ಕೋಲಾರ: ‘ನಗರದ ಮಹಿಳಾ ಸರ್ಕಾರಿ ಪದವಿ ಕಾಲೇಜು, ಸರ್ಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ಜೂನಿಯರ್ ಕಾಲೇಜುಗಳ ಅಭಿವೃದ್ಧಿಗೆ ₹ 30 ಕೋಟಿ ಅನುದಾನವನ್ನು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಬಿಡುಗಡೆ ಮಾಡಿದ್ದಾರೆ. ಹಂತ ಹಂತವಾಗಿ ಕಾಲೇಜುಗಳಿಗೆ ಮೂಲ ಸೌಲಭ್ಯ ಕಲ್ಪಿಸಲಾಗುವುದು’ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.
ಮಹಿಳಾ ಸರ್ಕಾರಿ ಕಾಲೇಜಿನ ಆವರಣದಲ್ಲಿ ಸೋಮವಾರ ಹೊಸ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೇರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಹೆಚ್ಚುವರಿ ಕೊಠಡಿಗೆ ಬೇಡಿಕೆ ಇಟ್ಟಿದ್ದರು. ಈಗ ಕಾಲೇಜಿನ ಆವರಣದಲ್ಲಿ 15 ಕೊಠಡಿ ಹಾಗೂ 1 ಗ್ರಂಥಾಲಯ ನಿರ್ಮಿಸಲಾಗುತ್ತಿದೆ. ₹ 6.88 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಟೆಂಡರ್ ಆಗಿದೆ’ ಎಂದು ಹೇಳಿದರು.
‘ಈ ಕಾಲೇಜಿನಲ್ಲಿ ಇನ್ನೂ ₹ 10 ಕೋಟಿ ಕಾಮಗಾರಿ ಬಾಕಿ ಇದೆ. ಜೂನಿಯರ್ ಕಾಲೇಜಿನಲ್ಲಿ ₹ 5 ಕೋಟಿ ಕೆಲಸ ಬಾಕಿ ಇದೆ. ಪ್ರಥಮದರ್ಜೆ ಕಾಲೇಜಿನಲ್ಲಿ ₹ 10 ಕೋಟಿ ಕಾಮಗಾರಿ ಇದ್ದು, ಅನುದಾನವಿದೆ. ಟೆಂಡರ್ ಮಾಡಿ ಕೆಲಸ ಶುರು ಮಾಡುತ್ತೇವೆ’ ಎಂದರು.
‘ಕೋಲಾರ ತಾಲ್ಲೂಕಿಗೆ 3 ಇಂದಿರಾ ಕ್ಯಾಂಟೀನ್ ನೀಡಲಾಗಿದೆ. ಈಗಾಗಲೇ ಹಳೆ ಬಸ್ ನಿಲ್ದಾಣ ಬಳಿ ಇದೆ, ಇನ್ನೊಂದು ವೇಮಗಲ್‌ನಲ್ಲಿದೆ. ಮತ್ತೊಂದು ಕ್ಯಾಂಟೀನ್ ಅನ್ನು ಎಪಿಎಂಸಿ ಬಳಿ ನಿರ್ಮಿಸಲಾಗುವುದು. ಮತ್ತೊಂದು ಇಂದಿರಾ ಕ್ಯಾಂಟೀನ್ ಅನ್ನು ಮಹಿಳಾ ಕಾಲೇಜು ಬಳಿ ತೆರೆಯಲಾಗುವುದು. ಏಕೆಂದರೆ ಇಲ್ಲಿ ಕಾಲೇಜು, ಹಾಸ್ಟೆಲ್ ಇದೆ. ಕೋಲಾರಮ್ಮ, ಸೋಮೇಶ್ವರ ದೇಗುಲಗಳೂ ಇವೆ. ಹಿಂದೆ ಮಾಜಿ ಸಚಿವ ಶ್ರೀನಿವಾಸಗೌಡ ಕಾಲೇಜಿನಲ್ಲಿ ಕ್ಯಾಂಟೀನ್‌ಗೆಂದು ₹ 5 ಲಕ್ಷ ನೀಡಿದ್ದರು. ನನ್ನ ₹ 5 ಲಕ್ಷ, ಪರಿಷತ್ ಸದಸ್ಯರಾದ ನಸೀರ್ ಅಹ್ಮದ್ ₹ 5 ಲಕ್ಷ ಹಾಗೂ ಎಂ.ಎಲ್.ಅನಿಲ್ ಕುಮಾರ್ ಅವರ ₹ 5 ಲಕ್ಷ ಅನುದಾನ ನೀಡಿ ಹೊಸ ಕಟ್ಟಡ ನಿರ್ಮಿಸಿ ಕ್ಯಾಂಟೀನ್ ಆರಂಭಿಸಲಾಗುವುದು’ ಎಂದು ಹೇಳಿದರು.
