ADVERTISEMENT

ಕೋವಿಡ್‌ ಆಸ್ಪತ್ರೆ: ನೆರವು ಕೋರಿಕೆ

ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು

​ಪ್ರಜಾವಾಣಿ ವಾರ್ತೆ
Published 16 ಮೇ 2021, 15:09 IST
Last Updated 16 ಮೇ 2021, 15:09 IST
ಜಿಲ್ಲೆಯಲ್ಲಿ ಕೋವಿಡ್ ಆಸ್ಪತ್ರೆ ನಿರ್ಮಾಣಕ್ಕೆ ಸಹಕಾರ ಕೋರಿ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಅವರು ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಅವರಿಗೆ ಕೋಲಾರದಲ್ಲಿ ಶನಿವಾರ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ಕೋವಿಡ್ ಆಸ್ಪತ್ರೆ ನಿರ್ಮಾಣಕ್ಕೆ ಸಹಕಾರ ಕೋರಿ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಅವರು ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಅವರಿಗೆ ಕೋಲಾರದಲ್ಲಿ ಶನಿವಾರ ಮನವಿ ಸಲ್ಲಿಸಿದರು.   

ಕೋಲಾರ: ಜಿಲ್ಲೆಯಲ್ಲಿ ಸಾರ್ವಜನಿಕರು ಹಾಗೂ ಸರ್ಕಾರದ ಸಹಭಾಗಿತ್ವದಲ್ಲಿ 200 ಹಾಸಿಗೆ ಸಾಮರ್ಥ್ಯದ ಕೋವಿಡ್ ಆಸ್ಪತ್ರೆ ನಿರ್ಮಿಸಲು ನಿರ್ಧರಿಸಿದ್ದು, ಇದಕ್ಕೆ ಸಹಕಾರ ನೀಡಬೇಕೆಂದು ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಅವರಿಗೆ ಇಲ್ಲಿ ಶನಿವಾರ ಮನವಿ ಸಲ್ಲಿಸಿದರು.

‘ದೇಶದೆಲ್ಲೆಡೆ ಕೋವಿಡ್- 2ನೇ ಅಲೆ ಆರ್ಭಟ ಜೋರಾಗಿದೆ. ಕೊರೊನಾ ಸೋಂಕಿತ ಬಡ ಜನರು ವೈದ್ಯಕೀಯ ಸೇವೆ, ಬೆಡ್‌ ಮತ್ತು ವೈದ್ಯಕೀಯ ಆಮ್ಲಜನಕಕ್ಕೆ ಪರಿತಪಿಸಿದ ರೀತಿ ನೋಡಿದರೆ ಮನ ಕಲಕುತ್ತದೆ. ನಾನೊಬ್ಬ ಜನಪ್ರತಿನಿಧಿಯಾಗಿ ಕೊರೊನಾ ಸೋಂಕಿತರಿಗೆ ಕನಿಷ್ಠ ವೈದ್ಯಕೀಯ ಆಮ್ಲಜನಕ ಸಂಪರ್ಕವುಳ್ಳ ಬೆಡ್ ಕೊಡಿಸಲು ಸಾಧ್ಯವಾಗಲಿಲ್ಲ’ ಎಂದು ಗೋವಿಂದರಾಜು ವಿಷಾದಿಸಿದರು.

