ADVERTISEMENT

ಅಂಗವಿಕಲ ಮಕ್ಕಳು ದೇವರಂತೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2020, 12:35 IST
Last Updated 15 ನವೆಂಬರ್ 2020, 12:35 IST
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬಿಇಒ ಕೆ.ಎಸ್‌.ನಾಗರಾಜಗೌಡ ಕೋಲಾರದ ಅಂತರಗಂಗೆ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯ ಮಕ್ಕಳಿಗೆ ಭಾನುವಾರ ಸಿಹಿ ಹಂಚಿದರು.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬಿಇಒ ಕೆ.ಎಸ್‌.ನಾಗರಾಜಗೌಡ ಕೋಲಾರದ ಅಂತರಗಂಗೆ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯ ಮಕ್ಕಳಿಗೆ ಭಾನುವಾರ ಸಿಹಿ ಹಂಚಿದರು.   

ಕೋಲಾರ: ‘ಅಂಗವಿಕಲ ಮಕ್ಕಳು ದೇವರಂತೆ. ಅವರನ್ನು ಗೌರವದಿಂದ ಕಾಣುವ ಮೂಲಕ ಸ್ವಾವಲಂಬಿ ಬದುಕಿಗೆ ದಾರಿ ತೋರಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಹೇಳಿದರು.

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ನಗರದ ಅಂತರಗಂಗೆ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆ ಮಕ್ಕಳಿಗೆ ಭಾನುವಾರ ಸಿಹಿ ವಿತರಿಸಿ ಮಾತನಾಡಿ, ‘ದೇಶದಲ್ಲಿ ಸಾಕಷ್ಟು ಅಂಗವಿಕಲರು ಸಾಧಕರಾಗಿ ಹೊರಹೊಮ್ಮಿದ್ದಾರೆ. ಅಂಗವಿಕಲರು ಕೀಳರಿಮೆ ಬಿಟ್ಟರೆ ಸಾಧನೆಯ ಹಾದಿ ಸುಲಭವಾಗುತ್ತದೆ’ ಎಂದರು.

‘ಅಂಗವಿಕಲ ಮಕ್ಕಳಿಗೆ ಶಿಕ್ಷಣದ ಜತೆಗೆ ಬದುಕು ರೂಪಿಸಿಕೊಳ್ಳಲು ಕೌಶಲ ನೀಡಬೇಕು. ಸರ್ಕಾರ ಅಂಗವಿಕಲರಿಗೆ ಶೇ 3ರಷ್ಟು ಮೀಸಲಾತಿ ನೀಡಿದೆ. ಇದರ ಪ್ರಯೋಜನ ಪಡೆಯಬೇಕು. ಸ್ಥಳೀಯ ಸಂಸ್ಥೆಗಳಲ್ಲಿ ಅಂಗವಿಕಲರಿಗಾಗಿ ಮೀಸಲಿಟ್ಟ ಅನುದಾನವನ್ನು ಅವರಿಗೆ ಖರ್ಚು ಮಾಡುವ ಹೃದಯವಂತಿಕೆ ಬೇಕು’ ಎಂದು ತಿಳಸಿದರು.

ADVERTISEMENT

‘ಅಂಗವಿಕಲರಲ್ಲಿ ಅನೇಕ ಕಲಾವಿದರಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರಿದ್ದಾರೆ. ಅಂತಹ ಸಾಧಕರ ಆದರ್ಶ ಪಾಲಿಸಬೇಕು. ತಾವು ಎಲ್ಲರಂತೆ ಬದುಕು ನಡೆಸಬಹುದು ಎಂಬ ವಿಶ್ವಾಸ ಮೂಡಬೇಕು’ ಎಂದು ಕಿವಿಮಾತು ಹೇಳಿದರು.

‘ದೀಪಾವಳಿ ಹೆಸರಿನಲ್ಲಿ ಪರಿಸರ ಮತ್ತು ಆರೋಗ್ಯಕ್ಕೆ ಮಾರಕವಾದ ಪಟಾಕಿ ಸಿಡಿಸಿ ಹಣ ವ್ಯಯ ಮಾಡುವ ಬದಲಿಗೆ ಇಂತಹ ಅಂಗವಿಕಲ ಮಕ್ಕಳಿಗೆ ನೆರವಾಗುವ ಅರ್ಥಪೂರ್ಣವಾಗಿ ಹಬ್ಬ ಆಚರಿಸಬೇಕು’ ಎಂದು ಸಲಹೆ ನೀಡಿದರು.

ಶಾಲೆ ಕಾರ್ಯದರ್ಶಿ ಕೆ.ಎಸ್.ಶಂಕರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.