ಪ್ರಾಂಶುಪಾಲ ಗಂಗಾಧರ್ ರಾವ್, ‘ಕುಡಾ’ ಅಧ್ಯಕ್ಷ ಮೊಹಮ್ಮದ್ ಹನೀಫ್, ಕೋಚಿಮುಲ್ ನಿರ್ದೇಶಕ ಷಂಷೀರ್, ಕೆಪಿಸಿಸಿ ವಕ್ತಾರ ದಯಾನಂದ, ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೀಸಂದ್ರ ಗೋಪಾಲಗೌಡ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂಜಿಮಲೆ ರಮೇಶ್, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ವೈ.ಶಿವಕುಮಾರ್, ಮುಖಂಡ ಮೈಲಾಂಡಹಳ್ಳಿ ಮುರಳಿ, ರಮೇಶ್, ರಾಮು, ವಿಜಯನಗರ ಮಂಜುನಾಥ, ಉಮಾಶಂಕರ್, ರಾಮಯ್ಯ, ಚೌಡರೆಡ್ಡಿ, ಚಂದ್ರಶೇಖರ್ ಇದ್ದರು.
ಗ್ರಾಮಾಂತರ ಭಾಗದಲ್ಲಿ ರಾಜ್ಯದಲ್ಲಿಯೇ ಎರಡನೇ ಅತಿ ಹೆಚ್ಚು ವಿದ್ಯಾರ್ಥಿನಿಯರು ಇರುವ ಕಾಲೇಜು ಇದು. ಮಹಿಳಾ ಕಾಲೇಜಿನಲ್ಲಿ ಸದ್ಯ 3200 ವಿದ್ಯಾರ್ಥಿನಿಯರಿದ್ದಾರೆ.ಕೊತ್ತೂರು ಮಂಜುನಾಥ್, ಶಾಸಕ
ರಿಂಗ್ ರಸ್ತೆಗೆ ₹ 100 ಕೋಟಿ ಬಿಡುಗಡೆ
‘ಕೋಲಾರ ನಗರದ ರಿಂಗ್ ರಸ್ತೆಗೆ ₹ 100 ಕೋಟಿ ಬಿಡುಗಡೆಯಾಗಿದ್ದು ಪಿಡಬ್ಲ್ಯುಡಿ ಇಲಾಖೆ ಈ ಸಂಬಂಧ ಪ್ರಕ್ರಿಯೆ ನಡೆಸುತ್ತಿದೆ. ಇನ್ನು ₹ 170 ಕೋಟಿ ಬಿಡುಗಡೆ ಆಗಬೇಕು. ದಾಖಲೆಗಳನ್ನು ಸಲ್ಲಿಕೆ ಮಾಡಲಾಗಿದೆ. ಸಚಿವ ಸಂಪುಟದಲ್ಲಿ ಅನುಮೋದನೆಯ ನಂತರ ಟೆಂಡರ್ ಕರೆಯಲಾಗುತ್ತದೆ. ರಿಂಗ್ ರಸ್ತೆಗೆ ಜಮೀನು ನೀಡುವ ರೈತರಿಗೆ ಅಗತ್ಯ ಸೌಲಭ್ಯಗಳನ್ನು ಮಾಡಿಕೊಡುವ ಭರವಸೆಯನ್ನು ನೀಡಲಾಗಿದೆ. ಈಗಾಗಲೇ ಡಿಪಿಆರ್ ಅಗಿದೆ’ ಎಂದು ಕೊತ್ತೂರು ಮಂಜುನಾಥ್ ಹೇಳಿದರು.
ವಿದ್ಯಾರ್ಥಿನಿಯರಿಗೆ ಶಾಲು ಹಣ್ಣಿನ ಬುಟ್ಟಿ!
ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಸಂಘಟಕರು ತಮ್ಮನ್ನು ಸನ್ಮಾನಿಸಿ ನೀಡಿದ ಹಾರ ಹಣ್ಣಿನ ಬುಟ್ಟಿ ಹಾಗೂ ಶಾಲನ್ನು ಕೊತ್ತೂರು ಮಂಜುನಾಥ್ ಸಮೀಪದಲ್ಲಿದ್ದ ವಿದ್ಯಾರ್ಥಿನಿಯರಿಗೆ ಹಸ್ತಾಂತರಿಸಿದರು. ವಿದ್ಯಾರ್ಥಿನಿಯರ ಖುಷಿಗೆ ಪಾರವೇ ಇರಲಿಲ್ಲ. ಹಣ್ಣು ಹಂಚಿಕೊಂಡು ತಿಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.