ಕನ್ನಡ ಭಾಷೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ತಮಿಳು ನಟ ಕಮಲ್ ಹಾಸನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕರವೇ ಕಾರ್ಯಕರ್ತರು ತಹಶೀಲ್ದಾರ್ ವಿ.ಗೀತಾ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು
ಮುಳಬಾಗಿಲು: ತಮಿಳು ನಟ ಕಮಲ್ ಹಾಸನ್ ಅವರು ಕನ್ನಡ ಭಾಷೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಕನ್ನಡ ಭಾಷೆ ಮತ್ತು ನಾಡಿನ ಜನತೆಗೆ ಅವಮಾನ ನೀಡಿದ್ದಾರೆ. ಹಾಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕನ್ನಡ ರಕ್ಷಣಾ ವೇದಿಕೆಯಿಂದ ಒತ್ತಾಯಿಸಿ ತಹಶೀಲ್ದಾರ್ ವಿ.ಗೀತಾ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಪ್ರವೀಣ್ ಶೆಟ್ಟಿ ಬಣದ ತಾಲ್ಲೂಕು ಅಧ್ಯಕ್ಷ ಹರೀಶ್ ಗೌಡ ಮಾತನಾಡಿ, ಕಮಲ ಹಾಸನ್ ಅವರು ತಮಿಳು ಭಾಷೆ ಮೇಲಿನ ಪ್ರೀತಿಯಿಂದಾಗಿ ಕನ್ನಡ ಭಾಷೆಯನ್ನು ಅವಹೇಳನ ಮಾಡುವುದು ಸರಿಯಲ್ಲ. ಅವರ ವಿವಾದಾತ್ಮಕ ಹೇಳಿಕೆ ಎರಡು ರಾಜ್ಯಗಳ ನಡುವೆ ಕಲಹ ಉಂಟು ಮಾಡುವಂತಾಗಿದೆ. ಹಾಗಾಗಿ ಅವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಕಮಲ್ ಹಾಸನ್ ಉದ್ದಟತನದಿಂದ ಕ್ಷಮೆಯಾಚಿಸುತ್ತಿಲ್ಲ. ಹಾಗಾಗಿ ಅವರ ವಿರುದ್ಧ ಕಾನೂನು ರೀತಿಯಲ್ಲಿ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಂತರ ಮನವಿಯನ್ನು ತಹಶೀಲ್ದಾರ್ ವಿ. ಗೀತಾ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.
ಈ ವೇಳೆ ಪ್ರಕಾಶ್ ಗೌಡ, ರಾಮೇಗೌಡ, ಮಂಜುನಾಥ ಗೌಡ, ಕೃಷ್ಣ ಮೂರ್ತಿ, ವಿನೋದ್ ಗೌಡ, ಆಧಾರ್ ಮುರಳಿ, ಸಿ.ಮೋಹನ್, ಬಾಲಾಜಿ, ಸುರೇಂದ್ರ ರೆಡ್ಡಿ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.