ಕೋಲಾರ: ಜಿಲ್ಲೆಯಲ್ಲಿ ಶಾಲಾ ಮಕ್ಕಳು ಮೊಟ್ಟೆಯಿಂದ ಸಿಗುವ ಪೌಷ್ಟಿಕಾಂಶದಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಸರ್ಕಾರವು ಶಾಲಾ ಮಕ್ಕಳಿಗೆ ಬಿಸಿಯೂಟದ ಜೊತೆಗೆ ಮೊಟ್ಟೆ ನೀಡುವ ಯೋಜನೆ ಜಾರಿಗೆ ತಂದಿದೆ. ಇಂತಹ ಯೋಜನೆಯು ಎಲ್ಲಾ ಶಾಲಾ ಮಕ್ಕಳಿಗೆ ತಲುಪುವ ರೀತಿ ಕಾರ್ಯನಿರ್ವಹಿಸುವುದು ತಮ್ಮೆಲ್ಲರ ಜವಾಬ್ದಾರಿ ಎಂದರು.
ಮೊಟ್ಟೆ ಮೆದುಳಿನ ಬೆಳವಣಿಗೆಗೆ ಸಹಕಾರಿ, ಉತ್ತಮ ಕೊಬ್ಬನ್ನು ಹೊಂದಿದೆ. ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ವಿಟಮಿನ್ ಇರುತ್ತದೆ. ಮೂಳೆ ಬೆಳವಣಿಗೆಗೂ ಸಹಕಾರಿ, ಕಣ್ಣಿನ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಒಂದು ಮೊಟ್ಟೆಯಲ್ಲಿ 6.3 ಗ್ರಾಂ ಪ್ರೊಟೀನ್ ಇರುತ್ತದೆ. 9 ಉಪಯುಕ್ತ ಅಮಿನೋ ಆಮ್ಲಗಳಿರುತ್ತವೆ. ಇಂತಹ ಪೌಷ್ಟಿಕಾಂಶ ಪಡೆದ ಮಕ್ಕಳ ದೈಹಿಕ ಬೆಳವಣಿಗೆ ಆಗಿ ಉತ್ತಮ ವಿದ್ಯಾಭ್ಯಾಸ ಪಡೆಯಲು ಸಹಕಾರಿ ಆಗುತ್ತದೆ ಎಂದು ಹೇಳಿದರು.
ಜಿಲ್ಲೆಯು ಗಡಿಭಾಗದಲ್ಲಿ ಇರುವುದರಿಂದ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ಶಾಲೆಗಳಿಗೆ ಆಗಾಗ್ಗೆ ಭೇಟಿ ನೀಡಿ ಮೊಟ್ಟೆಯಲ್ಲಿನ ಪೋಷಕಾಂಶದ ಮಕ್ಕಳಿಗೆ ಹಾಗೂ ಅವರ ಪೋಷಕರಿಗೆ ಅರಿವು ಮೂಡಿಸಬೇಕು. ಆ ಮೂಲಕ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯ ಲಾಭ ಎಲ್ಲಾ ಮಕ್ಕಳಿಗೆ ತಲುಪಬೇಕು ಎಂದು ಹೇಳಿದರು.
ಶಾಲೆಗಳಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿ ಹಾಗೂ ಮಕ್ಕಳ ದಾಖಲಾತಿಗಳ ಗಮನ ಹರಿಸಿ ಎಂದು ಸೂಚಿಸಿದರು.
ಗ್ರಾಮಗಳಲ್ಲಿ ಗ್ರಾಮ ಸಭೆ ನಡೆಯುವ ಸಂದರ್ಭದಲ್ಲಿ ಶಾಲಾ ಮಕ್ಕಳ ದಾಖಲಾತಿ ಬಗ್ಗೆ ಚರ್ಚಿಸಿ. ಶಾಲಾ ಕಟ್ಟಡಗಳ ಕಾಮಗಾರಿಗಳು ಇದ್ದಲ್ಲಿ ತಮ್ಮ ಗಮನಕ್ಕೆ ತರಬೇಕೆಂದು ತಿಳಿಸಿದರು. ಸಿಎಸ್‍ಆರ್ ಅನುದಾನದಲ್ಲಿ ಶಾಲೆಯ ಕಟ್ಟಡಗಳು ಕಾಮಗಾರಿ ಮಾಡಬೇಕಾದ ಸಂದರ್ಭದಲ್ಲಿ ತಮ್ಮ ಗಮನಕ್ಕೆ ತರಬೇಕು ಎಂದರು.
ಗ್ರಾಮ ಪಂಚಾಯತಿ ಮಟ್ಟದಲ್ಲಿ ಡಿಜಿಟಲ್ ಗ್ರಂಥಾಲಯ ಹಾಗೂ ಗ್ರಂಥಾಲಯಗಳ ಬಗ್ಗೆ ಶಾಲಾ ಮಕ್ಕಳಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಟಿ.ಕೆ.ರಮೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಯ ಉಪನಿರ್ದೇಶಕ ನಾರಾಯಣಸ್ವಾಮಿ, ಜಿಲ್ಲೆಯ ಎಲ್ಲಾ ಕ್ಷೇತ್ರದ ಶಿಕ್ಷಣಾಧಿಕಾರಿಗಳು, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಎಸ್.ಆರ್.ಕುಮಾರಸ್ವಾಮಿ, ಆಯುಷ್ ಇಲಾಖೆಯ ಉಪಪನಿರ್ದೇಶಕ ರಾಘವೇಂದ್ರ ಶೆಟ್ಟಿಗಾರ್ ಇದ್ದರು.
ಔಷಧಿ ಸಸಿಗಳ ಕೈತೋಟ ಬೆಳೆಸಿ
ಸಭೆಗೂ ಮುನ್ನ ಪೌಷ್ಟಿಕ ಕೈತೋಟ ಎಂಬ ಕಾರ್ಯಕ್ರಮದ ಮಾರ್ಗಸೂಚಿಯನ್ನು ಡಾ.ಪ್ರವೀಣ್ ಪಿ.ಬಾಗೇವಾಡಿ ನೀಡಿದರು. ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಶಾಲೆಗಳಲ್ಲಿ ಔಷಧೀಯ ಸಸಿಗಳನ್ನು ಬೆಳೆಸಲು ಮಾರ್ಗಸೂಚಿ ನೀಡಿದರು.
ಎಲ್ಲಾ ನೀರಿನ ವ್ಯವಸ್ಥೆ ಹಾಗೂ ಕಾಂಪೌಂಡ್ ವ್ಯವಸ್ಥೆ ಇರುವ ಎಲ್ಲಾ ಶಾಲೆಗಳಲ್ಲಿ ಬೆಳೆಸಿ ಎಂದು ಹೇಳಿದರು.
‘ಶಾಲಾ ಆವರಣಗಳಲ್ಲಿ ಆಯುಷ್ ಇಲಾಖೆಗೆ ಸಂಬಂಧಪಟ್ಟ ಔಷಧಿ ಸಸಿಗಳನ್ನು ನೀಡಲು ಸಂಬಂಧಪಟ್ಟ ಇಲಾಖೆಗಳು ತಮ್ಮ ತಾಲ್ಲೂಕು ಮಟ್ಟದಲ್ಲಿ ಸಭೆ ನಡೆಸಿ ಸೂಕ್ತ ಮಾರ್ಗದರ್ಶನದೊಂದಿಗೆ ಸಸಿ ಬೆಳೆಸಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.