ADVERTISEMENT

ಆತಂಕ ಪರಿಸ್ಥಿತಿ ನಿವಾರಣೆಗೆ ಚರ್ಚೆ ಅಗತ್ಯ

ಅಂಚೆ ನೌಕರರ ಸಮ್ಮೇಳನದಲ್ಲಿ ವಿ.ಆರ್.ಸುದರ್ಶನ್ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 5 ಜನವರಿ 2020, 11:03 IST
Last Updated 5 ಜನವರಿ 2020, 11:03 IST
ಕೋಲಾರದಲ್ಲಿ ಅಂಚೆ ನೌಕರರ ಸಾಹಿತ್ಯ ಬಳಗದಿಂದ ಭಾನುವಾರ ಹಮ್ಮಿಕೊಂಡಿದ್ದ ಅಂಚೆ ನೌಕರರ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.
ಕೋಲಾರದಲ್ಲಿ ಅಂಚೆ ನೌಕರರ ಸಾಹಿತ್ಯ ಬಳಗದಿಂದ ಭಾನುವಾರ ಹಮ್ಮಿಕೊಂಡಿದ್ದ ಅಂಚೆ ನೌಕರರ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.   

ಕೋಲಾರ: ‘ದೇಶದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರ ನಿವಾರಣೆಗೆ ಸಾಹಿತ್ಯ, ಜನರ ಮಧ್ಯೆ ಚರ್ಚೆಯಾಗಬೇಕು’ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಎಚ್ಚರಿಸಿದರು.

ರಾಜ್ಯ ಅಂಚೆ ನೌಕರರ ಸಾಹಿತ್ಯ ಬಳಗದಿಂದ ಇಲ್ಲಿನ ಟಿ.ಚನ್ನಯ್ಯ ರಂಗಮಂದಿರಲ್ಲಿ ಭಾನುವಾರ ನಡೆದ ಅಂಚೆ ನೌಕರರ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿ, ‘ಅಧಿಕಾರದಲ್ಲಿರುವವರು ಜನವಿರೋಧ ತೀರ್ಮಾನಗಳನ್ನು ತೆಗೆದುಕೊಂಡರೆ ಜನ ಸುಮ್ಮನಿರುವುದಿಲ್ಲ ಎಂದು ಸಮ್ಮೇಳನದ ಮೂಲಕ ಎಚ್ಚರಿಕೆ ನೀಡಬೇಕು’ ಎಂದು ಸಲಹೆ ನೀಡಿದರು.

‘ದೇಶದಲ್ಲಿ ಸಾಮಾಜಿಕವಾಗಿ, ರಾಜಕೀಯವಾಗಿ ಅತಂಕದ ವಾತಾವರಣ ಎದುರಾಗಿದೆ. ಸಾಹಿತ್ಯದಲ್ಲೂ ರಾಜಕಾರಣ, ವ್ಯವಸಾಯ, ಕೈಗಾರಿಕೆಗಳ ಬಗ್ಗೆ ಚರ್ಚೆಯಾಗಬೇಕು. ಸಾಹಿತ್ಯಕ್ಕೂ ಬದುಕಿಗೂ ಸಂಬಂಧವಿದೆ. ಅಧಿಕಾರಿದಲ್ಲಿರುವವರಿಗೆ ರಾಜಕಾರಣ ಎಷ್ಟು ಮುಖ್ಯವೊ, ಸಮಸ್ಯೆ ವಿರುದ್ಧ ಹೋರಾಟ ನಡೆಸುವುದು ಅಷ್ಟೇ ಮುಖ್ಯ’ ಎಂದರು.

ADVERTISEMENT

‘ಕಲೆ, ಸಾಹಿತ್ಯ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತುವಂತಾಗಬೇಕು, ಸರ್ಕಾರದ ಜವಾಬ್ದಾರಿ ಹೊಂದಿರುವವರ ತೀರ್ಮಾನದಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ. ಉದ್ವೇಗದಿಂದ ಮಾತನಾಡಿದರೆ ಸಮಸ್ಯೆ ತೀವ್ರಗೊಳ್ಳುತ್ತದೆ. ಇದರ ನಿವಾರಣೆಗೆ ಸಾಧಕ ಬಾಧಕಗಳ ಬಗ್ಗೆ ಚರ್ಚೆಯಾಗಬೇಕು’ ಎಂದು ಹೇಳಿದರು.

