ಕೋಲಾರ: ‘ಅಡುಗೆ ಅನಿಲ ಏಜೆನ್ಸಿಯವರು ಸಿಲಿಂಡರ್‌ಗೆ ಗ್ರಾಹಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಸಂಬಂಧ ದೂರು ಬಂದಿದ್ದು, ಇದು ಮುಂದುವರಿದರೆ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಎಚ್ಚರಿಕೆ ನೀಡಿದರು.
ಇಲ್ಲಿ ಮಂಗಳವಾರ ನಡೆದ ಅಡುಗೆ ಅನಿಲ ಏಜೆನ್ಸಿ ಮಾಲೀಕರ ಸಭೆಯಲ್ಲಿ ಮಾತನಾಡಿ, ‘ಕೇಂದ್ರ ಸರ್ಕಾರ ಗ್ರಾಹಕರ ಹಿತದೃಷ್ಟಿಯಿಂದ ಸಬ್ಸಿಡಿ ರೂಪದಲ್ಲಿ ಕೋಟ್ಯಂತರ ರೂಪಾಯಿ ನೀಡುತ್ತಿದೆ. ಸಬ್ಸಿಡಿ ದುರುಪಯೋಗ ಆಗಬಾರದು. ಏಜೆನ್ಸಿ ಮಾಲೀಕರು ಎಚ್ಚರಿಕೆ ವಹಿಸಿ ಫಲಾನುಭವಿಗಳಿಗೆ ಸಬ್ಸಿಡಿ ತಲುಪಿಸಬೇಕು’ ಎಂದು ಸೂಚಿಸಿದರು.
‘ಗ್ರಾಹಕರಿಗೆ ತೊಂದರೆಯಾದರೆ ದೂರು ಕೊಡುತ್ತಾರೆ. ಏಜೆನ್ಸಿ ಮಾಲೀಕರು ಗ್ರಾಹಕರ ತೊಂದರೆ ಅರಿತು ಸರಿ ಹೋಗದಿದ್ದರೆ ಅದಕ್ಕೆ ಏನು ಮಾಡಬೇಕೆಂದು ನಮಗೆ ಗೊತ್ತಿದೆ. ಅದಕ್ಕೆ ಆಸ್ಪದ ಇಲ್ಲದಂತೆ ನಡೆದುಕೊಳ್ಳಿ’ ಎಂದು ತಾಕೀತು ಮಾಡಿದರು.
‘ಸಿಲಿಂಡರ್‌ಗೆ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಹಣ ಪಡೆಯುವುದು ಸರಿಯಲ್ಲ. ನಗರ ಮತ್ತು ಪಟ್ಟಣ ವ್ಯಾಪ್ತಿಯಿಂದ 5 ಕಿ.ಮೀವರೆಗಿನ ಮನೆಗಳಿಗೆ ಉಚಿತವಾಗಿ ಸಿಲಿಂಡರ್ ತಲುಪಿಸಬೇಕು. 5 ಕಿ.ಮೀನಿಂದ 10 ಕಿ.ಮೀವರೆಗೆ ₹ 7.50 ತೆಗೆದುಕೊಳ್ಳಬೇಕೆಂಬ ನಿಯಮವಿದೆ. ಆದರೆ, ನಗರದಲ್ಲೇ ಸಿಲಿಂಡರ್‌ಗೆ ಹೆಚ್ಚುವರಿಯಾಗಿ ಹಣ ಪಡೆಯಲಾಗುತ್ತಿದೆ. ಜತೆಗೆ ಗ್ರಾಹಕರಿಗೆ ಬಿಲ್ ಸಹ ಕೊಡುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸೀಮೆಎಣ್ಣೆ ನಿಲ್ಲಿಸಿ: ‘ಅಡುಗೆ ಅನಿಲ ಸೌಲಭ್ಯ ಪಡೆಯುತ್ತಿರುವವರಿಗೆ ಸೀಮೆಎಣ್ಣೆ ಸೌಕರ್ಯ ಇರುವುದಿಲ್ಲ. ಜಿಲ್ಲೆಯಲ್ಲಿ ಎಷ್ಟು ಮಂದಿ ಅಡುಗೆ ಅನಿಲ ಸೌಲಭ್ಯ ಪಡೆಯುತ್ತಿದ್ದಾರೆ ಎಂಬ ಮಾಹಿತಿ ನೀಡಬೇಕು. ಅಡುಗೆ ಅನಿಲ ಸೌಲಭ್ಯ ಪಡೆದಿರುವವರು ಸೀಮೆಎಣ್ಣೆಯನ್ನೂ ಪಡೆದರೆ ಸರ್ಕಾರಕ್ಕೆ ಹೊರೆಯಾಗುತ್ತದೆ. ಅಡುಗೆ ಅನಿಲ ಸೌಲಭ್ಯ ಪಡೆಯುತ್ತಿರುವವರಿಗೆ ಸೀಮೆಎಣ್ಣೆ ನಿಲ್ಲಿಸಿ’ ಎಂದು ಆದೇಶಿಸಿದರು.
