ADVERTISEMENT

ಒಗ್ಗಟ್ಟಿನ ಹೋರಾಟಕ್ಕೆ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 16:57 IST
Last Updated 27 ಜನವರಿ 2021, 16:57 IST

ಕೋಲಾರ: ಸರ್ಕಾರದ ಸೌಲಭ್ಯ ಪಡೆಯಲು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕೆಂದು ಇಲ್ಲಿ ಬುಧವಾರ ಜಿಲ್ಲಾ ತಿಗಳ ಜನಾಂಗದ ಸಮನ್ವಯ ಸಮಿತಿ ಕಾರ್ಯಕಾರಿ ಸಮಿತಿಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಮಾತನಾಡಿದ ಸಮಿತಿಯ ಪದಾಧಿಕಾರಿಗಳು, ‘ಸಮುದಾಯದ ಹಕ್ಕುಗಳನ್ನು ಪಡೆಯಲು ಹೋರಾಟ ನಡೆಸುವುದು ಅನಿವಾರ್ಯ. ಮುಂದಿನ ಸಭೆಯಲ್ಲಿ ಹೋರಾಟದ ರೂಪುರೇಷೆಗಳ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಬೇಕು’ ಎಂದು ಹೇಳಿದರು.

‘ತಿಗಳ ಸಮುದಾಯವು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಅವಕಾಶಗಳಿಂದ ವಂಚಿತವಾಗಿದೆ. ಸಮುದಾಯದ ಮುಖಂಡರು ಭಿನ್ನಾಭಿಪ್ರಾಯ ಬದಿಗಿಟ್ಟು ಸಮಾಜದ ಏಳಿಗೆಗೆ ಶ್ರಮಿಸಬೇಕು. ಸಮುದಾಯದಲ್ಲಿನ ಬಡ ಜನರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು’ ಎಂದು ಪದಾಧಿಕಾರಿಗಳು ಸಲಹೆ ನೀಡಿದರು.

ADVERTISEMENT

‘ತಿಗಳ ಜನಾಂಗದ ಸಂಘಟನೆ, ತಿಗಳ ಸಮನ್ವಯ ಸಮಿತಿ, ತಿಗಳ ಸರ್ಕಾರಿ ನೌಕರರ ಸಂಘ, ತಿಗಳ ಯುವ ವೇದಿಕೆ ಸಂಘಗಳ ನವೀಕರಣದ ಬಗ್ಗೆ ಚರ್ಚಿಸಬೇಕು. ಸಂಘಗಳಲ್ಲಿ ಕೆಲ ಪದಾಧಿಕಾರಿಗಳನ್ನು ಬದಲಾವಣೆ ಮಾಡಿ ಹೊಸ ಸದಸ್ಯರನ್ನು ಸಂಘಟನೆಗೆ ಸೇರಿಸಿಕೊಂಡು ಸಮಾಜ ಬಲಗೊಳಿಸಬೇಕು’ ಎಂದು ಹೇಳಿದರು.

ಜಿಲ್ಲಾ ತಿಗಳ ಜನಾಂಗದ ಸಮನ್ವಯ ಸಮಿತಿ ಸಂಸ್ಥಾಪಕ ಅಧ್ಯಕ್ಷ ಎಲ್.ಎ.ಮುಂಜುನಾಥ್, ಅಧ್ಯಕ್ಷ ಎಂ.ಉದಯಕುಮಾರ್, ಗೌರವಾಧ್ಯಕ್ಷ ಪಲ್ಲವಿ ಮಣಿ, ಉಪಾಧ್ಯಕ್ಷ ಎಂ.ವೆಂಕಟೇಶ್, ಮಾಲೂರು ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್, ಶ್ರೀನಿವಾಸಪುರ ತಾಲ್ಲೂಕು ಅಧ್ಯಕ್ಷ ಎಚ್.ಆರ್.ನಾರಾಯಣಸ್ವಾಮಿ, ಸರ್ಕಾರಿ ನೌಕರರ ಸಂಘದ ನರಸಾಪುರ ಶ್ರೀನಿವಾಸ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.