ADVERTISEMENT

ಕಾಡಾನೆ ಹಿಂಡು ಪ್ರತ್ಯಕ್ಷ: ರೈತರ ಆತಂಕ

ಆನೆ ದಾಳಿ ತಡೆಗಟ್ಟಲು ಅರಣ್ಯ ಇಲಾಖೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2021, 5:04 IST
Last Updated 5 ಡಿಸೆಂಬರ್ 2021, 5:04 IST
ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಹೋಬಳಿಯ ಬಿಸಾನತ್ತಂ ಬಳಿ ಶುಕ್ರವಾರ ಸಂಜೆ ಕಂಡು ಬಂದ ಆನೆ ಹಿಂಡು
ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಹೋಬಳಿಯ ಬಿಸಾನತ್ತಂ ಬಳಿ ಶುಕ್ರವಾರ ಸಂಜೆ ಕಂಡು ಬಂದ ಆನೆ ಹಿಂಡು   

ಬಂಗಾರಪೇಟೆ: ತಾಲ್ಲೂಕಿನ ಗಡಿ ಭಾಗದ ಬಿಸಾನತ್ತಂ ಬಳಿ ಶುಕ್ರವಾರ ಸಂಜೆ ಆನೆ ಹಿಂಡು ಪ್ರತ್ಯಕ್ಷವಾಗಿದ್ದು, ಜನರಲ್ಲಿ ಆತಂಕ ಮೂಡಿದೆ.

ಎರಡು ತಿಂಗಳಿಂದ ಆನೆಗಳ ಸಂಚಾರ ಇಲ್ಲದೆ ಈ ಭಾಗದ ಜನರು ಸ್ವಲ್ಪ ನಿರಾಳವಾಗಿದ್ದರು. ಆದರೆ, ಇದ್ದಕ್ಕಿದ್ದಂತೆ ಕಾಮಸಮುದ್ರ ಹೋಬಳಿಯ ಬಿಸಾನತ್ತಂ ರೈಲ್ವೆ ನಿಲ್ದಾಣಕ್ಕೆ ಕೂಗಳತೆ ದೂರದಲ್ಲಿ ಆನೆ ಹಿಂಡು ಕಂಡುಬಂದಿರುವುದು ಸುತ್ತಲಿನ ಗ್ರಾಮಸ್ಥರ ನಿದ್ದೆಗೆಡಿಸಿದೆ.

ತಿಂಗಳಿಂದ ಸುರಿದ ಭಾರೀ ಮಳೆಗೆ ರಾಗಿ, ಟೊಮೆಟೊ, ಭತ್ತ, ಚೆಂಡು ಮತ್ತು ಸೇವಂತಿ ಹೂವು ಸೇರಿದಂತೆ ವಾಣಿಜ್ಯ ಬೆಳೆಗಳು ನೆಲಕಚ್ಚಿದ್ದವು. ಕಟಾವಿಗೆ ಬಂದಿದ್ದ
ಶೇ 60ರಷ್ಟು ಫಸಲು ಅಕಾಲಿಕ ಮಳೆಗೆ
ನಾಶವಾಯಿತು.

ADVERTISEMENT

ಒಂದೆಡೆ ಆನೆಗಳು ಗುಂಪು ಗುಂಪಾಗಿ ಸಂಚರಿಸುತ್ತಿರುವುದನ್ನು ವೀಕ್ಷಿಸಲು ಜನರು ದೂರದಲ್ಲಿ ಜಮಾಯಿಸಿದರೆ, ಮತ್ತೊಂದೆಡೆ ಉಳಿದಿರುವ ಬೆಳೆ ರಕ್ಷಣೆ ಮಾಡುವುದಾದರೂ ಹೇಗೆ ಎನ್ನುವ ಚಿಂತೆ ಅನ್ನದಾತರನ್ನು
ಕಾಡುತ್ತಿದೆ.

ನಿರಂತರವಾಗಿ ಸುರಿದ ಮಳೆಗೆ ಟೊಮೆಟೊ, ಕೋಸು ಸೇರಿದಂತೆ ಬಹುತೇಕ ವಾಣಿಜ್ಯ ಬೆಳೆ ಕೊಳೆತಿದೆ. ಉಳಿದಿರುವ ಬೆಳೆಗೆ ಉತ್ತಮ ಬೆಲೆ ಸಿಗುತ್ತಿದೆ. ಇಂತಹ ಸಂದರ್ಭದಲ್ಲಿ ಆನೆಗಳು ದಾಳಿ ನಡೆಸಿದರೆ ಮುಂದಿನ ಗತಿ ಏನು ಎನ್ನುವ ಪ್ರಶ್ನೆ ರೈತರನ್ನು ಕಾಡುತ್ತಿದೆ. ಕಾಡಾನೆ ಹಿಂಡು ತೋಟಗಳತ್ತ ಮುಖ ಮಾಡುವ ಮುನ್ನ ಹಿಮ್ಮೆಟ್ಟಿಸಬೇಕು ಎಂದು ಸುತ್ತಲಿನ ಗ್ರಾಮದ ರೈತರು ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.

‘ಶುಕ್ರವಾರ ಬಿಸಾನತ್ತಂ ಬಳಿ ಸುಮಾರು ಏಳು ಆನೆಗಳು ಕಂಡುಬಂದವು. ಅವುಗಳನ್ನು ಆಂಧ್ರಪ್ರದೇಶದ ಅರಣ್ಯ ಪ್ರದೇಶಕ್ಕೆ ಹಿಮ್ಮೆಟ್ಟಿಸಲಾಗಿದೆ’ ಎಂದು ದೋಣಿಮೊಡಗು ಪಂಚಾಯಿತಿ ಸದಸ್ಯ ಮುಷ್ಟ್ರಹಳ್ಳಿಯ ಎಂ.ಟಿ. ರಾಜಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.