‘ಒಂದು ವಾರದೊಳಗೆ ಅಡುಗೆ ಅನಿಲ ಬಳಕೆದಾರರ ಮಾಹಿತಿ ಸಲ್ಲಿಸಿ’ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ಯಾಸ್ ಏಜೆನ್ಸಿಗಳ ಮಾಲೀಕರು, ‘ಒಂದು ವಾರದೊಳಗೆ ಮಾಹಿತಿ ಕೊಡಲು ಆಗುವುದಿಲ್ಲ. ನಮಗೆ ಹೆಚ್ಚಿನ ಕಾಲಾವಕಾಶ ಬೇಕು’ ಎಂದರು.
ಇದಕ್ಕೆ ಸಿಡಿಮಿಡಿಗೊಂಡ ಜಿಲ್ಲಾಧಿಕಾರಿ, ‘ನೀವು ಹೇಳಿದ್ದನ್ನೆಲ್ಲಾ ಕೇಳಿಕೊಂಡು ಕೂರಲು ಸಾಧ್ಯವಿಲ್ಲ. ನಮಗೂ ಕೆಲ ಇತಿಮಿತಿಗಳಿವೆ’ ಎಂದು ಗುಡುಗಿದರು. ಆಗ ಏಜೆನ್ಸಿ ಮಾಲೀಕರು, ‘ಒಂದು ತಿಂಗಳೊಳಗೆ ಮಾಹಿತಿ ನೀಡುತ್ತೇವೆ’ ಎಂದು ಹೇಳಿದರು.
ಗೊತ್ತಾಗುವುದಿಲ್ಲ: ‘ಏಜೆನ್ಸಿಯ ಕೆಲಸದ ಹುಡುಗರು ಗ್ರಾಹಕರಿಂದ ಹೆಚ್ಚುವರಿಯಾಗಿ ಹಣ ತೆಗೆದುಕೊಳ್ಳುವುದಿಲ್ಲ. ಗ್ರಾಹಕರೇ ಇಚ್ಛೆಪಟ್ಟು ಹಣ ಕೊಟ್ಟರೆ ಮಾತ್ರ ತೆಗೆದುಕೊಳ್ಳುತ್ತಾರೆ. ಅದು ನಮಗೆ ಗೊತ್ತಾಗುವುದಿಲ್ಲ’ ಎಂದು ಗ್ಯಾಸ್ ಏಜೆನ್ಸಿಗಳ ಮಾಲೀಕರು ಸ್ಪಷ್ಟಪಡಿಸಿದರು.
‘ಉಜ್ವಲ ಯೋಜನೆ ಫಲಾನುಭವಿಗಳೆಷ್ಟು, ಯಾರು ಈ ಯೋಜನೆಯ ಪ್ರಯೋಜನ ಪಡೆದಿದ್ದಾರೆ ಎಂಬ ಮಾಹಿತಿಯನ್ನು ಒದಗಿಸಿ’ ಎಂದು ಜಿಲ್ಲಾಧಿಕಾರಿ ಕೋರಿದರು. ವಿವಿಧ ಕಂಪನಿಗಳ ಗ್ಯಾಸ್ ಏಜೆನ್ಸಿ ಮಾಲೀಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.