ADVERTISEMENT

ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ: ವೇಳಾಪಟ್ಟಿ ಪ್ರಕಟ

ಗುರುವಾರ ಅಧಿಸೂಚನೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 14:22 IST
Last Updated 30 ಸೆಪ್ಟೆಂಬರ್ 2020, 14:22 IST

ಕೋಲಾರ: ಕೇಂದ್ರ ಚುನಾವಣಾ ಆಯೋಗವು ರಾಜ್ಯ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆಯ ವೇಳಾಪಟ್ಟಿ ಹೊರಡಿಸಿದೆ.

ಅ.1ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಸಲು ಅ.8 ಕಡೆಯ ದಿನ. ಅ.9ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ ಎಂದು ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಬೆಂಗಳೂರು ಪ್ರಾದೇಶಿಕ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಮೇದುವಾರಿಕೆ ಹಿಂಪಡೆಯಲು ಅ.12 ಕಡೆಯ ದಿನವಾಗಿದ್ದು, ಅ.28ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಬಳಿಕ ನ.2ರಂದು ಮತ ಎಣಿಕೆ ಪ್ರಕ್ರಿಯೆ ನಡೆಯುತ್ತದೆ. ನ.5ಕ್ಕೆ ಒಟ್ಟಾರೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಚುನಾವಣೆಗೆ ಸ್ಪರ್ಧಿಸುವ ಆಭ್ಯರ್ಥಿಗಳ ವಯಸ್ಸು ಭಾರತೀಯ ಸಂವಿಧಾನದ ಅನುಚ್ಚೇದ 173(ಬಿ) ಅನ್ವಯ 30 ವರ್ಷಕ್ಕಿಂತ ಕಡಿಮೆ ಇರಬಾರದು. ಕರ್ನಾಟಕದ ಯಾವುದಾದರೂ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಾಗಿರಬೇಕು ಮತ್ತು ಅವರು ಕಾನೂನಿನ ಅಡಿ ಅನರ್ಹರಾಗಿರಬಾರದು ಎಂದು ಹೇಳಿದ್ದಾರೆ.

ಅಭ್ಯರ್ಥಿಯು ಚಾಲ್ತಿಯಲ್ಲಿರುವ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನೋಂದಾಯಿತವಾಗಿರುವ ಸಂಬಂಧ ಮತದಾರರ ನೋಂದಣಾಧಿಕಾರಿ, ಸಹಾಯಕ ಮತದಾರರ ನೋಂದಣಾಧಿಕಾರಿಯಿಂದ ಪಡೆದ ಮತದಾರರ ಪಟ್ಟಿಯ ದೃಢೀಕೃತ ನಕಲು ಪ್ರತಿ ಹಾಜರುಪಡಿಸಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನೋಂದಾಯಿತರಾಗಿರುವವರು ಮಾತ್ರ ಈ ಚುನಾವಣೆಯಲ್ಲಿ ಮತದಾರರಾಗಿರುತ್ತಾರೆ. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಅ.1ರಿಂದ ಅ.8ರವರೆಗೆ ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ ಅಥವಾ ಸಹಾಯಕ ಚುನಾವಣಾಧಿಕಾರಿ, ಪ್ರಾದೇಶಿಕ ಆಯುಕ್ತರ ಕಚೇರಿ, ಕೆ.ಎಚ್‌.ರಸ್ತೆ, ಶಾಂತಿನಗರ, ಬೆಂಗಳೂರು ವಿಳಾಸದಲ್ಲಿ ಸಲ್ಲಿಸಬಹುದು ಎಂದು ಮಾಹಿತಿ ನೀಡಿದ್ದಾರೆ.

ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ರಾಜಕೀಯ ಪಕ್ಷಗಳಿಂದ ಸ್ಪರ್ಧಿಸಲು ಇಚ್ಛಿಸಿದ ಸಂದರ್ಭದಲ್ಲಿ ಆಯೋಗ ನಿಗದಿಪಡಿಸಿ ಪ್ರಮಾಣಪತ್ರಗಳನ್ನು ಅ.8ರೊಳಗೆ ಸಲ್ಲಿಸಬೇಕು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.