ADVERTISEMENT

ಸೆ. 6ಕ್ಕೆ ದಲಿತ ಹೋರಾಟಗಾರರ ಸಮಾಲೋಚನಾ ಸಮಾವೇಶ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 12:22 IST
Last Updated 31 ಆಗಸ್ಟ್ 2018, 12:22 IST

ಕೋಲಾರ: ‘ದಲಿತರ ಹಕ್ಕೋತ್ತಾಯ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನ ಸೆನೆಟ್ ಸಭಾಂಗಣದಲ್ಲಿ ಸೆ.6ರಂದು ದಕ್ಷಿಣ ಭಾರತ ದಲಿತ ಹೋರಾಟಗಾರರ ಸಮಾಲೋಚನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಸಂಘಟನಾ ಸಂಚಾಲಕ ಎನ್.ವೆಂಕಟೇಶ್ ತಿಳಿಸಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮನುವಾದದ ಆಕ್ರಮಣ ಹಿಮ್ಮೆಟ್ಟಿಸಿ ದಲಿತರ ಹಕ್ಕೋತ್ತಾಯ ಈಡೇರಿಸಲು ಹಮ್ಮಿಕೊಂಡಿರುವ ಸಮಾವೇಶದಲ್ಲಿ ದೇಶದ 500ಕ್ಕೂ ಹೆಚ್ಚು ಹೋರಾಟಗಾರರು ಭಾಗವಹಿಸುತ್ತಾರೆ. ಜತೆಗೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಸೆ.5ರಂದು ಪ್ರತಿಭಟನೆ ಸಹ ನಡೆಸಲಾಗುತ್ತದೆ’ ಎಂದರು.

‘ಗುಜರಾತ್‌ ಶಾಸಕ ಜಿಗ್ನೇಶ್‌ ಮೇವಾನಿ ಸಮಾವೇಶಕ್ಕೆ ಚಾಲನೆ ನೀಡಲಿದ್ದು, ಅತಿಥಿಗಳಾಗಿ ಸಾಹಿತಿ ದೇವನೂರು ಮಹದೇವ, ವಕೀಲ ಪ್ರೊ.ರವಿವರ್ಮಕುಮಾರ್, ಮುಂಬೈನ ತೀಸ್ತಾ ಸೆಟಲ್ವಾಡ್‌, ಹೈದರಬಾದ್‌ನ ವಿನೋದ್‌ಕುಮಾರ್‌, ಚೆನ್ನೈನ ಬಾಲಸಿಂಗಮ್, ಆಂಧ್ರಪ್ರದೇಶದ ಶಿವಪ್ರಸಾದ್, ಒಡಿಶಾದ ಲಿಂಗರಾಜು, ಗುಂಟೂರಿನ ಬಿ.ಎಂ.ಸುಬ್ಬರಾವ್, ಕೇರಳದ ಜೋಶಿ ಜಾಕೋಬ್ ಭಾಗವಹಿಸುತ್ತಾರೆ’ ಎಂದು ಹೇಳಿದರು.

ADVERTISEMENT

ಕಾಯ್ದೆ ಬಲಪಡಿಸಬೇಕು: ‘ದಲಿತರ ವಿರುದ್ಧದ ದೌಜರ್ನ್ಯ ತಡೆ ಕಾಯ್ದೆ ಬಲಪಡಿಸಬೇಕು. ದಲಿತ ಹೋರಾಟಗಾರರ ವಿರುದ್ಧ ದಾಖಲಿಸಿರುವ ಸುಳ್ಳು ಪ್ರಕರಣ ಹಿಂಪಡೆಯಬೇಕು. ದಲಿತ ನೌಕರರ ಬಡ್ತಿ ಮೀಸಲಾತಿಯನ್ನು ಅಡೆತಡೆಯಿಲ್ಲದೆ ಜಾರಿಗೊಳಿಸಬೇಕು. ಒಳ ಮೀಸಲಾತಿಗಾಗಿ ಉಷಾ ಮೆಹ್ರಾ ವರದಿ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಬೇಕು. ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ಜಾರಿಗೆ ತರಬೇಕು ಎಂದು ಸಮಾವೇಶದಲ್ಲಿ ಹಕ್ಕೋತಾಯ ಮಾಡಲಾಗುತ್ತದೆ’ ಎಂದು ವಿವರಿಸಿದರು.

ತೀವ್ರ ಹೋರಾಟ: ‘ರಾಷ್ಟ್ರದಲ್ಲಿ ಹೆಚ್ಚುತ್ತಿರುವ ಕೊಲೆಗಡುಕ ಸಂಸ್ಕೃತಿ ಹಾಗೂ ದಲಿತರನ್ನು ಹತ್ತಿಕ್ಕಲು ನಡೆಯುತ್ತಿರುವ ಸಂಚು ಖಂಡಿಸಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಮುಂದೆಯೂ ತೀವ್ರ ಹೋರಾಟ ನಡೆಸುತ್ತೇವೆ’ ಎಂದು ಸಮಿತಿಯ ಜಿಲ್ಲಾ ಘಟಕದ ಸಂಘಟನಾ ಸಂಚಾಲಕ ಎಚ್.ಮುನಿವೆಂಕಟಪ್ಪ ಹೇಳಿದರು.

ಸಮಿತಿಯ ಜಿಲ್ಲಾ ಘಟಕದ ಸಂಚಾಲಕ ರವಿ, ಸದಸ್ಯರಾದ ವೆಂಕಾಟಾಪು ಸತ್ಯಂ, ಸಿ.ಜೆ.ನಾಗರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.