ADVERTISEMENT

ಡಿಸಿಸಿ ಬ್ಯಾಂಕ್‌ ಶಾಖೆ ಆರಂಭಕ್ಕೆ ತೀರ್ಮಾನ

ಅವಿಭಜಿತ ಕೋಲಾರ ಜಿಲ್ಲೆಯ ಜನಪ್ರತಿನಿಧಿಗಳ ಸಭೆಯಲ್ಲಿ ವಿಸ್ತೃತ ಚರ್ಚೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 10:54 IST
Last Updated 5 ಅಕ್ಟೋಬರ್ 2019, 10:54 IST
ಡಿಸಿಸಿ ಬ್ಯಾಂಕ್‌ನ ನೂತನ ಶಾಖೆ ಆರಂಭ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ನಾಗೇಶ್‌ ಅಧ್ಯಕ್ಷತೆಯಲ್ಲಿ ಕೋಲಾರದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಅವಿಭಜಿತ ಕೋಲಾರ ಜಿಲ್ಲೆಯ ಜನಪ್ರತಿನಿಧಿಗಳು ಪಾಲ್ಗೊಂಡರು.
ಡಿಸಿಸಿ ಬ್ಯಾಂಕ್‌ನ ನೂತನ ಶಾಖೆ ಆರಂಭ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ನಾಗೇಶ್‌ ಅಧ್ಯಕ್ಷತೆಯಲ್ಲಿ ಕೋಲಾರದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಅವಿಭಜಿತ ಕೋಲಾರ ಜಿಲ್ಲೆಯ ಜನಪ್ರತಿನಿಧಿಗಳು ಪಾಲ್ಗೊಂಡರು.   

ಕೋಲಾರ: ಕೋಲಾರ ಮತ್ತು -ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್‌ನ ನೂತನ ಶಾಖೆಗಳನ್ನು ಆರಂಭಿಸಲು ಹಾಗೂ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಗಣಕೀಕರಣಗೊಳಿಸಲು ಇಲ್ಲಿ ಶುಕ್ರವಾರ ನಡೆದ ಅವಳಿ ಜಿಲ್ಲೆಯ ಜನಪ್ರತಿನಿಧಿಗಳ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಡಿಸಿಸಿ ಬ್ಯಾಂಕ್ ಸೇವೆ ಕಲ್ಪಿಸಬೇಕೆಂಬ ಉದ್ದೇಶದಿಂದ ನೂತನ ಶಾಖೆ ಆರಂಭ  ಹಾಗೂ ಸೊಸೈಟಿಗಳ ದೈನಂದಿನ ಕಾರ್ಯ ಚಟುವಟಿಕೆ ಗಣಕೀಕೃತಗೊಳಿಸುವ ಬಗ್ಗೆ ಜನಪ್ರತಿನಿಧಿಗಳು ವಿಸ್ತೃತ ಚರ್ಚೆ ನಡೆಸಿದರು.

‘ರೈತರು ಆರ್ಥಿಕವಾಗಿ ಸಬಲರಾಗಲು ಹಾಗೂ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಡಿಸಿಸಿ ಬ್ಯಾಂಕ್‌ಗೆ ಶಕ್ತಿ ತುಂಬಬೇಕು. ‘ವಾಣಿಜ್ಯ ಬ್ಯಾಂಕ್‌ಗಳು ಬಡವರಿಗೆ ಸಹಾಯ ಮಾಡುವುದಿಲ್ಲ. ಬದಲಿಗೆ ಬಡ ರೈತರಿಂದ ಠೇವಣಿ ಪಡೆದು ನೀರವ್ ಮೋದಿ, ವಿಜಯ್‌ ಮಲ್ಯರಂತಹ ವಂಚಕರಿಗೆ ಸಾಲ ಕೊಡುತ್ತವೆ’ ಎಂದು ಶಾಸಕ ಕೆ.ಆರ್.ರಮೇಶ್‌ಕುಮಾರ್‌ ಗುಡುಗಿದರು.