‘ಅಂಚೆ, ರೈಲ್ವೆ, ಏರ್ ಇಂಡಿಯಾ ಇಲಾಖೆಗಳಿಗೆ ದೊಡ್ಡ ಇತಿಹಾವಿದೆ, ಜನ ಸಾಮಾನ್ಯರ ಸ್ನೇಹಿತರಿದ್ದಂತೆ. ವಿಜ್ಞಾನ, ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಸಾಕಷ್ಟು ಬದಲಾವಣೆಗಳಾಗಿವೆ. ಬೇರೆ ಇಲಾಖೆಗಳಿಗೆ ವೊಲಿಕೆ ಮಾಡಿದರೆ ಈ ಇಲಾಖೆಗೆ ವಿರುದ್ಧ ದೂರುಗಳು ಕಡಿಮೆ. ಇಲಾಖೆಗೆ ಕೇಂದ್ರ ಸರ್ಕಾರ ಹೆಚ್ಚು ಉತ್ತೇಜನ ನೀಡಬೇಕು’ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಾನಂದ ಕೆಂಪರಾಜ್ ಮಾತನಾಡಿ, ‘ಅಂಚೆ ನೌಕರರು ಸಾಹಿತ್ಯ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶ್ಲಾಘನೀಯ’ ಎಂದರು.

‘ಅಂಚೆಗು ಸಾಹಿತ್ಯಕ್ಕೆ ಅವಿನಭಾವ ಸಂಬಂಧವಿದೆ. ಪರಿಷತ್ತಿನಿಂದ ಇದೇ ತಿಂಗಳು 16 ಮತ್ತು 17ರಂದು ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿದ್ದು, ಸಾಹಿತಿಗಳು, ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಕೋರಿದರು.

ಜಿಲ್ಲಾ ಪಿಯು ಉಪನ್ಯಾಸಕರ ವೇದಿಕೆ ಅಧ್ಯಕ್ಷ ಜೆ.ಜಿ.ನಾಗರಾಜ್, ‘ವಚನಗಳು 12ನೇ ಶತಮಾನದ ವಚನಕಾರರ ವಚನಗಳು ಸಮ ಸಮಾಜ ನಿರ್ಮಾಣ ಮಾಡುವುದರ ಜತೆಗೆ, ಎಚ್ಚರಿಸುವ ಕೆಲಸ ಮಾಡುತ್ತಿವೆ’ ಎಂದು ಅಭಿಪ್ರಾಯಪಟ್ಟರು.

'ವೈಚಾರಿಕ ಜತೆಗೆ ರೈತ, ಪ್ರಕೃತಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ವಚನದಲ್ಲಿ ಅಗಿದೆ. ಮಹಿಳಾ ದೌರ್ಜನ್ಯ ವಿರುದ್ಧ ಧ್ವನಿ ಎತ್ತು ಕೆಲಸ ವಚನಗಳಲ್ಲೂ ಕಾಣಬಹುದು’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಬಳಕದ ಜಿಲ್ಲಾ ಘಟಕದ ಅಧ್ಯಕ್ಷ ಪೋಸ್ಟ್ ನಾರಾಯಣಸ್ವಾಮಿ ಬರೆದಿರುವ ಜೈ ಹನು ಮನ ಆಧುನಿಕ ವಚನಗಳು ಪುಸ್ತಕ ಬಿಡುಗಡೆ ಮಾಡಲಾಯಿತು. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.

ಸಮ್ಮೇಳನಾಧ್ಯಕ್ಷ ಸಂದೇಶ್ ಮಹದೇವಪ್ಪ, ಸುಮಂಗಲಿ ಸೇವ ಆಶ್ರಮ ಅಧ್ಯಕ್ಷೆ ಎಸ್.ಜಿ.ಸುಶೀಲಮ್ಮ, ಸಾಹಿತ್ಯ ಬಳಗದ ರಾಜ್ಯ ಘಟಕದ ಅಧ್ಯಕ್ಷ ಎಚ್.ಸುಬ್ರಮಣಿ, ಜಿಲ್ಲಾ ಘಟಕದ ಅಧ್ಯಕ್ಷ ಪೋಸ್ಟ್ ನಾರಾಯಣಸ್ವಾಮಿ, ನಿರ್ದೇಶಕ ಮದನ್ ಪಟೇಲ್, ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ತ್ಯಾಗರಾಜ್, ಅಂಚೆ ಅಧೀಕ್ಷಕಿ ಭಾಗ್ಯಮ್ಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.