ADVERTISEMENT

ಗೌರವ ಲೇಖಕ ಸಮುದಾಯಕ್ಕೆ ಸಮರ್ಪಣೆ: ಲೇಖಕ ಆರ್.ಚೌಡರೆಡ್ಡಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2020, 12:50 IST
Last Updated 18 ಆಗಸ್ಟ್ 2020, 12:50 IST

ಕೋಲಾರ: ‘ಕವಿ ನಮನದ ಮೂಲಕ ನನಗೆ ನೀಡಿರುವ ಗೌರವವನ್ನು ಕವಿ ಹಾಗೂ ಲೇಖಕ ಸಮುದಾಯಕ್ಕೆ ಸಮರ್ಪಿಸುತ್ತೇನೆ’ ಎಂದು ಕವಿ ಹಾಗೂ ಲೇಖಕ ಆರ್.ಚೌಡರೆಡ್ಡಿ ತಿಳಿಸಿದರು.

‘ನಾನು ಬರೆದ ಕವಿತೆ, ಸಾಹಿತ್ಯವನ್ನು ಓದುತ್ತಿರುವ ಓದುಗರಿಗೆ ಚಿರಋಣಿ. ಶಿಶು ಗೀತೆಗಳನ್ನು ಮಕ್ಕಳು ಹಾಡಿ ಆನಂದಿಸುತ್ತಿದ್ದಾರೆ. ನಾನು ಬರೆದ ಸಾಹಿತ್ಯಕ್ಕೆ ಮೌಲ್ಯವಿದೆ. ಸಾಹಿತ್ಯ ಇತರರಿಗೆ ಸ್ಫೂರ್ತಿಯಾಗಿದೆ’ ಎಂದರು.
‘ಪ್ರತಿ ಮನುಷ್ಯನಿಗೂ ಸಾಧಿಸುವ ಹಂಬಲವಿರುತ್ತದೆ. ಎಲ್ಲರೊಡನೆ ಸೇರುವ ಸಾಹಿತ್ಯಕ್ಕೆ ಜೀವಂತಿಕೆಯಿರುತ್ತದೆ.

‘ಚೌಡರೆಡ್ಡಿ ಅವರ ಕವಿತೆ, ಲೇಖನಗಳಿಗೆ ಆ ಶಕ್ತಿಯಿದೆ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವ ಅರ್ಹತೆ ಅವರಿಗಿದೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜ್ ಅಭಿಪ್ರಾಯಪಟ್ಟರು.

ADVERTISEMENT

‘ಚೌಡರೆಡ್ಡಿ ಅವರು ದೇಸಿಯ ಕವಿ ಕಾವ್ಯ ಕೃಷಿಕ. ಅವರು ಕವಿಯ ಒಳಗೆ ದೇಸಿತನ ಹಾಗೂ ತನ್ನತನ ಉಳಿಸಿಕೊಂಡವರು. ಈ ನೆಲದ ಬೇರು ಅವರ ಕವಿತೆ, ಲೇಖನಗಳಲ್ಲಿ ಉಸಿರಾಡುತ್ತಿದೆ. ಹೃದಯಕ್ಕೆ ಹತ್ತಿರವಾಗುವ, ಸಾಮಾನ್ಯ ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಬರೆದಿದ್ದಾರೆ. ಇಂತಹವರನ್ನು ಪ್ರಧಾನ ಧಾರೆಯಲ್ಲಿ ಗುರುತಿಸುವ ಕೆಲಸ ಆಗಬೇಕು’ ಎಂದು ಉಪನ್ಯಾಸಕ ಡಿ.ಎಸ್.ಶ್ರೀನಿವಾಸಪ್ರಸಾದ್ ಹೇಳಿದರು.

‘ಚೌಡರೆಡ್ಡಿ ಅವರದು ಮಾರ್ಗದರ್ಶಿ ವ್ಯಕ್ತಿತ್ವ. ಸ್ಥಿತಪ್ರಜ್ಞೆಯನ್ನು ಅವರಲ್ಲಿ ಕಂಡಿದ್ದೇನೆ. ಬಂದಿದ್ದನ್ನು ಬಂದಹಾಗೆ ಸ್ವೀಕರಿಸುವ ವ್ಯಕ್ತಿತ್ವ. ಅವರ ಕವಿತೆ, ಲೇಖನಗಳು ಓದುಗರನ್ನು ಸರಳವಾಗಿ ಓದಿಸಿ ಮನಸ್ಸಿಗೆ ಇಳಿಸುತ್ತವೆ’ ಎಂದು ಸಾಹಿತಿ ಮಾಯಾ ಬಾಲಚಂದ್ರ ಹೇಳಿದರು.

ಸಾಹಿತಿ ಎಂ.ನಾರಾಯಣಪ್ಪ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಕವಿಗಳಾದ ಯು.ವಿ.ನಾರಾಯಣಾಚಾರ್, ತಿಪ್ಪೇರಂಗಪ್ಪ, ಚಂದ್ರಪ್ಪ, ನಾ.ವೆಂಕಿ, ಶಂಕರೇಗೌಡ, ಪಿ.ವಿ.ಶ್ರೀನಿವಾಸ್, ಜಿ.ಸುಧಾಕರ್, ಡಿ.ರಾಜೇಶ್ವರಿ, ಎನ್.ಸಿ.ರಾಜೇಶ್ವರಿ, ವಿ.ರಾಧಾಕೃಷ್ಣ, ಎಂ.ನಾಗರಾಜ್, ಎಚ್.ಎಸ್.ಪುಷ್ಪಲತಾ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.