ADVERTISEMENT

ವಿಡಿಯೋ ಸಂವಾದ: ಸೆ.19ಕ್ಕೆ ಇ-ಲೋಕ ಅದಾಲತ್

ಹೈಕೊರ್ಟ್ ನ್ಯಾಯಮೂರ್ತಿ ಅರವಿಂದ್‌ಕುಮಾರ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2020, 16:55 IST
Last Updated 28 ಆಗಸ್ಟ್ 2020, 16:55 IST
ಹೈಕೊರ್ಟ್ ನ್ಯಾಯಮೂರ್ತಿ ಅಧ್ಯಕ್ಷ ಅರವಿಂದ್‌ಕುಮಾರ್‌ ಅವರು ಶುಕ್ರವಾರ ನಡೆಸಿದ ವಿಡಿಯೋ ಸಂವಾದದಲ್ಲಿ ಕೋಲಾರ ಜಿಲ್ಲೆಯ ನ್ಯಾಯಾಧೀಶರು ಹಾಗೂ ವಕೀಲರು ಪಾಲ್ಗೊಂಡರು.
ಹೈಕೊರ್ಟ್ ನ್ಯಾಯಮೂರ್ತಿ ಅಧ್ಯಕ್ಷ ಅರವಿಂದ್‌ಕುಮಾರ್‌ ಅವರು ಶುಕ್ರವಾರ ನಡೆಸಿದ ವಿಡಿಯೋ ಸಂವಾದದಲ್ಲಿ ಕೋಲಾರ ಜಿಲ್ಲೆಯ ನ್ಯಾಯಾಧೀಶರು ಹಾಗೂ ವಕೀಲರು ಪಾಲ್ಗೊಂಡರು.   

ಕೋಲಾರ: ‘ರಾಜ್ಯದೆಲ್ಲೆಡೆ ಸೆ.19ರಂದು ಇ-ಲೋಕ ಅದಾಲತ್ ಹಮ್ಮಿಕೊಂಡಿದ್ದು, ಬಾಕಿಯಿರುವ ಪ್ರಕರಣಗಳಲ್ಲಿ ಆಯ್ಧ ಪ್ರಕರಣಗಳನ್ನು ಗುರುತಿಸಿ ಇತ್ಯರ್ಥಪಡಿಸಲಾಗುವುದು’ ಎಂದು ಹೈಕೊರ್ಟ್ ನ್ಯಾಯಮೂರ್ತಿ ಹಾಗೂ ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಅರವಿಂದ್‌ಕುಮಾರ್‌ ಹೇಳಿದರು.

ಬೆಂಗಳೂರಿನಿಂದ ಜಿಲ್ಲೆಯ ನ್ಯಾಯಾಧೀಶರು ಹಾಗೂ ವಕೀಲರ ಜತೆ ಶುಕ್ರವಾರ ವಿಡಿಯೋ ಸಂವಾದ ನಡೆಸಿದ ನ್ಯಾಯಮೂರ್ತಿಗಳು, ‘ಜಾತಿ, ಧರ್ಮದ ಭೇದ ಭಾವವಿಲ್ಲದೆ ಎಲ್ಲರಿಗೂ ನ್ಯಾಯ ಒದಗಿಸುವುದು ಇ-ಲೋಕ ಅದಾಲತ್‌ನ ಪ್ರಮುಖ ಉದ್ದೇಶ’ ಎಂದು ವಿವರಿಸಿದರು.

‘ವಿಮಾ ಕಂಪನಿಗಳು ಅಪಘಾತ ಪ್ರಕರಣಗಳಲ್ಲಿ ನೊಂದ ವ್ಯಕ್ತಿಗಳಿಗೆ ಪರಿಹಾರ ನೀಡಲು ವಿಳಂಬ ಮಾಡುತ್ತಿವೆ. ಈ ಬಗ್ಗೆ ವಿಮಾ ಕಂಪನಿಗಳ ವಕೀಲರು, ಡಿಜಿಎಂ ಮತ್ತು ಎಜಿಎಂಗಳನ್ನು ವಿಡಿಯೋ ಸಂವಾದದ ಮೂಲಕ ಸಂಪರ್ಕಿಸಿ ತ್ವರಿತವಾಗಿ ಪರಿಹಾರ ನೀಡುವಂತೆ ತಿಳಿಸಲಾಗಿದೆ. ಈ ಪ್ರಕರಣಗಳನ್ನು ಅದಾಲತ್‌ನಲ್ಲಿ ಪರಿಹರಿಸಲಾಗುವುದು’ ಎಂದರು.

