ADVERTISEMENT

ಡಿಸಿಸಿ ಬ್ಯಾಂಕ್ ಅಕ್ರಮ: ಇತಿಶ್ರೀ ಹಾಡುತ್ತೇವೆ

ವಂಚಕರಿಗೆ ತಕ್ಕ ಶಾಸ್ತಿ: ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಗುಡುಗು

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2021, 12:28 IST
Last Updated 25 ಸೆಪ್ಟೆಂಬರ್ 2021, 12:28 IST
ಕೋಲಾರದಲ್ಲಿ ಶನಿವಾರ ನಡೆದ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಮಹಿಳೆಯರು ಪಾಲ್ಗೊಂಡರು
ಕೋಲಾರದಲ್ಲಿ ಶನಿವಾರ ನಡೆದ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಮಹಿಳೆಯರು ಪಾಲ್ಗೊಂಡರು   

ಕೋಲಾರ: ‘ಜಿಲ್ಲೆಯ ಡಿಸಿಸಿ ಬ್ಯಾಂಕ್‌ನಲ್ಲಿ ಶೋಷಿತರ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮ ಸಹಿಸಲು ಸರ್ಕಾರ ಕಣ್ಣು ಮುಚ್ಚಿ ಕುಳಿತಿಲ್ಲ. ಸಾಲ ನೀಡಿಕೆಯಲ್ಲಿ ಆಗಿರುವ ಅಕ್ರಮದ ಬಗ್ಗೆ ಸಮಗ್ರ ತನಿಖೆ ನಡೆಸಿ ಎಲ್ಲದಕ್ಕೂ ಸದ್ಯದಲ್ಲೇ ಇತಿಶ್ರೀ ಹಾಡುತ್ತೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಮುನಿರತ್ನ ಗುಡುಗಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಜಿಲ್ಲಾ ಮಟ್ಟದ ಸಮಾವೇಶ, ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ ಸಪ್ತಾಹ ಹಾಗೂ ಪೋಷಣ್ ಅಭಿಯಾನ ಯೋಜನೆ ಮಾಸಾಚರಣೆ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ಡಿಸಿಸಿ ಬ್ಯಾಂಕ್‌ನಿಂದ ನೀಡುತ್ತಿರುವ ಸಾಲವನ್ನು ತಮ್ಮ ತಾತ, ಮುತ್ತಾತನ ಆಸ್ತಿ ಮಾರಿ ಕೊಟ್ಟಿರುವಂತೆ ನಡೆದುಕೊಳ್ಳುತ್ತಿದ್ದಾರೆ. ಸರ್ಕಾರದ ಹಣ ದಾನದಂತೆ ಕೊಡಲು ಅವರು ಯಾರು? ಶೋಷಿತರ ಹೆಸರಿನಲ್ಲಿ ಸಾಲ ನೀಡುತ್ತಾ ವಂಚಿಸಿರುವುದು ಗಮನಕ್ಕೆ ಬಂದಿದೆ. ಇದನ್ನು ಸಹಿಸುವುದಿಲ್ಲ. ಅಕ್ರಮ ಎಸಗಿದವರು ಎಷ್ಟೇ ದೊಡ್ಡವರಿದ್ದರೂ ಪಶ್ಚಾತ್ತಾಪ ಪಡಬೇಕು’ ಎಂದು ಬ್ಯಾಂಕ್‌ ಆಡಳಿತ ಮಂಡಳಿ ವಿರುದ್ಧ ವಾಗ್ದಾಳಿ ನಡೆಸಿದರು.

ADVERTISEMENT

‘ಬ್ಯಾಂಕ್‌ನಲ್ಲಿ ಇರುವವರು ಎಷ್ಟೆಷ್ಟು ಅಕ್ರಮ ಮಾಡಿದ್ದಾರೆ ಎಂಬ ಬಗ್ಗೆ ಸಂಗ್ರಹಿಸುತ್ತಿದ್ದೇವೆ. ಆ ವಂಚಕರಿಗೆ ತಕ್ಕ ಶಾಸ್ತಿ ಮಾಡುತ್ತೇವೆ. ಬ್ಯಾಂಕ್‌ನಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಎಳೆ ಎಳೆಯಾಗಿ ತನಿಖೆ ನಡೆಸಿ, ಅಧಿಕಾರಿಗಳು ಮತ್ತು ಸಿಬ್ಬಂದಿಯ ಹೇಳಿಕೆ ಪಡೆದು ಒಂದೊಂದಾಗಿ ಬಯಲಿಗೆ ತರುತ್ತೇವೆ. ಬಡವರ ಹೆಸರಿನಲ್ಲಿ ಬ್ಯಾಂಕ್‌ನ ಹಣ ತಿಂದು ತೇಗಿರುವ ಪಾಪಿಗಳನ್ನು ದೇವರು ಕೂಡ ಕ್ಷಮಿಸಲ್ಲ’ ಎಂದು ಕಿಡಿಕಾರಿದರು.

