ADVERTISEMENT

ಕೋಲಾರ | 'ಬುದ್ಧಿಮಾಂದ್ಯರನ್ನು ಬುದ್ಧಿವಂತರು ಎನ್ನಬೇಕು'

ಅಂಗವಿಕಲರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು: ಶಾಸಕ ಕೊತ್ತೂರು ಮಂಜುನಾಥ್

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 8:31 IST
Last Updated 5 ಡಿಸೆಂಬರ್ 2025, 8:31 IST
ಕೋಲಾರದಲ್ಲಿ ನಡೆದ ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಶಾಸಕ ಕೊತ್ತೂರು ಮಂಜುನಾಥ್ ಸನ್ಮಾನಿಸಿದರು
ಕೋಲಾರದಲ್ಲಿ ನಡೆದ ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಶಾಸಕ ಕೊತ್ತೂರು ಮಂಜುನಾಥ್ ಸನ್ಮಾನಿಸಿದರು   

ಕೋಲಾರ: ಬುದ್ಧಿಮಾಂದ್ಯರು ಸೇರಿದಂತೆ ಅಂಗವಿಕಲರು ಎಲ್ಲಾ ಕ್ಷೇತ್ರಗಳಲ್ಲಿ ಯಾರಿಗೂ ಕಡಿಮೆ ಇಲ್ಲದಂತೆ ಸಾಧನೆ ಮಾಡುತ್ತಿದ್ದಾರೆ. ಹೀಗಾಗಿ, ಅವರನ್ನು ಬುದ್ಧಿಮಾಂದ್ಯರು ಎನ್ನುವ ಬದಲು ಬುದ್ಧಿವಂತರೆಂದು ಕರೆಯಬೇಕು ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಅಭಿಪ್ರಾಯಪಟ್ಟರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಕವಿಕಲರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ನಡೆದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಉತ್ತಮ ಸೇವೆ ಸಲ್ಲಿಸುತ್ತಿವೆ. ನೃತ್ಯ ಮತ್ತು ವಿದ್ಯಾಭ್ಯಾಸ ಕಲಿಸುವುದು ಅಷ್ಟು ಸುಲಭವಲ್ಲ, ಆ ಕೆಲಸವನ್ನು ಸಂಸ್ಥೆಗಳು ಮಾಡುತ್ತಿವೆ. ಅಂಗವಿಕಲರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವನ್ನು ನಾವೆಲ್ಲರೂ ಮಾಡಬೇಕು ಎಂದರು.

ADVERTISEMENT

ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್‌, ‘ಅಂಗವಿಕರಲ್ಲಿ ವಿಶೇಷ ಪ್ರತಿಭೆಗಳು ಇರುವುದನ್ನು ಗುರುತಿಸಿ ಬೆಳಕಿಗೆ ತರಬೇಕು. ಪ್ರತಿಭೆಗೆ ಪ್ರೋತ್ಸಾಹಿಸಿ ಸಮಾಜಮುಖಿಗಳನ್ನಾಗಿ ರೂಪಿಸಬೇಕು’ ಎಂದು ಸಲಹೆ ನೀಡಿದರು.

ತಮ್ಮ ಹಕ್ಕುಗಳು ಮತ್ತು ಸರ್ಕಾರದ ಸೌಲಭ್ಯಗಳ ಕುರಿತು ಪರಿಪೂರ್ಣವಾದ ಅರಿವು ಮೂಡಿಸಬೇಕು. ಅವರನ್ನು ಗೌರವದಿಂದ ಕಂಡು ಸಮಸ್ಯೆಗಳಿಗೆ ಸ್ಪಂದಿಸಬೇಕು. ಪೀತಿಯಿಂದ ಕಂಡು ಅವರಲ್ಲಿರುವ ಕೀಳಿರಿಮೆಯನ್ನು ತೊಡೆದು ಹಾಕಿ ಜೀವನದಲ್ಲಿ ಉತ್ಸಾಹ ಕಾಣುವಂತೆ ಮಾಡಬೇಕು ಎಂದು ನುಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಪ್ರವೀಣ್ ಪಿ.ಬಾಗೇವಾಡಿ ಮಾತನಾಡಿ, ‘ಹಿಂದೆ ಅಂಗವಿಕಲರು ಎಂದು ಕರೆಯುತ್ತಿದ್ದೆವು, ಪ್ರಸ್ತುತ ಅವರನ್ನು ವಿಶೇಷ ಚೇತನರು ಎನ್ನುತ್ತೇವೆ. ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದನ್ನು ಗಮನಿಸಬಹುದಾಗಿದೆ’ ಎಂದರು.

