ADVERTISEMENT

ಚುನಾವಣೆ: ಪ್ರಣಾಳಿಕೆ ಬಿಡುಗಡೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 16:20 IST
Last Updated 15 ಅಕ್ಟೋಬರ್ 2020, 16:20 IST

ಕೋಲಾರ: ‘ಆಗ್ನೇಯ ಪದವೀಧರರ ಕ್ಷೇತ್ರದಿಂದ ಈ ಹಿಂದೆ ವಿಧಾನ ಪರಿಷತ್‌ ಸದಸ್ಯರಾಗಿದ್ದವರ ಸಾಧನೆಗಳ ಪಟ್ಟಿ ಮತ್ತು ನಿರುದ್ಯೋಗಿ ಪದವೀಧರರ ಪರವಾಗಿ ಪಕ್ಷಗಳ ಪ್ರಣಾಳಿಕೆ ಬಿಡುಗಡೆ ಮಾಡಬೇಕು’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ನಂಜುಂಡಸ್ವಾಮಿ ಬಣ) ಜಿಲ್ಲಾ ಘಟಕದ ಅಧ್ಯಕ್ಷ ರಾಮುಶಿವಣ್ಣ ಒತ್ತಾಯಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕ್ಷೇತ್ರದಿಂದ ಈ ಹಿಂದೆ ಆಯ್ಕೆಯಾಗಿದ್ದ ಶಿವಯೋಗಿ ಸ್ವಾಮಿ, ಚೌಡರೆಡ್ಡಿ, ಶಿಕ್ಷಕರ ಕ್ಷೇತ್ರದಿಂದ ಗೆದ್ದಿದ್ದ ವೈ.ಎ.ನಾರಾಯಣಸ್ವಾಮಿ, ರಮೇಶ್‌ಬಾಬು ಅವರು ತಮ್ಮ ಅನುದಾನದಲ್ಲಿ ನಿರುದ್ಯೋಗಿ ಪದವೀಧರರಿಗೆ ಮಾಡಿರುವ ಕೆಲಸಗಳ ವಿವರ ನೀಡಬೇಕು’ ಎಂದರು.

‘ಪದವೀಧರರ ಮತದಿಂದ ಗೆದ್ದಿದ್ದವರು ಎಷ್ಟು ಮಂದಿ ನಿರುದ್ಯೋಗಿ ಪದವೀಧರರಿಗೆ ವಿದ್ಯಾಭ್ಯಾಸಕ್ಕೆ ತಕ್ಕಂತೆ ಉದ್ಯೋಗ ಕೊಡಿಸಿದ್ದಾರೆ. ಮತ ಹಾಕಿದ ಎಷ್ಟು ಪದವೀಧರರು ಸ್ಥಳೀಯ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಮತ ಹಾಕದ ಹೊರ ರಾಜ್ಯಗಳ ಪದವೀಧರರು ಸ್ಥಳೀಯ ಕೈಗಾರಿಕೆಗಳಲ್ಲಿ ಉದ್ಯೋಗ ಪಡೆದಿದ್ದಾರೆ ಎಂಬ ಮಾಹಿತಿ ಬಹಿರಂಗಪಡಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಸದನದಲ್ಲಿ ಚರ್ಚಿಸಿಲ್ಲ: ‘ಕ್ಷೇತ್ರದಿಂದ ಈ ಹಿಂದೆ ಗೆದ್ದಿದ್ದವರು ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸುವ ನಿರುದ್ಯೋಗಿ ಪದವೀಧರರಲ್ಲಿ ಆಯ್ಕೆಯಾಗದ ಅಭ್ಯರ್ಥಿಗಳಿಗಾಗಿ ಈವರೆಗೂ ನಿರುದ್ಯೋಗ ಭವಿಷ್ಯ ನಿಧಿ ಸ್ಥಾಪಿಸಿಲ್ಲ. ಪದವೀಧರ ನಿರುದ್ಯೋಗಿಗಳಿಗೆ ಯೋಜನೆ ರೂಪಿಸುವಂತೆ ಸದನದಲ್ಲಿ ಚರ್ಚಿಸಿಲ್ಲ’ ಎಂದು ಸಂಘಟನೆಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ ದೂರಿದರು.

‘ಪ್ರತಿ ಜಿಲ್ಲೆಯಲ್ಲಿ ಪದವೀಧರರ ಭವನ ನಿರ್ಮಿಸಬೇಕು. ಶೀಘ್ರವೇ ನಿರುದ್ಯೋಗ ಭವಿಷ್ಯ ನಿಧಿ ಸ್ಥಾಪಿಸಬೇಕು. ನಿರುದ್ಯೋಗಿ ಪದವೀಧರರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಬಡ್ಡಿರಹಿತ ಸಾಲ ಸೌಲಭ್ಯ ಕಲ್ಪಿಸಬೇಕು. ಉದ್ಯೋಗ ವಿನಿಮಯ ಕೇಂದ್ರದಲ್ಲಿ ಹೆಸರು ನೋಂದಾಯಿಸಿರುವ ಪದವೀಧರರಿಗೆ ಉದ್ಯೋಗ ಸಿಗುವವರೆಗೆ ತಿಂಗಳಿಗೆ ₹ 5 ಸಾವಿರ ಪಿಂಚಣಿ ನೀಡಬೇಕು’ ಎಂದು ಮನವಿ ಮಾಡಿದರು.

ಸಂಘಟನೆಯ ಜಿಲ್ಲಾ ಘಟಕದ ಉಪಾಧ್ಯಕ್ಷ ನಂದಕುಮಾರ್, ಕೋಲಾರ ತಾಲ್ಲೂಕು ಘಟಕದ ಅಧ್ಯಕ್ಷ ವೇಣುಗೋಪಾಲ್, ಮುಳಬಾಗಿಲು ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಾಥ್, ಶ್ರೀನಿವಾಸಪುರ ತಾಲ್ಲೂಕು ಘಟಕದ ಅಧ್ಯಕ್ಷ ಶಂಕರಪ್ಪ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.