ಮುಳಬಾಗಿಲು ನಗರದಲ್ಲಿ ನಡೆದ ತಾಲ್ಲೂಕು ಪ್ರಗತಿ ಪರಿಶೀಲನಾ ಸಭೆ
ಮುಳಬಾಗಿಲು: ನಗರದ ಕೋಮುಲ್ ಶಿಬಿರ ಕಚೇರಿಯಲ್ಲಿ ಶಾಸಕ ಸಮೃದ್ಧಿ ಮಂಜುನಾಥ್ ನೇತೃತ್ವದಲ್ಲಿ ಸೋಮವಾರ ತಾಲ್ಲೂಕು ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಶಾಸಕ ಸಮೃದ್ಧಿ ಮಂಜುನಾಥ್ ಮಾತನಾಡಿ, ‘ಕೆಲವು ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದು, ನನಗೆ ಪರ್ಸೆಂಟೇಜ್ ಕೊಡಬೇಕು ಎಂಬುದಾಗಿ ಹೇಳಿಕೊಂಡು ತಿರುಗುತ್ತಿದ್ದಾರೆ. ಈ ಮೂಲಕ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಇದು ಸರಿಯಲ್ಲ, ನಾನು ಯಾರ ಬಳಿಯಾದರೂ, ಪರ್ಸೆಂಟೇಜ್ ಪಡೆದಿದ್ದರೆ, ನನ್ನ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿ, ಜನರ ಎದುರು ಸತ್ಯಾಸತ್ಯತೆ ಬಿಚ್ಚಿಡಲಿ’ ಎಂದು ಸವಾಲು ಹಾಕಿದರು.
ತಾಲ್ಲೂಕು ಮಟ್ಟದ ಕೆಲವು ಅಧಿಕಾರಿಗಳು ಬಿಟ್ಟರೆ ಉಳಿದಂತೆ ಬಹುತೇಕ ಇಲಾಖೆಗಳ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ತಾಲ್ಲೂಕು ಆಡಳಿತಕ್ಕೆ ಕೆಲವು ಅಧಿಕಾರಿಗಳು ಕಪ್ಪುಚುಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಿದರು.
‘ತಾಲ್ಲೂಕಿನ ನಾಲ್ಕು ಹೋಬಳಿಗಳ ರಾಜಸ್ವ ನಿರೀಕ್ಷಕರು ಸುಮಾರು 7 ವರ್ಷಗಳಿಂದ ಒಂದೇ ಕಡೆ ಇದ್ದಾರೆ. ಅಂಥವರು ಕೂಡಲೇ ತಾವೇ ವರ್ಗಾವಣೆ ಮಾಡಿಸಿಕೊಂಡು ಹೋಗಬೇಕು. ಇಲ್ಲದಿ ದ್ದರೆ, ಅಂಥವರ ವಿರುದ್ಧ ನಾನು ಸದನ ದಲ್ಲಿ ಧ್ವನಿ ಎತ್ತುತ್ತೇನೆ’ ಎಂದು ಹೇಳಿದರು.
ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರಿಗೆ ನಿಗದಿತ ಸಮಯಕ್ಕೆ ರೈತರಿಗೆ ಬೆಂಬಲ ಬೆಲೆ ನೀಡುತ್ತಿಲ್ಲ. ತಾಲ್ಲೂಕು ಆರೋಗ್ಯ ಇಲಾಖೆ ಅಧಿಕಾರಿಗಳು 27 ನಕಲಿ ಕ್ಲಿನಿಕ್‌ಗಳನ್ನು ಮುಚ್ಚಿದ್ದಾರೆ. ಇನ್ನೂ 17 ನಕಲಿ ಕ್ಲಿನಿಕ್‌ಗಳು ತಾಲ್ಲೂಕಿನಲ್ಲಿವೆ. ಅಬಕಾರಿ ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ವಸತಿ ನಿಲಯಗಳಿಗೆ ಅಧಿಕಾರಿಗಳು ಒಂದು ತಿಂಗಳಿನಿಂದ ಅಕ್ಕಿ ಸರಬರಾಜು ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೆಲವು ಶಾಲಾ ಶಿಕ್ಷಕರು 4 ಅಥವಾ 4.15ಕ್ಕೆ ಶಾಲೆಗಳಿಗೆ ಬೀಗ ಹಾಕಿಕೊಂಡು ಬಾಲಾಜಿ ಭವನದ ಸಭೆಗಳಲ್ಲಿ ಕುಳಿತುಕೊಳ್ಳುತ್ತಿದ್ದಾರೆ ಎಂಬ ದೂರುಗಳಿವೆ. ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಬಾಲಾಜಿ ಭವನದಲ್ಲಿ ಟೀ ಕುಡಿದುಕೊಂಡು ಪಾರ್ಟಿ ಮಾಡಿಕೊಳ್ಳುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಕೆಎಸ್ಆರ್‌ಟಿಸಿ ವ್ಯವಸ್ಥಾಪಕರು ತಮಗೆ ಹಿಂಸೆ ನೀಡುತ್ತಿದ್ದಾರೆ ಎಂದು 10 ಚಾಲಕರು ದೂರು ಸಲ್ಲಿಸಿದ್ದಾರೆ. ಇಂಥ ನಡವಳಿಕೆ ಸರಿಪಡಿಸಿಕೊಳ್ಳದಿದ್ದಲ್ಲಿ, ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಎಲ್ಲ ಇಲಾಖೆಗಳ ಅನುದಾನ, ಕ್ರಿಯಾ ಯೋಜನೆ, ಅನುದಾನಗಳ ಹಂಚಿಕೆ, ಕಾಮಗಾರಿ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ತಹಶೀಲ್ದಾರ್ ವಿ. ಗೀತಾ, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಸರ್ವೇಶ್, ನಗರಸಭೆ ಪೌರಾಯುಕ್ತ ವಿ.ಶ್ರೀಧರ್ ಹಾಗೂ ಎಲ್ಲ ಇಲಾಖೆಗಳ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.