ADVERTISEMENT

ಅಧಿಕಾರಸ್ಥರ ವ್ಯಕ್ತಿ ಪೂಜೆ ಬೇಡ

ನಿವೃತ್ತ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ ಸಲಹೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2023, 5:40 IST
Last Updated 15 ಜನವರಿ 2023, 5:40 IST
ಮುಳಬಾಗಿಲು ನಗರದ ಅಮರ ಜ್ಯೋತಿ ವಿದ್ಯಾಸಂಸ್ಥೆ ಬಳಿ ನಡೆದ ಸಂಕ್ರಾಂತಿ ನೃತ್ಯ ಸಿರಿ ಕಾರ್ಯಕ್ರಮವನ್ನು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್‌. ಸಂತೋಷ್ ಹೆಗ್ಡೆ ಉದ್ಘಾಟಿಸಿದರು
ಮುಳಬಾಗಿಲು ನಗರದ ಅಮರ ಜ್ಯೋತಿ ವಿದ್ಯಾಸಂಸ್ಥೆ ಬಳಿ ನಡೆದ ಸಂಕ್ರಾಂತಿ ನೃತ್ಯ ಸಿರಿ ಕಾರ್ಯಕ್ರಮವನ್ನು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್‌. ಸಂತೋಷ್ ಹೆಗ್ಡೆ ಉದ್ಘಾಟಿಸಿದರು   

ಮುಳಬಾಗಿಲು: ‘ಹಿಂದೆ ಜನರು ಪ್ರಾಮಾಣಿಕರನ್ನು ಗುರುತಿಸಿ ಅಭಿನಂದಿಸುತ್ತಿದ್ದರು. ಈಗ ಶ್ರೀಮಂತರು ಮತ್ತು ಅಧಿಕಾರಸ್ಥರ ಹಿಂದೆ ಬಿದ್ದು ವ್ಯಕ್ತಿ ಪೂಜೆ ಮಾಡುತ್ತಿರುವುದು ದುಃಖದ ವಿಚಾರ’ ಎಂದು ನಿವೃತ್ತ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ ವಿಷಾದಿಸಿದರು.

ನಗರದ ಅಮರಜ್ಯೋತಿ ವಿದ್ಯಾಸಂಸ್ಥೆಯಿಂದ ಶನಿವಾರ ಏರ್ಪಡಿಸಿದ್ದ ಸಂಕ್ರಾಂತಿ ನೃತ್ಯ ಸಿರಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಹಿಂದೆ ಕಾರಣಾಂತರಗಳಿಂದ ಜೈಲಿಗೆ ಹೋಗಿ ಬರುವವರು, ಅವರ ಕುಟುಂಬವನ್ನು ಜನರು ಕೀಳಾಗಿ ನೋಡುತ್ತಿದ್ದರು. ಆದರೆ, ಈಗ ಜೈಲಿನಿಂದ ಬರುವವರಿಗೆ ಹಾರ ತುರಾಯಿ ಹಾಕಿ, ಜೈಕಾರ ಹಾಕಿ ಅಭಿನಂದಿಸುತ್ತಿದ್ದಾರೆ. ಇದಕ್ಕೆ ಹಣ, ಶ್ರೀಮಂತಿಕೆ ಮತ್ತು ಅಧಿಕಾರವೇ ಕಾರಣ ಎಂದು ತಿಳಿಸಿದರು.

ADVERTISEMENT

ಇಂದಿನ ಭ್ರಷ್ಟಾಚಾರ ಮತ್ತು ಅಪ್ರಾಮಾಣಿಕತೆಯಿಂದ ಕೂಡಿರುವ ಪರಿಸ್ಥಿತಿಯಲ್ಲಿ ಉತ್ತಮ ವಿದ್ಯೆ ನೀಡುವುದು ಕಷ್ಟದ ವಿಚಾರ. ಇಂತಹ ಸಮಯದಲ್ಲೂ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಬೇಕು. ಯುವಕರು ಇಂದಿನ ದುರಾಸೆ ಮತ್ತು ಅಪ್ರಾಮಾಣಿಕತೆಯ ಸಮಾಜವನ್ನು ಬದಲಿಸಲು ಗಟ್ಟಿಯಾಗಿ ನಿಲ್ಲಬೇಕು. ಮೌಲ್ಯಯುತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು
ಹೇಳಿದರು.

ಇಂದು ದೇಶ ದುರಾಸೆಯ ಹಿಂದೆ ಓಡುತ್ತಿದೆ. ಇದರಿಂದ ಮಾನವೀಯತೆ, ತೃಪ್ತಿಯನ್ನು ಮರೆತಿದೆ. ಹೀಗಾಗಿ ದುರಾಸೆಗೆ ಮದ್ದಿಲ್ಲ. ಆದ್ದರಿಂದ ಶಿಕ್ಷಕರು ಶಾಲಾ ಹಂತದಲ್ಲಿ ಮಕ್ಕಳಿಗೆ ನೈತಿಕ ಮೌಲ್ಯಗಳನ್ನು ಕಲಿಸಬೇಕು. ಶಾಂತಿ, ಸೌಹಾರ್ದ ಮತ್ತು ನೆಮ್ಮದಿ ರೂಢಿಸಿಕೊಳ್ಳುವುದನ್ನು ಕಲಿಯಬೇಕು. ಎಲ್ಲರೂ ಶ್ರೀಮಂತರಾಗಬೇಕು. ಆದರೆ, ಒಬ್ಬರನ್ನು ತುಳಿದೋ ಅಥವಾ ಇನ್ನೊಬ್ಬರನ್ನು ಮೋಸ ಮಾಡಿಯಲ್ಲ ಎಂದು ಹೇಳಿದರು.

ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಮೃದ್ಧಿ ಮಂಜುನಾಥ್ ಮಾತನಾಡಿ, ಸಮಾಜದಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬಹುದು. ಆದ್ದರಿಂದ ಎಲ್ಲರೂ ಗುಣಮಟ್ಟದ ಶಿಕ್ಷಣ ಪಡೆದು ಭವ್ಯ ಭಾರತ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಹೇಳಿದರು.

ರಾಜ್ಯ ವಕೀಲರ ಸಂಘದ ಮಾಜಿ ಅಧ್ಯಕ್ಷ ರಂಗನಾಥ್, ಬಿಇಒ ಗಂಗರಾಮಯ್ಯ, ವಿದ್ಯಾಸಂಸ್ಥೆಗಳ ಅಧ್ಯಕ್ಷ ಕಾಡೇನಹಳ್ಳಿ ನಾಗರಾಜ್, ಕಾರ್ಯದರ್ಶಿ ಅಶೋಕ್, ಪಿ.ಎಸ್. ವರದರಾಜಪ್ಪ, ಎಂ. ಗೊಲ್ಲಹಳ್ಳಿ ಪ್ರಭಾಕರ್, ರೆಸಾರ್ಟ್ ಚಂದ್ರಹಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.