ADVERTISEMENT

ಮತೀಯ ಸಂಘರ್ಷ ಸೃಷ್ಟಿ

ಬಿಜೆಪಿ, ಕಾಂಗ್ರೆಸ್ ಧೋರಣೆ ವಿರುದ್ಧ ಸಿ.ಎಂ. ಇಬ್ರಾಹಿಂ ಆರೋಪ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2023, 5:52 IST
Last Updated 21 ಮಾರ್ಚ್ 2023, 5:52 IST
ಮುಳಬಾಗಿಲು ನಗರದಲ್ಲಿ ಸೋಮವಾರ ನಡೆದ ಜೆಡಿಎಸ್ ಅಲ್ಪಸಂಖ್ಯಾತರ ಬೃಹತ್ ಸಮಾವೇಶದಲ್ಲಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಮಾತನಾಡಿದರು
ಮುಳಬಾಗಿಲು ನಗರದಲ್ಲಿ ಸೋಮವಾರ ನಡೆದ ಜೆಡಿಎಸ್ ಅಲ್ಪಸಂಖ್ಯಾತರ ಬೃಹತ್ ಸಮಾವೇಶದಲ್ಲಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಮಾತನಾಡಿದರು   

ಮುಳಬಾಗಿಲು: ‘ರಾಜ್ಯದಲ್ಲಿ ಹಿಜಾಬ್ ವಿಚಾರದಲ್ಲಿ ಹಿಂದೂ, ಮುಸ್ಲಿಂಮರ ನಡುವೆ ಮತೀಯ ಸಂಘರ್ಷ ಸೃಷ್ಟಿಸಿದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷವನ್ನು ಮತದಾರರು ದೂರ ಇಟ್ಟು ರಾಜ್ಯದಲ್ಲಿ ಜೆಡಿಎಸ್ ಅನ್ನು ಅಧಿಕಾರಕ್ಕೆ ತರಬೇಕು’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದರು.

ಸೋಮವಾರ ನಗರದಲ್ಲಿ ನಡೆದ ಅಲ್ಪಸಂಖ್ಯಾತರ ಬೃಹತ್ ಸಮಾವೇಶದಲ್ಲಿ ಮಾತನಾಡಿದರು.

ಎಚ್.ಡಿ. ದೇವೇಗೌಡ ಪ್ರಧಾನ ಮಂತ್ರಿಯಾಗಿದ್ದಾಗ ಹಾಗೂ ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಿ ದ್ದಾಗ ರಾಜ್ಯ ಮತ್ತು ದೇಶದಲ್ಲಿ ಹಿಂದೂ, ಮುಸ್ಲಿಮರು ಒಂದೇ ತಾಯಿಯ ಮಕ್ಕಳಂತೆ ಜೀವನ ನಡೆಸುತ್ತಿದ್ದರು. ಆದರೆ, ಬಿಜೆಪಿ ಮತ್ತು ಕಾಂಗ್ರೆಸ್‌ನ ಅಧಿಕಾರದ ಅವಧಿಯಲ್ಲಿ ಮತೀಯ ಸಂಘರ್ಷ ನಡೆಯುತ್ತಿದೆ ಎಂದು ಹೇಳಿದರು.

ADVERTISEMENT

ಹಿಜಾಬ್ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ಮುಸ್ಲಿಮರ ಸಂಸ್ಕೃತಿ ಮತ್ತು ಸಂಪ್ರದಾಯದ ಮೇಲೆ ಸವಾರಿ ಮಾಡುತ್ತಿದೆ. ಹೀಗಾಗಿ, ಅನೇಕ ವರ್ಷಗಳಿಂದ ಸಹೋದರರಂತೆ ಸಾಗುತ್ತಿದ್ದ ಹಿಂದೂ‌, ಮುಸ್ಲಿಮರ ಪರಿಸ್ಥಿತಿ ಇಂದು ಏನಾಗಿದೆ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಎಲ್ಲಾ ಮಹಿಳಾ ಸಂಘಗಳ ಸಾಲ ಮನ್ನಾ ಮಾಡಲಾಗುವುದು. ಪ್ರತಿ ವ್ಯಕ್ತಿಗೆ ಹತ್ತು ಕೆ.ಜಿ ಅಕ್ಕಿ ನೀಡಲು ಕ್ರಮ ಕೈಗೊಳ್ಳಲಾಗುವುದು. ಉದ್ಯೋಗ ಸೃಷ್ಟಿಸಲಾಗುವುದು ಎಂದು ಹೇಳಿದರು.

ಸಂಸದ ಮುನಿಸ್ವಾಮಿ ಕೋಲಾರದ ಕ್ಲಾಕ್ ಟವರ್ ಮೇಲೆ ಬಾವುಟ ಹಾರಿಸಿದಾಗಿನಿಂದಲೂ ನಾನೇ ಹೀರೊ ಎನ್ನುತ್ತಿದ್ದಾರೆ. ಕೇವಲ ಎರಡೇ ವರ್ಷದಲ್ಲಿ ಮುನಿಸ್ವಾಮಿ ಎಲ್ಲೂ ಕಾಣಿಸುವುದಿಲ್ಲ. ಕೆ.ಎಚ್. ಮುನಿಯಪ್ಪ ಅವರಿಗೆ ಆದ ಗತಿಯೇ ಮುನಿಸ್ವಾಮಿಗೂ ಆಗಲಿದೆ ಎಂದು ತಿಳಿಸಿದರು.

ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಮೃದ್ದಿ ಮಂಜುನಾಥ್ ಮಾತನಾಡಿ, ‘ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ನಗರದ ಕುರುಬ ಪೇಟೆಯಿಂದ ಸೋಲನ್ನಪ್ಪಿದೆ. ಆದರೆ, ಈ ಬಾರಿ ಅದೇ ಕುರುಬ ಪೇಟೆಯಿಂದ ಗೆಲುವನ್ನು ಪಡೆಯಲಿದ್ದೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಮುಸ್ಲಿಂ ಮತದಾರರನ್ನು ಯಾಮಾರಿಸಿ ಮತ ಪಡೆದು ಬಿಜೆಪಿಗೆ ಬೆಂಬಲ ಸೂಚಿಸಿತು. ಇದನ್ನು ಅರ್ಥ ಮಾಡಿಕೊಂಡು ಮುಸ್ಲಿಂ ಬಾಂಧವರು ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಬುದ್ಧಿ ಕಲಿಸಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಕಾಡೇನಹಳ್ಳಿ ನಾಗರಾಜ್, ಕೆ.ವಿ. ಶಂಕರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಕ್ಕಲೇರಿ ರಾಮಣ್ಣ, ನಗರಸಭೆ ಮಾಜಿ ಅಧ್ಯಕ್ಷ ಎಂ.ಆರ್. ಮುರಳಿ, ಮುಖಂಡರಾದ ಸಾಮೇಗೌಡ, ಅಪ್ಸರ್, ರೋಷನ್, ಇಮ್ರಾನ್ ಖಾನ್, ರಘುಪತಿ ರೆಡ್ಡಿ, ಎಂ. ಗೊಲ್ಲಹಳ್ಳಿ ಪ್ರಭಾಕರ್, ವರದಪ್ಪ, ಗೊಲ್ಲಹಳ್ಳಿ ಜಗದೀಶ್, ಶ್ರೀನಿವಾಸರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.