಪ್ರಕರಣಗಳು ಹೆಚ್ಚುತ್ತಿವೆ. ಸೋಂಕು ತಡೆಗೆ ಸರ್ಕಾರಗಳು ಈವರೆಗೆ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ. ಕೋವಿಡ್‌–19 ಕಾರಣಕ್ಕೆ ದೇಶದ ಅರ್ಥ ವ್ಯವಸ್ಥೆ ಬುಡಮೇಲಾಗಿದ್ದು, ಸಣ್ಣ ವ್ಯಾಪಾರಿಗಳು ಹಾಗೂ ಬಡ ಜನರು ಬೀದಿ ಪಾಲಾಗಿದ್ದಾರೆ’ ಎಂದು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು.

‘ದೇಶವು ಕೊರೊನಾ ಸೋಂಕಿನಲ್ಲಿ 3ನೇ ಹಂತ ತಲುಪುವ ಸಂಕಷ್ಟ ಎದುರಾಗಿದೆ. ಕೋವಿಡ್‌–19 ಕಾರಣಕ್ಕೆ ವಾಣಿಜ್ಯ ವಹಿವಾಟು ಸ್ಥಗಿತಗೊಂಡು ಬಡ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಮೊದಲು ಸರ್ಕಾರಗಳು ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಸಿಪಿಎಂ ತಾಲ್ಲೂಕು ಸಮಿತಿ ಕಾರ್ಯದರ್ಶಿ ಟಿ.ಎಂ.ವೆಂಕಟೇಶ್ ಹೇಳಿದರು.

ADVERTISEMENT

‘ಸಾರ್ವಜನಿಕ ಆರೋಗ್ಯ ಸೇವೆಯು ಆಂತರಿಕ ಉತ್ಪಾದನೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಇದರಿಂದ ನಿರುದ್ಯೋಗ ಸಮಸ್ಯೆ ಉಲ್ಭಣಗೊಳ್ಳುವ ಆತಂಕವಿದೆ. ಬಜೆಟ್ ಪೂರ್ವದಲ್ಲಿ ಮತ್ತು ನಂತರದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವುದರಿಂದ ಜನರ ಆದಾಯ ಕಡಿಮೆಯಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ಜನಪರ ಕಾಳಜಿಯಿಲ್ಲ: ‘ಕೊರೊನಾ ಸೋಂಕು ನಿವಾರಣೆಗೆ ರಾಜ್ಯದಲ್ಲಿ ಈವರೆಗೆ ಪ್ಯಾಕೇಜ್‌ ಘೋಷಣೆ ಮಾಡದಿರುವ ಕಾರಣ ಸಮಸ್ಯೆ ತೀವ್ರಗೊಳ್ಳುವ ಆತಂಕ ಎದುರಾಗಿದೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿದೆ. ಸರ್ಕಾರಕ್ಕೆ ಜನಪರ ಕಾಳಜಿಯಿಲ್ಲ’ ಎಂದು ಕಾರ್ಯಕರ್ತರು ದೂರಿದರು.

‘ನೆಗಡಿ, ಜ್ವರ, ಕೆಮ್ಮು ಲಕ್ಷಣಗಳಿರುವವರನ್ನು ಪರೀಕ್ಷಿಸಲು ಸಾಧ್ಯವಾಗುವಂತೆ ಆರೋಗ್ಯ ತಪಾಸಣಾ ಕೇಂದ್ರಗಳನ್ನು ಹೆಚ್ಚಿಸಬೇಕು. ಪ್ರತಿ ಜಿಲ್ಲೆಯಲ್ಲೂ ತಪಾಸಣಾ ಕೇಂದ್ರಗಳು ಇರಬೇಕು. ಸೋಂಕಿತರಿಗೆ ಅಗತ್ಯ ಔಷಧ ಮಾತ್ರೆಯ ವ್ಯವಸ್ಥೆ ಒದಗಿಸಬೇಕು. ಪ್ರತಿ ಆಸ್ಪತ್ರೆಗೂ ಕೃತಕ ಉಸಿರಾಟ ವ್ಯವಸ್ಥೆ ಕಲ್ಪಿಸಬೇಕು. ಕೊರೊನಾ ಸೋಂಕಿನಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

‘ಜನಧನ್ ಖಾತೆ ಮತ್ತು ಬಿಪಿಎಲ್ ಪಡಿತರ ಕುಟುಂಬಳಿಗೆ ಕೂಡಲೇ ₹ 5 ಸಾವಿರ ನಗದು ವರ್ಗಾವಣೆ
ಮಾಡಬೇಕು. ವಿಧವಾ ವೇತನ, ವೃದ್ದಾಪ್ಯ ವೇತನ ಮುಂತಾದ ಪಿಂಚಣಿ ಸೇರಿದಂತೆ ಮಾಸಿಕ ಸಹಾಯಧನ ಪಡೆಯುವವರಿಗೆ ಕನಿಷ್ಠ 3 ತಿಂಗಳ ಹಣವನ್ನು ಮುಂಗಡವಾಗಿ ಬಿಡುಗಡೆ ಮಾಡಬೇಕು’ ಎಂದು ಮನವಿ ಮಾಡಿದರು.

‘ಪಡಿತರ ಜತೆಗೆ ಬೇಳೆ ಕಾಳು, ಅಡುಗೆ ಎಣ್ಣೆ ಸೇರಿದಂತೆ ಜನರಿಗೆ ಅತ್ಯಗತ್ಯವಾದ 16 ಸಾಮಗ್ರಿಗಳನ್ನು ಉಚಿತವಾಗಿ ಒದಗಿಸಬೇಕು. ರಾಜ್ಯ ಸರ್ಕಾರ ವ್ಯಕ್ತಿಯೊಬ್ಬರಿಗೆ 2 ಕೆ.ಜಿ ಅಕ್ಕಿ ಕಡಿತ ಮಾಡಿರುವ ಆದೇಶ ಹಿಂಪಡೆದು ಕನಿಷ್ಠ 12 ಕೆ.ಜಿ ವಿತರಿಸಬೇಕು’ ಎಂದು ಕೋರಿದರು.

ಸಿಪಿಎಂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯೆ ವಿ.ಗೀತಾ, ಜಿಲ್ಲಾ ಸಮಿತಿ ಸದಸ್ಯ ವಿಜಿಕೃಷ್ಣ, ತಾಲ್ಲೂಕು ಸಮಿತಿ ಸದಸ್ಯ ನಾರಾಯಣರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.