ADVERTISEMENT

ಭ್ರಷ್ಟಾಚಾರ– ಅಕ್ರಮ ಹತ್ತಿಕ್ಕುತ್ತೇವೆ

ಕುಂದು ಕೊರತೆ ಸಭೆಯಲ್ಲಿ ಲೋಕಾಯುಕ್ತ ಎಸ್ಪಿ ಅಂಜಲಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 15:55 IST
Last Updated 22 ಆಗಸ್ಟ್ 2019, 15:55 IST
ಕೋಲಾರದಲ್ಲಿ ಗುರುವಾರ ನಡೆದ ಕೊಂದು ಕೊರತೆ ಸಭೆಯಲ್ಲಿ ಲೋಕಾಯುಕ್ತ ಎಸ್ಪಿ ಅಂಜಲಿ ಸಾರ್ವಜನಿಕರ ಅಹವಾಲು ಆಲಿಸಿದರು.
ಕೋಲಾರದಲ್ಲಿ ಗುರುವಾರ ನಡೆದ ಕೊಂದು ಕೊರತೆ ಸಭೆಯಲ್ಲಿ ಲೋಕಾಯುಕ್ತ ಎಸ್ಪಿ ಅಂಜಲಿ ಸಾರ್ವಜನಿಕರ ಅಹವಾಲು ಆಲಿಸಿದರು.   

ಕೋಲಾರ: ‘ಲೋಕಾಯುಕ್ತ ಸಂಸ್ಥೆ ನಿಷ್ಕ್ರಿಯಗೊಂಡಿದೆ. ಅಕ್ರಮ ಹಾಗೂ ಭ್ರಷ್ಟಾಚಾರ ನಡೆಸುವವರ ಮೇಲೆ ದಾಳಿ ನಡೆಸುವ ಅಧಿಕಾರ ಸಂಸ್ಥೆಗೆ ಇಲ್ಲ ಎಂಬ ಭಾವನೆ ಜನರಲ್ಲಿ ಮೂಡಿದೆ. ಆದರೆ. ನಾವು ಭ್ರಷ್ಟಾಚಾರ ನೋಡಿಕೊಂಡು ಸುಮ್ಮನೆ ಕೂರುವವರಲ್ಲ’ ಎಂದು ಲೋಕಾಯುಕ್ತ ಎಸ್ಪಿ ಅಂಜಲಿ ಹೇಳಿದರು.

ಇಲ್ಲಿ ಗುರುವಾರ ನಡೆದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಮಾತಾನಾಡಿ, ‘ನಮಗೆ ಅಕ್ರಮ ಮತ್ತು ಭ್ರಷ್ಟಾಚಾರ ನಡೆಸುವವರ ಮೇಲೆ ದಾಳಿ ನಡೆಸುವ ಅಧಿಕಾರ ಇಲ್ಲದಿದ್ದರೂ ಬೇರೆ ಸಂಸ್ಥೆಗಳ ಮೂಲಕ ದಾಳಿ ಮಾಡಿಸಿ ಶಿಕ್ಷೆ ಕೊಡಿಸುತ್ತೇವೆ’ ಎಂದರು.

‘ಸರ್ಕಾರಿ ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ, ದುರಾಡಳಿತ ಹಾಗೂ ಅಕ್ರಮ ನಡೆದರೆ ಅದನ್ನು ಹತ್ತಿಕ್ಕುವ ಅಧಿಕಾರ ನಮಗೂ ಇದೆ. ಆಡಳಿತ ಯಂತ್ರ ನಿಷ್ಕ್ರಿಯಗೊಳ್ಳದಂತೆ ಅಧಿಕಾರಿಗಳಿಗೆ ಚುರುಕು ಮುಟ್ಟಿಸುತ್ತೇವೆ. ಸಾರ್ವಜನಿಕರು ತಮಗಾಗುವ ತೊಂದರೆಯನ್ನು ಲೋಕಾಯುಕ್ತ ಅಧಿಕಾರಿಗಳ ಗಮನಕ್ಕೆ ತರಬೇಕು’ ಎಂದು ತಿಳಿಸಿದರು.

ADVERTISEMENT

‘ಲೋಕಾಯುಕ್ತ ಸಂಸ್ಥೆಯು ಸಾರ್ವಜನಿಕರ ಸಮಸ್ಯೆ ಬಗೆಹರಿಸಿ ಜನರಿಗೆ ಹತ್ತಿರವಾಗುವ ಕೆಲಸ ಮಾಡುತ್ತಿದೆ. ಜತೆಗೆ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ಲೋಕಾಯುಕ್ತರ ಆದೇಶದಂತೆ ಜಿಲ್ಲೆಗಳಲ್ಲಿ ಕುಂದು ಕೊರತೆ ಸಭೆ ನಡೆಸಿ ಜನರಲ್ಲಿ ಸಂಸ್ಥೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಈ ರೀತಿ ಸಭೆ ನಡೆಸಿ ಜನರನ್ನು ಜಾಗೃತಗೊಳಿಸುತ್ತಿದ್ದೇವೆ. ಇದಕ್ಕೆ ಸಾರ್ವಜನಿಕರ ಸಹಕಾರ ನೀಡಬೇಕು’ ಎಂದು ಕೋರಿದರು.