‘ಕಣ್ಣ ಮುಂದೆಯೇ ಕೊರೊನಾ ಸೋಂಕಿತರು ವೈದ್ಯಕೀಯ ಆಮ್ಲಜನಕ ಸಿಗದೆ ನರಳಾಡಿ ಮೃತಪಟ್ಟಿರುವುದು ಹಾಗೂ ಅವರ ಕುಟುಂಬ ಸದಸ್ಯರ ಅಳಲು ನೋಡಿ ಮನಸ್ಸಿಗೆ ತುಂಬಾ ನೋವಾಗಿದೆ. ಹಲವು ಸ್ನೇಹಿತರು ನನಗೆ ಕರೆ ಮಾಡಿ ಜಿಲ್ಲೆಯ ಜನರ ಹಿತದೃಷ್ಟಿಯಿಂದ ವೈದ್ಯಕೀಯ ಆಮ್ಲಜನಕ ಮತ್ತು ವೆಂಟಿಲೇಟರ್‌ ಸೌಲಭ್ಯವುಳ್ಳ ಕೋವಿಡ್‌ ಆಸ್ಪತ್ರೆ ನಿರ್ಮಿಸುವಂತೆ ಸಲಹೆ ನೀಡಿದ್ದಾರೆ. ಅಲ್ಲದೇ, ಆಸ್ಪತ್ರೆ ನಿರ್ಮಾಣಕ್ಕೆ ನೆರವು ನೀಡುವುದಾಗಿ ಹೇಳಿದ್ದಾರೆ’ ಎಂದರು.

ADVERTISEMENT

‘ಟ್ರಸ್ಟ್ ಸ್ಥಾಪಿಸಿ ಜಿಲ್ಲೆಯಲ್ಲಿ ಸುಸಜ್ಜಿತ ಕೋವಿಡ್ ಆಸ್ಪತ್ರೆ ನಿರ್ಮಿಸುವಂತೆ ಸ್ನೇಹಿತರು ಹೇಳಿದ್ದಾರೆ. ವೈದ್ಯಕೀಯ ಆಮ್ಲಜನಕದ ಸೌಲಭ್ಯವುಳ್ಳ 175 ಹಾಸಿಗೆ ಸಾಮರ್ಥ್ಯದ ಸಾಮಾನ್ಯ ವಾರ್ಡ್‌ಗಳು, ಆಮ್ಲಜನಕದ ಜತೆಗೆ ವೆಂಟಿಲೇಟರ್‌ ಸಂಪರ್ಕವುಳ್ಳ 25 ಹಾಸಿಗೆಗಳ ತೀವ್ರ ನಿಗಾ ಘಟಕ ಮತ್ತು 25 ವಿಶೇಷ ವಾಡ್ಸ್‌ ನಿರ್ಮಿಸಲು ಉದ್ದೇಶಿಸಲಾಗಿದೆ’ ಎಂದು ತಿಳಿಸಿದರು.

ಜಿಲ್ಲೆಗೆ ಅನುಕೂಲ: ‘ಆಸ್ಪತ್ರೆ ನಿರ್ಮಾಣದಿಂದ ಭವಿಷ್ಯದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭ ಸೇರಿದಂತೆ ಜಿಲ್ಲೆಗೆ ಎಲ್ಲಾ ರೀತಿಯಲ್ಲೂ ಅನುಕೂಲವಾಗುತ್ತದೆ. ಜಿಲ್ಲಾಡಳಿತವು ಆಸ್ಪತ್ರೆಗೆ ಸೂಕ್ತ ಜಾಗ ನೀಡಿ ಕಟ್ಟಡ ಕಾಮಗಾರಿ ಆರಂಭಿಸಬೇಕು. ಬಳಿಕ ವೈದ್ಯಕೀಯ ಸಿಬ್ಬಂದಿ, ಅರೆ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಿಕೊಡಬೇಕು’ ಎಂದು ಕೋರಿದರು.

‘ಆಸ್ಪತ್ರೆ ನಿರ್ಮಾಣಕ್ಕೆ ಶಾಸಕರ ನಿಧಿಯ ಅನುದಾನದಲ್ಲಿ ₹ 2 ಕೋಟಿ ಮತ್ತು ವೈಯಕ್ತಿಕವಾಗಿ ₹ 3 ಕೋಟಿ ಕೊಡುತ್ತೇನೆ. ಜತೆಗೆ ಸ್ನೇಹಿತರಿಂದ ಹಣಕಾಸು ನೆರವು ಪಡೆಯುತ್ತೇನೆ. ಮುಖ್ಯಮಂತ್ರಿಗಳು ಆಸ್ಪತ್ರೆ ನಿರ್ಮಾಣದ ಬೇಡಿಕೆಗೆ ಸ್ಪಂದಿಸಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.