ADVERTISEMENT

19ನೇ ಕುವೆಂಪು ನಾಟಕೋತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 15:56 IST
Last Updated 28 ಡಿಸೆಂಬರ್ 2019, 15:56 IST
ಕೋಲಾರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಶನಿವಾರ ನಡೆದ 19ನೇ ಕುವೆಂಪು ನಾಟಕೋತ್ಸವದ ಅಂಗವಾಗಿ ಓಹಿಲೇಶ ಲಕ್ಷ್ಮಣ ಕಲಾವಿದರ ತಂಡ ‘ಬೊಮ್ಮನಹಳ್ಳಿ ಕಿಂದರಿಜೋಗಿ’ ನಾಟಕ ಪ್ರದರ್ಶಿಸಿದರು.
ಕೋಲಾರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಶನಿವಾರ ನಡೆದ 19ನೇ ಕುವೆಂಪು ನಾಟಕೋತ್ಸವದ ಅಂಗವಾಗಿ ಓಹಿಲೇಶ ಲಕ್ಷ್ಮಣ ಕಲಾವಿದರ ತಂಡ ‘ಬೊಮ್ಮನಹಳ್ಳಿ ಕಿಂದರಿಜೋಗಿ’ ನಾಟಕ ಪ್ರದರ್ಶಿಸಿದರು.   

ಕೋಲಾರ: ಬೆಂಗಳೂರಿನ ರಂಗಕಹಳೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಸಹಯೋಗದಲ್ಲಿ ಇಲ್ಲಿನ ಟಿ.ಚನ್ನಯ್ಯ ರಂಗಮಂದಿರಲ್ಲಿ 19ನೇ ಕುವೆಂಪು ನಾಟಕೋತ್ಸವವು ಎಲ್ಲರ ಮನಸ್ಸನ್ನು ಮುಟ್ಟಿತು.

ನಾಟಕೋತ್ಸವ ಉದ್ಘಾಟಿಸಿದ ಸಾಹಿತಿ ಮಾರ್ಕಂಡಪುರಂ ಶ್ರೀನಿವಾಸ್ ಮಾತನಾಡಿ, ‘ಮನುಷ್ಯ ಆದರ್ಶ ಬದುಕನ್ನು ರೂಪಿಸಿಕೊಳ್ಳಲು ಕುವೆಂಪು ಅವರ ನಾಟಕಗಳು ಪೂರಕವಾಗಿವೆ. ಕುವೆಂಪು ಅವರ ನಿಜ ಜೀವನದ ಅನುಭವಗಳು ನಾಟಕಗಳಲ್ಲಿ ಕಾಣಬಹುದು’ ಎಂದು ಅಭಿಪ್ರಾಯಪಟ್ಟರು.

‘ಗಡಿ ಜಿಲ್ಲೆಯಲ್ಲಿ ಕನ್ನಡ ಭಾಷೆ, ಸಾಂಸ್ಕೃತಿ, ಸಾಹಿತ್ಯ ಉಳಿಸಲು ಸರ್ಕಾರಗಳು ಎಲ್ಲ ರೀತಿಯ ಸೌಲಭ್ಯಗಳನ್ನು ನೀಡುತ್ತಿದ್ದು, ಕನ್ನಡವನ್ನು ಉಳಿಸಿ ಬೆಳೆಸಲು ನಾಟಕೋತ್ಸವಗಳು ಪ್ರೇರಣೆಯಾಗಿವೆ. ತ್ರಿಭಾಷಾ ಗದ್ದಲಗಳ ನಡುವೆ ಭಾಷಾ ಬಾಂಧವ್ಯನ್ನು ಉಳಿಸಿಕೊಂಡು ಹೋಗುತ್ತಿರುವುದು ಜಿಲ್ಲೆ ಮಾದರಿಯಾಗಿದೆ’ ಎಂದರು.

ADVERTISEMENT

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗಾನಂದ ಕೆಂಪರಾಜ್ ಮಾತನಾಡಿ, ‘ವಿಶ್ವ ಮಾನವತದ ಕಲ್ಪನೆಯ ಜತೆಗೆ ಕನ್ನಡ ಪ್ರಜ್ಞೆಯನ್ನು ರೂಪಿಸಿದ ಕವಿ ಕುವೆಂಪು’ ಎಂದು ಬಣ್ಣಿಸಿದರು.

‘ನನಗೆ ಯಾವುದೇ ಜಾತಿ, ಧರ್ಮ ಇಲ್ಲ ಎಂದು ಎಲ್ಲರು ಸಮಾನರು ಎಂಬ ಪರಿಕಲ್ಪನೆ ಯುವಕರ ಮನಸ್ಸಿನಲ್ಲಿ ಮೂಡಿಬರಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ಕುವೆಂಪು ಅವರ ಮಾದರಿಯಲ್ಲಿ ವಿಶ್ವ ಮಾನವರಾಗಿ ರೂಪುಗೊಳ್ಳಲು ಪ್ರಯತ್ನಿಸಬೇಕು’ ಎಂದು ಸಲಹೆ ನೀಡಿದರು.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಿ.ಲಕ್ಷ್ಮಣ ನಿರ್ದೇಶನದ ಬೆಂಗಳೂರಿನ ರಂಗ ಕಹಳೆ ತಂಡದ ‘ಬೊಮ್ಮನಹಳ್ಳಿ ಕಿಂದರಿಜೋಗಿ’ ಮಕ್ಕಳ ನಾಟಕವು ಮಕ್ಕಳಿಂದ ಹಿಡಿದು ವೃದ್ಧರವರೆಗೂ ಯಥೇಚ್ಛ ಮನರಂಜನೆ ನೀಡಿತು.

ನಾಟಕದದ ಪಾತ್ರಧಾರಿ ಜೋಗಿಯಾಗಿ ಎಲ್ .ಓಹಿಲೇಶ್ ಮತ್ತು ಗೌಡನಾಗಿ ಲಿಖಿತ್, ಮೇಷ್ಟ್ರು ಅನಿಲ್ ಕುಮಾರ್, ರಾಮಶಾಸ್ತ್ರಿಯಾಗಿ ಶ್ರೀ ಮತ್ತು ಭಟ್ಟಶಾಸ್ತ್ರಿಯಾಗಿ ಚಂದ್ರ ಅಭಿನಯ ಹಾವ ಭಾವಗಳು ನಿಜಕ್ಕೂ ಅನುಕರಣೀಯವಾಗಿತ್ತು. ಬೆಳಕಿನ ಸಂಯೋಜನೆ, ರಂಗಸಜ್ಜಿಕೆ ಸರಳತೆ ಮತ್ತು ವಸ್ತ್ರ ವಿನ್ಯಾಸವು ನೋಡುಗರ ಗಮನಸೆಳೆಯಿತು.

ನಾಟಕೋತ್ಸವ ಸಮಿತಿ ಅಧ್ಯಕ್ಷ ಕೆ.ವಿ.ಶಂಕರಪ್ಪ, ಸರಕು ಮಾರಾಟ ಮತ್ತು ಖರೀದಿದಾರರ ಸಹಕಾರ ಸಂಘದ ರಾಜ್ಯ ನಿರ್ದೇಶಕ ವಿ.ಮುನಿರಾಜು, ನಗರಸಭೆ ಆಯುಕ್ತ ಶ್ರೀಕಾಂತ್, ಪ್ರಾಂಶುಪಾಲ ಚಿಕ್ಕದೇವೇಗೌಡ, ನಿವೃತ್ತ ಪ್ರಾಧ್ಯಾಪಕ ಪ್ರೊ.ಮುನಿರತ್ನಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.