ADVERTISEMENT

‘ರೈತರಿಗೆ ಸಾಲ ಕೊಡಲು ವಾಣಿಜ್ಯ ಬ್ಯಾಂಕ್‌ ಅಧಿಕಾರಿಗಳು ಆಸ್ತಿ ಅಡಮಾನ ಇಡುವಂತೆ ಕೇಳುತ್ತಾರೆ. ಠೇವಣಿ ಇಟ್ಟಿಸಿಕೊಳ್ಳಲು ಇರುವ ನಂಬಿಕೆ ಸಾಲ ಕೊಡಲು ಯಾಕಿಲ್ಲ. ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಗೌನಿಪಲ್ಲಿ, ಸೋಮಯಾಜಲಹಳ್ಳಿಯಲ್ಲಿ ಡಿಸಿಸಿ ಬ್ಯಾಂಕ್‌ನ ನೂತನ ಶಾಖೆ ಆರಂಭಿಸಬೇಕು. ಇಷ್ಟು ದಿನ ಏನು ಕೆಲಸ ಮಾಡಿದ್ದೀವಿ ಎಂಬುದು ಮುಖ್ಯವಲ್ಲ. ಉಳಿದ ಆಯಸ್ಸಿನಲ್ಲಿ ಜನರ ಋಣ ತೀರಿಸಲು ಅವಕಾಶ ಸಿಕ್ಕಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳೋಣ’ ಎಂದರು.

12 ಶಾಖೆಗಳಿವೆ: ‘ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಬ್ಯಾಂಕ್‌ನ 12 ಶಾಖೆಗಳು ಹಾಗೂ 201 ಕೃಷಿ ಪತ್ತಿನ ಸಹಕಾರ ಸಂಘಗಳಿವೆ. ಈ ಪೈಕಿ 109 ಸಂಘಗಳಿಗೆ ಹಣಕಾಸು ನೆರವು ನೀಡಲಾಗುತ್ತಿದೆ’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ವಿವರಿಸಿದರು.

‘ಪಾರದರ್ಶಕ ಆಡಳಿತಕ್ಕೆ ಸೊಸೈಟಿಗಳನ್ನು ಗಣಕೀಕರಣಗೊಳಿಸಬೇಕು. ಸರ್ಕಾರಿ ಇಲಾಖೆಗಳ ಅನುದಾನವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಡುವಂತೆ ಜನಪ್ರತಿನಿಧಿಗಳು ಜನರಿಗೆ ಸೂಚಿಸಬೇಕು. ಡಿಸಿಸಿ ಬ್ಯಾಂಕ್‌ನಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ (ಎಂಪಿಸಿಎಸ್‌) ಖಾತೆ ತೆರೆಯಬೇಕು. ಜತೆಗೆ ಸಂಘಗಳ ಹಣಕಾಸು ವಹಿವಾಟು ಬ್ಯಾಂಕ್ ಮೂಲಕವೇ ನಡೆಯಬೇಕು’ ಎಂದು ಕೋರಿದರು.

ಹೆಚ್ಚಿನ ವಹಿವಾಟು: ‘ಹೊಸ ಶಾಖೆ ಆರಂಭಿಸುವುದು ಸುಲಭ. ಲಭ್ಯ ಮಾನವ ಸಂಪನ್ಮೂಲವನ್ನೇ ಬಳಸಿಕೊಂಡು ಶಾಖೆ ಆರಂಭಿಸಬೇಕು. ಶಾಖೆಗಳ ಆರ್ಥಿಕ ಪರಿಸ್ಥಿತಿ ಉತ್ತಮವಾದ ನಂತರ ಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಸುವುದು ಸೂಕ್ತ. ತಾಲ್ಲೂಕಿನ ನರಸಾಪುರ ಹಾಗೂ ವೇಮಗಲ್‌ನಲ್ಲಿ ಕೈಗಾರಿಕೆಗಳ ಸಂಖ್ಯೆ ಹೆಚ್ಚಿದೆ. ಹೀಗಾಗಿ ವೇಮಗಲ್‌ನಲ್ಲಿ ನೂತನ ಶಾಖೆ ಆರಂಭಿಸಿದರೆ ಹೆಚ್ಚಿನ ವಹಿವಾಟು ನಡೆಯುತ್ತದೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಸಲಹೆ ನೀಡಿದರು.

‘ಜಿಲ್ಲೆಯ ಡಿಸಿಸಿ ಬ್ಯಾಂಕ್ ರಾಜ್ಯದಲ್ಲೇ ಉತ್ತಮ ಸ್ಥಾನಮಾನ ಪಡೆದಿದೆ. ಬ್ಯಾಂಕನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸಲು ಎಲ್ಲರೂ ಸಹಕಾರ ನೀಡಬೇಕು. ಮುಳಬಾಗಿಲು ತಾಲ್ಲೂಕಿನ ತಾಯಲೂರು ಹಾಗೂ ನಂಗಲಿಯಲ್ಲಿ ಶಾಖೆ ಆರಂಭಿಸಬೇಕು. ಜತೆಗೆ ಬ್ಯಾಂಕ್‌ನಲ್ಲಿ ಎಂಪಿಸಿಎಸ್‌ಗಳ ಖಾತೆ ತೆರೆಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್‌ ಭರವಸೆ ನೀಡಿದರು.