‘ಸಾಲ ವಿತರಣೆಯಲ್ಲಿ ಲೋಪವಾದರೆ ಮಹಿಳೆಯರು ನೇರವಾಗಿ ಜಿಲ್ಲಾಧಿಕಾರಿಗೆ ದೂರು ಕೊಡಿ. ಮುಂದಿನದು ನಾವು ನೋಡಿಕೊಳ್ಳುತ್ತೇವೆ. ಬ್ಯಾಂಕ್‌ನಲ್ಲಿ ನಡೆದಿರುವ ಅಕ್ರಮಗಳಿಗೆ ಕಾನೂನು ಚೌಕಟ್ಟಿನಲ್ಲಿ ಇತಿಶ್ರೀ ಹಾಡುವವರೆಗೂ ಬಿಡುವುದಿಲ್ಲ. ಇಷ್ಟು ದಿನ ಏನು ಮಾಡಿದ್ದಾರೋ ಅದೆಲ್ಲದಕ್ಕೂ ಉತ್ತರ ಕೊಡುವ ಕಾಲ ಹತ್ತಿರ ಬಂದಿದೆ. ಆದಷ್ಟು ಬೇಗ ಒಳ್ಳೆಯ ತೀರ್ಮಾನ ಮಾಡುತ್ತೇವೆ’ ಎಂದರು.

‘ರಾಜ್ಯ ಮತ್ತು ಕೇಂದ್ರ ಸರ್ಕಾರ ಹೆಣ್ಣು ಮಕ್ಕಳು ಸ್ವಾಭಿಮಾನಿಗಳಾಗಿ ಮೇಲೆ ಬದುಕಬೇಕೆಂಬ ಉದ್ದೇಶಕ್ಕೆ ಆರ್ಥಿಕ ನೆರವು ನೀಡುತ್ತಿವೆ. ಕೇಂದ್ರದಿಂದ ಜಿಲ್ಲೆಯ 5,012 ಸ್ತ್ರೀಶಕ್ತಿ ಸಂಘಗಳ 78,720 ಸದಸ್ಯರಿಗೆ ₹ 12.60 ಕೋಟಿ ಹಣಕಾಸು ನೆರವು ಬಂದಿದೆ. ಆದರೆ, ಡಿಸಿಸಿ ಬ್ಯಾಂಕ್‌ನವರು ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆ ತೆರೆದು ಸದಸ್ಯೆಯರಿಗೆ ಬರಬೇಕಾದ ₹ 25 ಸಾವಿರದಲ್ಲಿ ₹ 5 ಸಾವಿರ ಮಾತ್ರ ಕೊಟ್ಟು ವಂಚಿಸಿದ್ದಾರೆ. ಈ ಬಗ್ಗೆ ಭಯಪಡದೆ ದೂರು ಕೊಡಿ. ನಾವು ಏನು ಮಾಡಬೇಕೋ ಅದನ್ನು ಮಾಡುತ್ತೇವೆ’ ಎಂದು ಹೇಳಿದರು.

ತಾರ್ಕಿಕ ಅಂತ್ಯ: ‘ನಬಾರ್ಡ್ ಮತ್ತು ಅಪೆಕ್ಸ್ ಬ್ಯಾಂಕ್‌ನಿಂದ ಬರುವ ಹಣಕಾಸು ನೆರವಿನಿಂದ ಡಿಸಿಸಿ ಬ್ಯಾಂಕ್‌ ಸ್ತ್ರೀಶಕ್ತಿ ಸಂಘಗಳಿಗೆ ಸಾಲ ಕೊಡುತ್ತದೆ. ಆದರೆ, ಬ್ಯಾಂಕ್‌ನ ಆಡಳಿತ ಮಂಡಳಿಯವರು ತಮ್ಮ ಸ್ವಂತ ಹಣದಲ್ಲಿ ಸಾಲ ನೀಡಿದಂತೆ ನಡೆದುಕೊಳ್ಳುತ್ತಿದ್ದಾರೆ. ಸಾಲದ ಹಣ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಮನೆಯದಲ್ಲ. ಡಿಸಿಸಿ ಬ್ಯಾಂಕ್‌ನಲ್ಲಿ ನಡೆದಿರುವ ಅಕ್ರಮಗಳಿಗೆ ಕಾನೂನಾತ್ಮಕವಾಗಿ ತಾರ್ಕಿಕ ಅಂತ್ಯ ಕಾಣಿಸಬೇಕು’ ಎಂದು ಎಸ್‌.ಮುನಿಸ್ವಾಮಿ ಸಚಿವರಿಗೆ ಒತ್ತಾಯಿಸಿದರು.

ಜಿಲ್ಲಾಧಿಕಾರಿ ಆರ್.ಸೆಲ್ವಮಣಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್.ಎಂ.ನಾಗರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎಂ.ಜಿ.ಪಾಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.