ADVERTISEMENT

ಟೊಮೆಟೊ ನಾಶ: ಪರಿಹಾರಕ್ಕೆ ಒತ್ತಾಯ

ರೈತರ ಕಷ್ಟಕ್ಕೆ ಸ್ಪಂದಿಸದ ಅಧಿಕಾರಿಗಳು: ರೈತ ಸಂಘ ಸದಸ್ಯರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2019, 14:43 IST
Last Updated 9 ಅಕ್ಟೋಬರ್ 2019, 14:43 IST
ಊಜಿ ನೊಣದ ಹಾವಳಿಯಿಂದ ನಾಶವಾಗಿರುವ ಟೊಮೆಟೊ ಬೆಳೆಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಕೋಲಾರದಲ್ಲಿ ಬುಧವಾರ ಧರಣಿ ನಡೆಸಿದರು.
ಊಜಿ ನೊಣದ ಹಾವಳಿಯಿಂದ ನಾಶವಾಗಿರುವ ಟೊಮೆಟೊ ಬೆಳೆಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಕೋಲಾರದಲ್ಲಿ ಬುಧವಾರ ಧರಣಿ ನಡೆಸಿದರು.   

ಕೋಲಾರ: ಊಜಿ ನೊಣದ ಹಾವಳಿಯಿಂದ ನಾಶವಾಗಿರುವ ಟೊಮೆಟೊ ಬೆಳೆಗೆ ಪ್ರತಿ ಎಕರೆಗೆ ₹ 2 ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಬುಧವಾರ ಧರಣಿ ನಡೆಸಿದರು.

‘ಕೀಟ ಬಾಧೆಯಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಟೊಮೆಟೊ ಬೆಳೆ ನಾಶವಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ’ ಎಂದು ಧರಣಿನಿರತರು ಮೆಕ್ಕೆ ವೃತ್ತದಲ್ಲಿ ರಸ್ತೆಗೆ ಟೊಮೆಟೊ ಸುರಿದು ಆಕ್ರೋಶ ವ್ಯಕ್ತಪಡಿಸಿದರು.

‘ಜಿಲ್ಲೆಯ ರೈತರು ಅಂತರ್ಜಲ ನಂಬಿ ಕೃಷಿ ಮಾಡುತ್ತಿದ್ದಾರೆ. ಬರ ಪರಿಸ್ಥಿತಿಗೂ ಎದೆಗುಂದದೆ ಬೆಳೆ ಬೆಳೆಯುತ್ತಿದ್ದಾರೆ. ಆದರೆ, ರಸಗೊಬ್ಬರ, ಬಿತ್ತನೆ ಬೀಜ ಹಾಗೂ ಕೀಟನಾಶಕ ಮಾರಾಟ ಕಂಪನಿಗಳು, ಅಂಗಡಿಗಳ ಮಾಲೀಕರು ರೈತರನ್ನು ವಂಚಿಸುತ್ತಿದ್ದಾರೆ. ರೈತರಿಗೆ ಕಳಪೆ ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕ ಮಾರಲಾಗುತ್ತಿದೆ’ ಎಂದು ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ದೂರಿದರು.

ADVERTISEMENT

‘ಜಿಲ್ಲೆಯು ಬರಕ್ಕೆ ತುತ್ತಾಗಿದ್ದು, ಸಾಕಷ್ಟು ರೈತರು ಈಗಾಗಲೇ ಬೆಳೆ ಕಳೆದುಕೊಂಡಿದ್ದಾರೆ. ಆರ್ಥಿಕ ಸಂಕಷ್ಟದ ನಡುವೆಯೂ ರೈತರು ಬಡ್ಡಿ ಸಾಲ ಮಾಡಿ ಕೃಷಿ ಮಾಡಿದ್ದಾರೆ. ನಕಲಿ ಬಿತ್ತನೆ ಬೀಜ ಮಾರಾಟ ಮಳಿಗೆಗಳು ಹಾದಿ ಬೀದಿಯಲ್ಲಿ ತಲೆ ಎತ್ತಿವೆ. ಈ ಮಳಿಗೆಗಳ ಮಾಲೀಕರೊಂದಿಗೆ ಕೈಜೋಡಿಸಿರುವ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರಿಗೆ ಕೀಟಬಾಧೆ ಹತೋಟಿ ಸಂಬಂಧ ಸರಿಯಾದ ಮಾಹಿತಿ ಕೊಡುತ್ತಿಲ್ಲ’ ಎಂದು ಕಿಡಿಕಾರಿದರು.

ರೈತರ ಶೋಷಣೆ: ‘ಟೊಮೆಟೊ ಜಿಲ್ಲೆಯ ಪ್ರಮುಖ ಬೆಳೆ. ಬಡ್ಡಿ ಸಾಲ ಮಾಡಿ ಟೊಮೆಟೊ ಬೆಳೆದ ರೈತರು ಸಾಲದ ಕಂತು ಹಾಗೂ ಬಡ್ಡಿ ಕಟ್ಟಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಒಂದೆಡೆ ಬೆಲೆ ಕುಸಿತವು ರೈತರನ್ನು ಸಂಕಷ್ಟಕ್ಕೆ ದೂಡಿದೆ. ಮತ್ತೊಂದೆಡೆ ಕೀಟಬಾಧೆಯಿಂದ ಬೆಳೆ ಹಾಳಾಗಿದೆ. ಮಾರುಕಟ್ಟೆಯಲ್ಲಿ ದಲ್ಲಾಳಿಗಳು ತೂಕದಲ್ಲಿ ಮೋಸ ಮಾಡಿ ರೈತರನ್ನು ಶೋಷಿಸುತ್ತಿದ್ದಾರೆ’ ಎಂದು ಧರಣಿನಿರತರು ಆರೋಪಿಸಿದರು.

‘ರೈತರಿಗೆ ಶೀಘ್ರವೇ ಬೆಳೆ ಪರಿಹಾರ ಕೊಡಬೇಕು. ಬಿತ್ತನೆ ಬೀಜ ಗುಣಮಟ್ಟದ ವಿಚಾರದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು. ಕಳಪೆ ಬಿತ್ತನೆ ಬೀಜ ಮಾರುವ ಅಂಗಡಿಗಳ ಪರವಾನಗಿ ರದ್ದುಪಡಿಸಬೇಕು’ ಎಂದು ಆಗ್ರಹಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್, ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿ, ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಹರಿಕುಮಾರ್, ಸದಸ್ಯರಾದ ಆಂಜಿನಪ್ಪ, ಪ್ರತಾಪ್, ಮಂಜುನಾಥ್, ಪುರುಷೋತ್ತಮ್, ನಾಗೇಶ್, ತಿಮ್ಮಣ್ಣ, ವೆಂಕಟೇಶಪ್ಪ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.