ಉತ್ತಮ ಸ್ಪಂದನೆ: ‘ಇಂದಿನ ಸಭೆಯಲ್ಲಿ 15 ಅರ್ಜಿ ಬಂದಿದ್ದು, ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. 12 ಅರ್ಜಿಗಳು ಕಂದಾಯ ಇಲಾಖೆಗೆ ಸೇರಿದ್ದು, ಈ ಪೈಕಿ 5 ಅರ್ಜಿ ಖಾತೆಗಳಿಗೆ ಸಂಬಂಧಿಸಿವೆ ಮತ್ತು ಉಳಿದ 7 ಅರ್ಜಿ ಗೋಮಾಳದ ಜಮೀನಿಗೆ ಸಂಬಂಧಪಟ್ಟಿವೆ’ ಎಂದು ಮಾಹಿತಿ ನೀಡಿದರು.

‘ಅರಣ್ಯ ಇಲಾಖೆ ಹಾಗೂ ತಾಲ್ಲೂಕು ಪಂಚಾಯಿತಿಗಳಿಗೆ ಸಂಬಂಧಿಸಿದ ಅರ್ಜಿಗಳೂ ಬಂದಿವೆ. ಈ ಅರ್ಜಿಗಳನ್ನು ಪರಿಶೀಲಿಸಿ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪ್ರತಿ 2 ತಿಂಗಳಿಗೊಮ್ಮೆ ಈ ರೀತಿ ಸಭೆ ನಡೆಸಿ ಸಾರ್ವಜನಿಕರ ಅಹವಾಲು ಆಲಿಸುತ್ತೇವೆ’ ಎಂದು ವಿವರಿಸಿದರು.

ದೂರುಗಳ ಪರಾಮರ್ಶೆ: ‘ಇಂದಿನ ಸಭೆಗೆ 7 ಇಲಾಖೆಗಳ ಅಧಿಕಾರಿಗಳನ್ನು ಕರೆಯಲಾಗಿತ್ತು. ವಿವಿಧ ಇಲಾಖೆಗಳಲ್ಲಿ ಸಾರ್ವಜನಿಕರಿಗೆ ಆಗಬೇಕಾದ ಮತ್ತು ವಿಳಂಬವಾಗಿರುವ ಕೆಲಸ ಕಾರ್ಯದ ಬಗ್ಗೆ ಬಂದಿರುವ ದೂರುಗಳ ಪರಾಮರ್ಶೆ ಮಾಡಲಾಯಿತು’ ಎಂದು ಲೋಕಾಯುಕ್ತ ಡಿವೈಎಸ್ಪಿ ಕೃಷ್ಣಮೂರ್ತಿ ತಿಳಿಸಿದರು.

‘ಸರ್ಕಾರಿ ಅಧಿಕಾರಿಗಳು ಕರ್ತವ್ಯ ಲೋಪವೆಸಗಿದರೆ ಅಥವಾ ದುರಾಡಳಿತ ನಡೆಸಿದರೆ ಅವರನ್ನು ಕಚೇರಿಗಳಿಂದ ಹೊರ ಹಾಕುವ ಅಧಿಕಾರ ನಮಗೂ ಇದೆ. ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳು ಆಡಳಿತದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು’ ಎಂದು ಸೂಚಿಸಿದರು.

ಸುಳ್ಳು ದಾಖಲೆಪತ್ರ ಸೃಷ್ಟಿ: ‘ನಾವು ಗ್ರಾಮದಲ್ಲಿ ಖರೀದಿಸಿದ್ದ ನಿವೇಶನಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರು ಸುಳ್ಳು ದಾಖಲೆಪತ್ರ ಸೃಷ್ಟಿಸಿ ತೊಂದರೆ ನೀಡುತ್ತಿದ್ದಾರೆ. ಈ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ’ ಎಂದು ತಾಲ್ಲೂಕಿನ ನಾಯಕರಹಳ್ಳಿಯ ವನಜಾಕ್ಷಮ್ಮ ಅಳಲು ತೋಡಿಕೊಂಡರು.

‘ನಮ್ಮ ನಿವೇಶನದ ಹಕ್ಕುಪತ್ರದಲ್ಲಿ ಹೆಸರು ಬದಲಾವಣೆಯಾಗಿದೆ. ಈ ಸಮಸ್ಯೆ ಪರಿಹರಿಸಿಕೊಡಬೇಕು’ ಎಂದು ತಾಲ್ಲೂಕಿನ ಈಲಂ ಗ್ರಾಮದ ಸುಮಿತ್ರ ಕುಮಾರಿ ಮನವಿ ಮಾಡಿದರು.

ಲೋಕಾಯುಕ್ತ ಇನ್‌ಸ್ಪೆಕ್ಟರ್‌ ಪವನ್‌ಕುಮಾರ್, ತಹಶೀಲ್ದಾರ್ ನಾಗವೇಣಿ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಬಾಬು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.