ADVERTISEMENT

‘ಇ-ಲೋಕ ಅದಾಲತ್‌ನಲ್ಲಿ ಕಕ್ಷಿದಾರರು ಮನೆಯಿಂದ ಅಥವಾ ತಮ್ಮ ವಕೀಲರ ಕಚೇರಿಯಿಂದ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಪತ್ರಗಳನ್ನು ಅಪ್‌ಲೋಡ್‌ ಮಾಡಿ ವಿಮಾ ಕಂಪನಿಗಳಿಗೆ ಕಳುಹಿಸಬೇಕು. ವಿಮಾ ಕಂಪನಿಯವರು ದಾಖಲೆಪತ್ರ ಪರಿಶೀಲಿಸಿ ಪರಿಹಾರ ನೀಡುತ್ತಾರೆ’ ಎಂದು ವಿವರಿಸಿದರು.

‘ಹಳ್ಳಿಗಳಲ್ಲಿ ಇರುವವರು ಸ್ಮಾರ್ಟ್ ಪೋನ್ ಹಾಗೂ ಇಂಟರ್‌ನೆಟ್‌ ಸಮಸ್ಯೆಯಿದ್ದರೆ ದೂರವಾಣಿ ಕರೆ ಮೂಲಕ ಸಂಪರ್ಕಿಸಿ ಪರಿಹಾರ ಪಡೆಯಬಹುದು. ಬೆಂಗಳೂರು ನಗರ ಒಂದರಲ್ಲೇ ಸುಮಾರು 1 ಸಾವಿರ ಮೋಟಾರು ವಾಹನ ಪ್ರಕರಣಗಳಿದ್ದು, ಇವುಗಳನ್ನು ಇ–ಲೋಕ ಅದಾಲತ್ ಮೂಲಕ ಪರಿಹರಿಸಲಾಗುವುದು’ ಎಂದು ಹೇಳಿದರು.

ಕಕ್ಷಿದಾರರ ರಾಜಿ: ‘ಅಸಹಾಯಕರಿಗೆ ಹಾಗೂ ಸಮಾಜದ ದುರ್ಬಲ ವರ್ಗದವರಿಗೆ ನ್ಯಾಯ ಒದಗಿಸುವುದು ಇ–ಲೋಕ ಅದಾಲತ್‌ನ ಮುಖ್ಯ ಉದ್ದೇಶವಾಗಿದೆ. ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳನ್ನು ಅದಾಲತ್‌ನಲ್ಲಿ ಇತ್ಯರ್ಥಪಡಿಸುತ್ತೇವೆ. ಅದಾಲತ್‌ನಲ್ಲಿ ಎರಡೂ ಕಡೆಯ ಕಕ್ಷಿದಾರರ ಒಪ್ಪಿಗೆ ಪಡೆದು ರಾಜಿ ಮಾಡಿಸಲಾಗುವುದು’ ಎಂದು ಹೈಕೊರ್ಟ್ ನ್ಯಾಯಮೂರ್ತಿ ಅಲೋಕ್ ಅರಾಧ್ಯ ಮಾಹಿತಿ ನೀಡಿದರು.

‘ಕೋಲಾರ ಜಿಲ್ಲೆಯಲ್ಲಿ 39,181 ಪ್ರಕರಣಗಳ ಬಾಕಿಯಿದ್ದು, ಸೆ.19ರಂದು ಇ–ಲೋಕ ಅದಾಲತ್‌ನಲ್ಲಿ 1,678 ಪ್ರಕರಣ ರಾಜಿ ಮಾಡಿಸಲು ಗುರುತಿಸಲಾಗಿದೆ’ ಎಂದು ತಿಳಿಸಿದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಎಲ್.ರಘುನಾಥ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್‌.ಗಂಗಾಧರ್, ವಕೀಲ ಧನರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.