ಕೋಲಾರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಆಶ್ರಯದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಕಾನೂನು ಅರಿವು - ನೆರವು ಕಾರ್ಯಕ್ರಮ ನಡೆಯಿತು.
ಚಾಲನೆ ನೀಡಿದ ಮಾತನಾಡಿದ ಪತ್ರಕರ್ತ ವಿ.ಮುನಿರಾಜು, ‘ಅವಿಭಕ್ತ ಕುಟುಂಬಗಳು ಮರೆಯಾಗುತ್ತಿರುವುದರಿಂದ ಮಕ್ಕಳು, ಯುವಕರಿಗೆ ಸೂಕ್ತ ಮಾರ್ಗದರ್ಶನ ಸಿಗುತ್ತಿಲ್ಲ. ಸಂಸ್ಕಾರ ಮರೆಯಾಗಿ ವೃದ್ಧಾಶ್ರಮಗಳು ಹೆಚ್ಚುತ್ತಿವೆ’ ಎಂದರು.
ಹಿರಿಯರು ನೀಡುತ್ತಿದ್ದ ಮಾರ್ಗದರ್ಶನ ಇಂದು ಇಲ್ಲವಾಗಿದೆ. ಹಿರಿಯರ ಕಡೆಗಣನೆ ನೋವಿನ ಸಂಗತಿಯಾಗಿದ್ದು, ಅವರ ಬದುಕು ಅತಂತ್ರವಾಗಿದೆ. ಸರ್ಕಾರ ಹಿರಿಯ ನಾಗರಿಕರಿಗೆ ನೀಡುತ್ತಿರುವ ₹ 1,200 ವೃದ್ಧಾಪ್ಯವೇತನ ಸಾಕಾಗುತ್ತಿಲ್ಲ. ಕನಿಷ್ಠ ₹ 5 ಸಾವಿರಕ್ಕಾದರೂ ಏರಿಸಬೇಕು ಎಂದು ಸಲಹೆ ನೀಡಿದರು.
ಕಾನೂನು ಉಪ ಅಭಿರಕ್ಷಕ ಹಾಗೂ ವಕೀಲ ಸತೀಶ್, ‘ಇಂದಿನ ಯುವಕರಿಗೆ ಗುರು, ಗುರಿ ಎರಡು ಇಲ್ಲವಾಗಿದೆ. ಶಿಕ್ಷಣ ಕೊಟ್ಟರೆ ಮಾತ್ರ ಪ್ರಯೋಜನವಿಲ್ಲ; ಜತೆಗೆ ಸಂಸ್ಕಾರವನ್ನೂ ಕಲಿಸುವ ಅಗತ್ಯವಿದೆ. ಇಂದು ಸುಶೀಕ್ಷಿತರೇ ಹೆಚ್ಚು ಅಪರಾಧ ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ’ ಎಂದರು.
ಹಿರಿಯ ನಾಗರಿಕರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ. ಅವರ ಹಕ್ಕುಗಳ ರಕ್ಷಣೆಗೆ ಕಾನೂನು ಸೇವೆಗಳ ಪ್ರಾಧಿಕಾರ ಕೆಲಸ ಮಾಡುತ್ತಿದೆ. ಮಕ್ಕಳಿಂದ ಶೋಷಣೆಗೆ ಒಳಗಾದ ಹಿರಿಯರ ನೆರವಿಗೆ ಬರುತ್ತದೆ, ಕಾನೂನು ಪ್ರಾಧಿಕಾರದ ಸಹಾಯವಾಣಿ 15100 ನೆರವು ಪಡೆಯಿರಿ ಎಂದು ಸಲಹೆ ನೀಡಿದರು.
ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಗೋವಿಂದಪ್ಪ ಮಾತನಾಡಿ, ಹಿರಿಯ ನಾಗರಿಕರ ದಿನಾಚರಣೆಗೆ ಜನಪ್ರತಿನಿಧಿಗಳು ಹಾಗೂ ರಾಜಕಾರಣಿಗಳ ನಿರ್ಲಕ್ಷ್ಯ ಖಂಡನೀಯ. ಹಿರಿಯ ನಾಗರಿಕರ ದಿನಾಚರಣೆಯನ್ನು ಸರ್ಕಾರವೇ ಆಚರಿಸಬೇಕು. ಸರ್ಕಾರದಿಂದ ನೆರವು ಸಿಗಬೇಕು ಎಂದರು.
ಹಿರಿಯ ನಾಗರಿಕರ ಇಲಾಖೆ ಜಿಲ್ಲಾ ಕಲ್ಯಾಣಾಧಿಕಾರಿ ಆರ್.ಮಂಜುಳಾ, ಇಲಾಖೆಯಲ್ಲಿ ಸಿಗುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕಿವಿಮಾತು ಹೇಳಿದರು. ತಾಲ್ಲೂಕು ಶಿಶು ಅಭಿವೃದ್ಧಿ ಅಧಿಕಾರಿ ರವಿಕುಮಾರ್ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕೊಕ್ಕೊ ತರಬೇತುದಾರ ಶ್ರೀಧರ್ ಪಿಳ್ಳೈ, ಸಮಾಜಸೇವೆ ಹಾಗೂ ಸಾಕ್ಷರತಾ ಸೇವೆಗಾಗಿ ಜನ್ನಘಟ್ಟ ಗ್ರಾಮದ ವಿ.ನಾರಾಯಣಪ್ಪ ಅವರನ್ನು ಸನ್ಮಾನಿಸಲಾಯಿತು.
ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಹಿರಿಯ ನಾಗರಿಕರಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ದಿವ್ಯ ಜ್ಯೋತಿ ವೃದ್ಧಾಶ್ರಮದ ಅಧ್ಯಕ್ಷ ನರಸಿಂಹಪ್ಪ, ಅಂತರಗಂಗೆ ಬುದ್ಧಿಮಾಂದ್ಯ ಮಕ್ಕಳ ಶಾಲೆ ಕಾರ್ಯದರ್ಶಿ ಕೆ.ಎಸ್.ಶಂಕರ್, ಜಯಲಕ್ಷ್ಮಮ್ಮ, ಗೋವಿಂದಪ್ಪ, ರಾಮಕೃಷ್ಣೇಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.