ADVERTISEMENT

ಬೇಡಿಕೆ ಈಡೇರಿಕೆ: ಸರ್ಕಾರದ ಭರವಸೆ

ಪತ್ರಿಕಾಗೋಷ್ಠಿಯಲ್ಲಿ ‘ರೂಪ್ಸ’ ಅಧ್ಯಕ್ಷ ಲೊಕೇಶ್ ತಾಳಿಕಟ್ಟೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 15:10 IST
Last Updated 13 ಜನವರಿ 2021, 15:10 IST

ಕೋಲಾರ: ‘ಸಂಘದ 15 ಬೇಡಿಕೆಗಳ ಪೈಕಿ 13 ಬೇಡಿಕೆಗಳ ಈಡೇರಿಸುವುದಾಗಿ ಹಾಗೂ ಉಳಿದ 2 ಪ್ರಮುಖ ಬೇಡಿಕೆಗಳ ಬಗ್ಗೆ ಪರಿಶೀಲನೆ ಮಾಡುವುದಾಗಿ ಸರ್ಕಾರ ಭರವಸೆ ನೀಡಿದೆ’ ಎಂದು ರಾಜ್ಯ ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ ಸಂಘದ (ರೂಪ್ಸ) ಅಧ್ಯಕ್ಷ ಲೊಕೇಶ್ ತಾಳಿಕಟ್ಟೆ ತಿಳಿಸಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕೋವಿಡ್‌ನಿಂದ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗೆ ಸಾಕಷ್ಟು ಸಮಸ್ಯೆಯಾಗಿದೆ. ಸರ್ಕಾರದ ಕಠಿಣ ಕ್ರಮಗಳಿಂದ ಖಾಸಗಿ ಶಾಲೆಗಳು ಆರ್ಥಿಕವಾಗಿ ಕುಗ್ಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ರಾಜ್ಯದ ಎಲ್ಲಾ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಸದಸ್ಯರು ಒಗ್ಗೂಡಿ ಸಭೆ ನಡೆಸಿ ಸರ್ಕಾರಕ್ಕೆ 15 ಬೇಡಿಕೆ ಸಲ್ಲಿಸಲಾಗಿದೆ. ಸರ್ಕಾರ ಬೇಡಿಕೆಗಳಿಗೆ ಸ್ಪಂದಿಸದ ಕಾರಣ ಪ್ರತಿಭಟನೆ ನಡೆಸುವಂತಾಯಿತು. ನಂತರ ಶಿಕ್ಷಣ ಸಚಿವರು ಸಂಘದ ಪದಾಧಿಕಾರಿಗಳ ಜತೆ ಚರ್ಚಿಸಿ 13 ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು’ ಎಂದು ಹೇಳಿದರು.

ADVERTISEMENT

‘ಸಂಘದ ಪ್ರಮುಖ ಬೇಡಿಕೆಗಳಾದ ಕೇಂದ್ರ ಸರ್ಕಾರದ ಸಾಲದ ಕಂತುಗಳ ವಿಸ್ತರಣೆ ಮತ್ತು ಶಿಕ್ಷಕರ ಪ್ಯಾಕೇಜ್ ಮಂಜೂರಾತಿಗೆ ಸಚಿವರು ಕಾಲಾವಕಾಶ ಕೋರಿದ್ದಾರೆ. ಶಿಕ್ಷಕರ ಕ್ಷೇಮಾಭಿವೃದ್ಧಿ ನಿಧಿಯ ₹ 3,800 ಕೋಟಿಯನ್ನು ಈ ಸಂಕಷ್ಟದ ಸಂದರ್ಭದಲ್ಲಿ ಬಳಸಿಕೊಳ್ಳಬಹುದು’ ಎಂದು ಸ್ಪಷ್ಟಪಡಿಸಿದರು.

‘ಆನ್‌ಲೈನ್ ಮೂಲಕ ಶಾಲೆಗಳ ಮಾನ್ಯತೆ ನವೀಕರಣ, ಪಠ್ಯಕ್ರಮ ಕಡಿತದ ಗೊಂದಲ ನಿವಾರಣೆ, ಶಾಲೆಗಳನ್ನು ಮೇಲ್ದರ್ಜೆಗೆ ಏರಿಸುವುದು, ಶಿಥಿಲ ಶಾಲೆಗಳ ದುರಸ್ತಿಗೆ ಕ್ರಮ ಕೈಗೊಳ್ಳುವುದಕ್ಕೆ ಕರ್ನಾಟಕ ಕಲ್ಯಾಣ ಯೋಜನೆಯಲ್ಲಿ ಅವಕಾಶ ಕಲ್ಪಿಸಬಹುದು’ ಎಂದು ವಿವರಿಸಿದರು.

ಪ್ರಜಾಪ್ರಭುತ್ವದ ಹಕ್ಕು: ‘ಶಿಕ್ಷಣ ನೀಡುವುದು ಮತ್ತು ಪಡೆಯುವುದು ಪ್ರಜಾಪ್ರಭುತ್ವದ ಹಕ್ಕು. ಖಾಸಗಿ ಶಾಲೆಗಳು ಸರ್ಕಾರದ ಜತೆ ಕೈಜೋಡಿಸಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗಿದೆ. ಕನ್ನಡ ಶಾಲೆಗಳನ್ನು ಮುಚ್ಚಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಶಿಕ್ಷಣ ಹಕ್ಕು ಕಾಯ್ದೆ ಜಾರಿ ನಂತರ ಸಮಸ್ಯೆ ಹೆಚ್ಚಿದೆ. ಖಾಸಗಿ ಶಾಲೆಗಳ ಸಮಸ್ಯೆಗೆ ಸರ್ಕಾರ ಸಮರ್ಪಕವಾಗಿ ಸ್ಪಂದಿಸಬೇಕು. ಬೋಧನಾ ವ್ಯವಸ್ಥೆ ವೈಜ್ಞಾನಿಕವಾಗಿ ವಿಸ್ತಾರವಾಗಬೇಕು. ಶೈಕ್ಷಣಿಕ ಸಂಶೋಧನ ಕೇಂದ್ರಗಳು ಅತ್ಯವಶ್ಯಕ. ಈ ಬಗ್ಗೆ ಸರ್ಕಾರ ಗಮನ ಹರಿಸಿದರೆ ಶೈಕ್ಷಣಿಕ ವ್ಯವಸ್ಥೆಯಲ್ಲಿ ಪ್ರಗತಿದಾಯಕ ಆವಿಷ್ಕಾರ ಸಾಧ್ಯ’ ಎಂದು ಸಂಘದ ಸದಸ್ಯ ಶ್ರೀಕೃಷ್ಣ ಸಲಹೆ ನೀಡಿದರು.

ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಎಸ್.ಮುನಿಯಪ್ಪ, ಜಿಲ್ಲಾ ಘಟಕದ ಪದಾಧಿಕಾರಿಗಳಾದ ಆರೀಫ್‌, ಸರಸ್ವತಿ, ಹರಿಪ್ರಕಾಶ್, ನಾಗರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.