ಠೇವಣಿ ಇಡುತ್ತೇವೆ: ‘ಮಾಲೂರು ತಾಲ್ಲೂಕಿನ ಟೇಕಲ್‌ನಲ್ಲಿ ಶಾಖೆ ಆರಂಭಿಸಬೇಕು. ಟೇಕಲ್‌ ಹೋಬಳಿ ಕೇಂದ್ರವಾಗಿದ್ದು, ರೈಲು ನಿಲ್ದಾಣ ಸಹ ಇದೆ. ಜನಸಂದಣಿ ಹೆಚ್ಚಿರುವುದರಿಂದ ವಹಿವಾಟು ಉತ್ತಮವಾಗಿ ನಡೆಯುತ್ತದೆ’ ಎಂದು ಶಾಸಕ ಹಾಗೂ ಕೋಚಿಮುಲ್‌ ಅಧ್ಯಕ್ಷ ಕೆ.ವೈ.ನಂಜೇಗೌಡ ಹೇಳಿದರು.

‘ಮಾಲೂರು ತಾಲ್ಲೂಕಿನಿಂದಲೇ ಮೊದಲು ಎಂಪಿಸಿಎಸ್‌ಗಳ ಹಣವನ್ನು ಡಿಸಿಸಿ ಬ್ಯಾಂಕ್‌ನಲ್ಲಿ ಠೇವಣಿ ಇಡುತ್ತೇವೆ ಹಾಗೂ ಬ್ಯಾಂಕ್‌ನಲ್ಲಿ ಖಾತೆ ತೆರೆಸುತ್ತೇವೆ. ನಂತರ ಉಳಿದ ತಾಲ್ಲೂಕುಗಳ ಶಾಸಕರು, ಡಿಸಿಸಿ ಬ್ಯಾಂಕ್ ನಿರ್ದೇಶಕರ ಹಾಗೂ ಕೋಚಿಮುಲ್ ನಿರ್ದೇಶರು ಸೇರಿ ಅಧ್ಯಕ್ಷರ ಮತ್ತು ಕಾರ್ಯದರ್ಶಿಗಳ ಸಭೆ ನಡೆಸಿ ಡಿಸಿಸಿ ಬ್ಯಾಂಕ್‌ನಲ್ಲಿ ವಾಹಿವಾಟು ನಡೆಸುವ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.

‘ಬಂಗಾರಪೇಟೆ ಕ್ಷೇತ್ರ ದೊಡ್ಡದಾಗಿದ್ದು, ಬೂದಿಕೋಟೆ ಹಾಗೂ ಕಾಮಸಮುದ್ರದಲ್ಲಿ ಶಾಖೆ ಆರಂಭಿಸಬೇಕು. ಡಿಸಿಸಿ ಬ್ಯಾಂಕ್‌ನಿಂದಾಗಿ ಜಿಲ್ಲೆಯ ರೈತರು, ಮಹಿಳೆಯರು ನೆಮ್ಮದಿಯಿಂದ ಇದ್ದಾರೆ. ಬ್ಯಾಂಕ್‌ನ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ’ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ತಿಳಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಪೆರೇಸಂದ್ರ, ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ, ಚಿಂತಾಮಣಿ ತಾಲ್ಲೂಕಿನ ಚೇಳೂರು ಹಾಗೂ ಬಾಗೇಪಲ್ಲಿ ತಾಲ್ಲೂಕಿನ ಗುಳೂರುನಲ್ಲಿ ಶಾಖೆ ಆರಂಭಿಸಲು ತೀರ್ಮಾನಿಸಲಾಯಿತು.

ಶಾಸಕರಾದ ವಿ.ಮುನಿಯಪ್ಪ, ಸುಬ್ಬಾರೆಡ್ಡಿ, ಎಂ.ರೂಪಕಲಾ, ಬ್ಯಾಂಕ್‌ನ ಉಪಾಧ್ಯಕ್ಷ ನಾಗರಾಜ್, ನಿರ್ದೇಶಕರಾದ ಸೊಣ್ಣೇಗೌಡ, ಸೋಮಣ್ಣ, ವೆಂಕಟರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.