ಅಂತರಗಂಗಾ ವಿದ್ಯಾಸಂಸ್ಥೆಯಲ್ಲಿ ಅನೇಕ ವಿಶೇಷ ಚೇತನ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾಲೂರು ತಾಲ್ಲೂಕು ನಂದಿದೀಪ ವಿಕಲ ಚೇತನರ ಸಂಸ್ಥೆಯಿಂದ ಕಾಂತರ ಚಿತ್ರದ ಹಾಡಿಗೆ ನೃತ್ಯ, ಕೋಲಾರ ಅಂತರಗಂಗೆ ಸಂಸ್ಥೆ ಮಕ್ಕಳಿಂದ ಜೋಗಯ್ಯ ಚಿತ್ರದ ಹಾಡಿನ ನೃತ್ಯ, ಮುಳಬಾಗಿಲು ತಾಲ್ಲೂಕಿನ ವಿಕಲಚೇತನರ ಸಂಸ್ಥೆಯಿಂದ ನಾಗರಹೊಳೆಯ ಬುಡಕಟ್ಟು ಜನರ ಹಾಡಿನ ನೃತ್ಯ, ಶತಶೃಂಗ ವಿಕಲಚೇತನ ಸಂಸ್ಥೆ ಮಕ್ಕಳು ನೀಡಿದ ಮನರಂಜನೆ ಕಾರ್ಯಕ್ರಮಗಳು ಗಮನ ಸೆಳೆದವು.

ಗ್ರಾಮೀಣಾಭಿವೃದ್ಧಿ ಯೋಜನೆ ಅಡಿಯಲ್ಲಿ ವಿಶೇಷ ಚೇತನರಿಗೆ ಪುನರ್ವಸತಿ ಕಾರ್ಯಕರ್ತರಾಗಿ ಉತ್ತಮ ಕೆಲಸ ಮಾಡುತ್ತಿರುವವರನ್ನು ಸನ್ಮಾನಿಸಲಾಯಿತು. ಇಲಾಖೆಯಿಂದ 10 ದ್ವಿಚಕ್ರ ವಾಹನ, ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ನಾಲ್ಕು ದ್ವಿಚಕ್ರ ವಾಹನ, ವಿಧಾನ ಪರಿಷತ್ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯಿಂದ ಎರಡು ದ್ವಿಚಕ್ರ ವಾಹನ ಹಾಗೂ ಒಂದು ವಿದ್ಯುತ್ ಸ್ವಯಂ ಚಾಲಿತ ವಾಹನ ಮತ್ತು ಆರು ವ್ಹೀಲ್‌ ಚೇರ್‌ಗಳನ್ನು ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ವೈ,ಶಿವಕುಮಾರ್, ಹಾಲು ಒಕ್ಕೂಟ ನಿರ್ದೇಶಕರಾದ ಚಂಜಿಮಲೆ ರಮೇಶ್, ಷಂಶೀರ್, ಮುಖಂಡರಾದ ಅಂಬರೀಷ್, ಬೆಳಗಾನಹಳ್ಳಿ ಮುನಿವೆಂಕಟಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ.ನಾರಾಯಣಸ್ವಾಮಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಆರ್.ಮಂಜುಳಾ, ವಿವಿಧ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನೆಅಧಿಕಾರಿಗಳಾದ ಬೈರೇಗೌಡ, ಮುನಿರಾಜು, ರವಿಕುಮಾರ್, ರಮ್ಯಾ, ಸಂಸ್ಥೆಗಳ ಮುಖ್ಯಸ್ಥರಾದ ಶಂಕರ್. ಶಾರದಮ್ಮ ,ಗಿರೀಶ್, ಅಪೂರ್ವ ಇದ್ದರು.

ಕೋಲಾರದಲ್ಲಿ ಅಂಗವಿಲರ ಭವನಕ್ಕೆ ಸಂಬಂಧಿಸಿದಂತೆ ಮೊದಲು ಸರ್ಕಾರಿ ಜಾಗವನ್ನು ಗುರುತಿಸಿ. ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಬಳಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು

- ಎಂ.ಎಲ್‌.ಅನಿಲ್‌ ಕುಮಾರ್‌ ವಿಧಾನ ಪರಿಷತ್‌ ಸದಸ್ಯ

ವಿಕಲಚೇತನರಿಗೆ ಕೋಲಾರದಲ್ಲಿ ವಿನೂತನ ಉದ್ಯಾನ ನಿರ್ಮಿಸುವ ಚಿಂತನೆ ಇದ್ದು ಜಿಲ್ಲಾಧಿಕಾರಿ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು

-ಡಾ.ಪ್ರವೀಣ್‌ ಪಿ.ಬಾಗೇವಾಡಿ ಜಿ.ಪಂ ಸಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.