ADVERTISEMENT

ಕೋಲಾರ: ಜಿಲ್ಲೆಯಲ್ಲಿ ಕೋವಿಡ್‌ ಮರಣ ಮೃದಂಗ

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 14:16 IST
Last Updated 27 ಜುಲೈ 2021, 14:16 IST

ಕೋಲಾರ: ಜಿಲ್ಲೆಯಲ್ಲಿ ಕೋವಿಡ್‌ ಮರಣ ಮೃದಂಗ ಮುಂದುವರಿದಿದ್ದು, ಮಂಗಳವಾರ 4 ಮಂದಿ ಕೊರೊನಾ ಸೋಂಕಿತರು ಕೊನೆಯುಸಿರೆಳೆದಿದ್ದಾರೆ. ಇದರೊಂದಿಗೆ ಸೋಂಕಿತರ ಸಾವಿನ ಸಂಖ್ಯೆ 561ಕ್ಕೆ ಏರಿಕೆಯಾಗಿದೆ.

ಜಿಲ್ಲಾ ಕೇಂದ್ರದ ಕೋವಿಡ್‌ ಆಸ್ಪತ್ರೆಗಳಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಕೊರೊನಾ ಸೋಂಕಿತರ ಪೈಕಿ ಬಂಗಾರಪೇಟೆ ತಾಲ್ಲೂಕಿನ ಇಬ್ಬರು, ಮುಳಬಾಗಿಲು ಹಾಗೂ ಶ್ರೀನಿವಾಸಪುರ ತಾಲ್ಲೂಕಿನ ತಲಾ ಒಬ್ಬರು ಮೃತಪಟ್ಟಿದ್ದಾರೆ.

ಇದರ ಬೆನ್ನಲ್ಲೇ ಹೊಸದಾಗಿ 45 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 330ಕ್ಕೆ ಇಳಿಕೆಯಾಗಿದೆ. ಕೋಲಾರ ತಾಲ್ಲೂಕಿನ 15 ಮಂದಿಗೆ, ಮಾಲೂರು ತಾಲ್ಲೂಕಿನ ಇಬ್ಬರಿಗೆ, ಬಂಗಾರಪೇಟೆ ತಾಲ್ಲೂಕಿನ 7 ಮಂದಿಗೆ, ಕೆಜಿಎಫ್‌ ತಾಲ್ಲೂಕಿನ 10 ಮಂದಿಗೆ, ಮುಳಬಾಗಿಲು ತಾಲ್ಲೂಕಿನ 6 ಮಂದಿಗೆ ಹಾಗೂ ಶ್ರೀನಿವಾಸಪುರ ತಾಲ್ಲೂಕಿನ 5 ಮಂದಿಗೆ ಸೋಂಕು ಬಂದಿದೆ.

ADVERTISEMENT

ಈ ಸೋಂಕಿತರ ಮನೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಯಿತು. ಸೋಂಕಿತರ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕ್ವಾರಂಟೈನ್‌ ಮಾಡಲಾಗಿದೆ. ಕೋವಿಡ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತರ ಪೈಕಿ 47 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದರು.

ಕೋಲಾರ ತಾಲ್ಲೂಕಿನ 14 ಮಂದಿ, ಮಾಲೂರು ಮತ್ತು ಮುಳಬಾಗಿಲು ತಾಲ್ಲೂಕಿನ ತಲಾ 4 ಮಂದಿ, ಬಂಗಾರಪೇಟೆ ತಾಲ್ಲೂಕಿನ ಒಬ್ಬರು, ಕೆಜಿಎಫ್‌ ತಾಲ್ಲೂಕಿನ 21 ಮಂದಿ ಹಾಗೂ ಶ್ರೀನಿವಾಸಪುರ ತಾಲ್ಲೂಕಿನ ಮೂವರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.